Saturday, July 27, 2024

ಪುನೀತ್‌ ರಾಜ್‌ಕುಮಾರ್‌ಗೆ ಚಾಂಪಿಯನ್‌ ಪಟ್ಟ ಅರ್ಪಿಸಿದ ಹೇಮಂತ್‌ ಮುದ್ದಪ್ಪ

ಸೋಮಶೇಖರ್‌ ಪಡುಕರೆ

ಹೆಲ್ಮೆಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌, ಮನದಲ್ಲಿ ಪುನೀತ್‌ ರಾಜ್‌ಕುಮಾರ್‌, ಹೃದಯದಲ್ಲಿ ಪುನೀತ್‌ ರಾಜ್‌ಕುಮಾರ್‌ ಹೀಗೆ 9 ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆದ್ದರಿರುವ ಬೆಂಗಳೂರಿನ ಬೈಕ್‌ ರೇಸರ್‌ ಹೇಮಂತ್‌ ಮುದ್ದಪ್ಪ ಕಳೆದ ವಾರ ನಡೆದ ಚಾಂಪಿಯನ್ಷಿಪ್‌ನಲ್ಲಿ ತಾವು ಗೆದ್ದ ಪ್ರಶಸ್ತಿ ಎಲ್ಲವನ್ನೂ ನಮ್ಮನ್ನಗಲಿದ ಯುವ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗಿನ ಮೂಲದವರಾದ ಹೇಮಂತ್‌ ಮುದ್ದಪ್ಪ ಕಳೆದ ವಾರ ಹೊಸೂರಿನ ತನೇಜಾ ಏರೋಸ್ಪೇಸ್‌ ಮತ್ತು ಏವಿಯೇಷನ್‌ನಲ್ಲಿ ನಡೆದ ಆರನೇ ಆವೃತ್ತಿಯ ವ್ರೂಮ್ ಡ್ರ್ಯಾಗ್‌ ಮೀಟ್‌ ಚಾಂಪಿಯನ್‌ಷಿಪ್‌ನಲ್ಲಿ ತಾವು ಧರಿಸಿದ ಹೆಲ್ಮೆಟ್‌ಗೆ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ಅಳವಡಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಕೋವಿಡ್‌ ಕಾರಣ ಈ ರೇಸ್‌ ಕಳೆದೆರಡು ವರ್ಷ ನಡೆದಿರಲಿಲ್ಲ. ಈ ನಡುವೆ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನಗಲಿದರು. ಪುಣಿತ್‌ ಅವರ ಅಪ್ಪಟ ಅಭಿಮಾನಿಯಾಗಿರುವ ಹೇಮಂತ್‌ ರೇಸ್‌ನಲ್ಲಿ ವೈಯಕ್ತಿಕ ಏಳು ಪ್ರಶಸ್ತಿಗಳನ್ನು ಗೆದ್ದರು. ಆ ಚಾಂಪಿಯನ್‌ ಪಟ್ಟವನ್ನು ಪುನೀತ್‌ ರಾಜ್‌ಕುಮಾರ್‌ಗೆ ಅರ್ಪಿಸಿದರು.

ಮಂತ್ರಾ ರೇಸಿಂಗ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಹೇಮಂತ್‌, 851-1050 cc ವಿಭಾಗದಲ್ಲಿ ಪ್ರಥಮ, 1050-1650CC ಬೈಕ್‌ ವಿಭಾಗದಲ್ಲಿ ಪ್ರಥಮ, ಮಿತಿ ಇಲ್ಲದ ವಿಭಾಗದಲ್ಲಿ ಪ್ರಥಮ, ದಿನದ ಅತ್ಯಂತ ವೇಗದ ರೇಸರ್‌, ದಿನದ ಅತ್ಯಂತ ವೇಗದ ರೈಡರ್‌, ವಿದೇಶಿ ಬೈಕ್‌ಗಳ ವಿಭಾಗದಲ್ಲಿ ಅತ್ಯಂತ ವೇಗದ ರೈಡರ್‌, ಮಂತ್ರಾ ರೇಸಿಂಗ್‌ನ ವೇಗದ ಟ್ಯೂನರ್‌ ಹೀಗೆ ಸಾಧ್ಯತೆಯ ಎಲ್ಲ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

BMW S 1000RR ಮತ್ತು #SUZUKIHAYABUSA ಬೈಕ್‌ಗಳಲ್ಲಿ ಸ್ಪರ್ಧಿಸಿದ್ದ ಹೇಮಂತ್‌ ಮುದ್ದಪ್ಪ, ಪ್ರತಿಯೊಂದು ವಿಭಾಗದಲ್ಲೂ ಅಗ್ರ ಸ್ಥಾನ ಕಾಯ್ದುಕೊಂಡರು, “ಈ ಬಾರಿ ಮನೆಯಂಗಣದಲ್ಲಿ ನಡೆಯುತ್ತಿರುವ ರೇಸ್‌ನಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರವನ್ನು ಹೆಲ್ಮೆಟ್‌ನಲ್ಲಿ ಅಳವಡಿಸಿಕೊಂಡು, ಗೆದ್ದ ಎಲ್ಲ ಪ್ರಶಸ್ತಿಗಳನ್ನು ಅವರಿಗೆ ಅರ್ಪಿಸಬೇಕೆಂದು ಆರಂಭದಲ್ಲೇ ಯೋಚಿಸಿದ್ದೆ, ಅವರೊಬ್ಬ ಕೇವಲ ನಟ ಅಲ್ಲ, ಯುವಕರಿಗೆ ಸ್ಫೂರ್ತಿ. ಅವರ ಹೆಸರು ನೆನೆದಾಗಲೆಲ್ಲ ಹೊಸ ಉತ್ಸಾಹ, ಅವರು ನಮ್ಮಂಥ ಯುವಕರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ, ಅವರ ಅಗಲುವಿಕೆಯ ನೋವು ಒಂದೆಡೆ ಇದ್ದರೂ, ಅವರು ನಮ್ಮೊಂದಿಗೆ ಈಗಲೂ ಇದ್ದಾರೆ, ಎಂದಿದೆಗೂ ಇರುತ್ತಾರೆ ಎಂಬ ಭಾವ ಮತ್ತೊಂದೆಡೆ ಮನೆ ಮಾಡಿದೆ,…ಎಲ್ಲ ಟ್ರೋಫಿ ಅವರಿಗೆ ಅರ್ಪಣೆ,” ಎಂದು ಹೇಮಂತ್‌ ಮುದ್ದಪ್ಪ ಹೇಳಿದ್ದಾರೆ.

ಹೇಮಂತ್‌ ಅವರು ಧರಿಸಿದ ಹೆಲ್ಮೆಟ್‌ನಲ್ಲಿ ಒಂದೆಡೆ ಪವರ್‌ ಸ್ಟಾರ್‌ ಎಂದು ಬರೆದಿದ್ದರೆ, ಎದುರಿಗೆ ಮತ್ತೆ ಹುಟ್ಟಿಬನ್ನಿ ಅಪ್ಪು ಎಂಬ ಬರಹವಿದೆ. ಪುನೀತ್‌ ನಗು ಮತ್ತು ಪಾರಿವಾಳದ ಚಿತ್ರ ಎಲ್ಲವನ್ನೂ ಗಮನಿಸಿದಾಗ ಹೇಮಂತ್‌ ಅವರ ಅಪ್ಪು ಅಭಿಮಾನ ಬಣ್ಣಿಸಲದಳ ಎಂಬುದು ಸ್ಪಷ್ಟವಾಗುತ್ತದೆ. ತಿರುವನಂತಪುರಂನ ಕಲರ್‌ ಮಿ ಕ್ರೇಸಿ ಕಸ್ಟಮ್ಸ್‌ನ ಸ್ಥಾಪಕ ಮತ್ತು ನಿರ್ದೇಶಕ ನಿಹಾಸ್‌ ಸಲಾಹುದ್ದೀನ್‌ ಅವರು ಹೆಲ್ಮೆಟ್‌ಗೆ ಕಲೆಯ ಮೂಲಕ ಅಪ್ಪುನಿವ ಜೀವ ತುಂಬಿದ್ದಾರೆ.

ಸಾಹಸಿ ಹೇಮಂತ್‌: ಹೇಮಂತ್‌ ಮುದ್ದಪ್ಪ ಭಾರತ ಕಂಡ ಶ್ರೇಷ್ಠ ಬೈಕ್‌ ರೇಸರ್‌ಗಳಲ್ಲಿ ಒಬ್ಬರು. ಒಂಬತ್ತು ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆಲ್ಲುವುದಕ್ಕೆ ಮೊದಲು ಸಂಭವಿಸಿದ ರಸ್ತೆ ಅಪಘಾತದಲ್ಲಿ ತಿಂಗಳ ಕಾಲ ಕೋಮಾದಲ್ಲಿದ್ದವರು. ವೈದ್ಯರ ಸಲಹೆಯ ಪ್ರಕಾರ ಬೈಕ್‌ ಏರುವಂತಿರಲಿಲ್ಲ. ಆದರೆ ಸಾಹಸಿ ಹೇಮಂತ್‌ ವೈದ್ಯರ ಸಲಹೆಯನ್ನು ಲೆಕ್ಕಿಸದೆ, ವಿದೇಶಿ ಬೈಕ್‌ನಲ್ಲಿ ಸ್ಪರ್ಧೆಗಿಳಿದು ರಾಷ್ಟ್ರೀಯ ಚಾಂಪಿಯನ್‌ ಎನಿಸಿದರು.

Related Articles