Saturday, October 12, 2024

ವಿದೇಶಗಳಲ್ಲಿ ಕಬಡ್ಡಿ ಬೆಳಗಿದ ಕರ್ನಾಟಕದ ರವಿ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕ್ರಿಕೆಟ್‌ ಆಡಲು ಹೋದ ಅವರಿಗೆ ಹಳ್ಳಿಯವನೆಂದು ಬೆಂಗಳೂರಿನಲ್ಲಿ ಅವಕಾಶವೇ ನೀಡಲಿಲ್ಲ. ತನಗೆ ತನ್ನ ಮಣ್ಣಿನ ಆಟವೇ ಆಧಾರವೆಂದು ಅರಿತ ಅವರು ಕಬಡ್ಡಿಯಲ್ಲಿ ತೊಡಗಿಸಿಕೊಂಡರು, ಮುಂದೆ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದರು, ಕರ್ನಾಟಕ ತಂಡದ ಕೋಚ್‌ ಆಗಿ ಪ್ರತಿಭೆಗಳಿಗೆ ಅವಕಾಶ ನೀಡಿದರು, ಪ್ರೋ ಕಬಡ್ಡಿಯಲ್ಲಿ ಐದು ಋತುಗಳ ಕಾಲ ಯು ಮುಂಬಾ ತಂಡದ ಕೋಚ್‌ ಆಗಿದ್ದರು, ಎರಡು ಋತುಗಳಿಗೆ ಪುಣೇರಿ ಪಲ್ಟನ್‌ ತಂಡದ ಕೋಚ್‌ ಆಗಿದ್ದರು, ಈಗ ಪಾಟ್ನಾ ಪೈರೇಟ್ಸ್‌ ತಂಡದ ಪ್ರಧಾನ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ, ಮಲೇಷ್ಯಾ, ಥಾಯ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ಗೆ ಕಬಡ್ಡಿಯ ಪಾಠ ಮಾಡಿದರು… ಊರು ಕಾರವಾರ, ಹುಟ್ಟಿ ಬೆಳೆದದ್ದು ಬ್ಯಾಡಗಿ ..ಕ್ರೀಡಾ ಸಾಧನೆ ಮಾಡಿದ್ದು ಬೆಂಗಳೂರಿನಲ್ಲಿ…. ಇದು ಮೂರು ರಾಷ್ಟ್ರಗಳಿಗೆ ಕಬಡ್ಡಿಯ ಪಾಠ ಕಲಿಸಿದ,  ಭಾರತದ ಹಲವಾರು ಪ್ರತಿಭೆಗಳಿಗೆ ಆಸ್ರಯ ನೀಡಿದ ದೇಶದ ಶ್ರೇಷ್ಠ ಕಬಡ್ಡಿ ಕೋಚ್‌ ಕರ್ನಾಟಕದ ರವಿ ಶೆಟ್ಟಿ ಅವರ ಕ್ರೀಡಾ ಬದುಕಿನ ಹೆಜ್ಜೆಗಳು.

 

ಪಾಟ್ನಾ ಪೈರೇಟ್ಸ್‌ ತಂಡದ ಪ್ರಧಾನ ಕೋಚ್‌ ಆಗಿ ಆಯ್ಕೆಯಾದ ನಂತರ sportsmail ಜತೆ ಮಾತನಾಡುತ್ತ ರವಿ ಶೆಟ್ಟಿ ಅವರು ತಮ್ಮ ಕ್ರೀಡಾ ಬದುಕಿನ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದ್ದಾರೆ, ಅಲ್ಲಿ ಹಿಂದಿನ ಸಾಧನೆ ಇದೆ, ಭವಿಷ್ಯಕ್ಕೆ ಯೋಜನೆ ಇದೆ, ಕಬಡ್ಡಿಯನ್ನು ವಿಶ್ವವ್ಯಾಪಿಗೊಳಿಸುವ ವಿಶ್ವಾಸವಿದೆ.

ಕ್ರಿಕೆಟ್‌ ಚೆಂಡು ಮುಟ್ಟಲೂ ಅವಕಾಶ ನೀಡಲಿಲ್ಲ: ಬ್ಯಾಡಗಿಯಲ್ಲಿ ಐಟಿಐ ಮಾಡುವಾಗ ಕ್ರಿಕೆಟ್‌ ಮತ್ತು ಕಬಡ್ಡಿಯ ಬಗ್ಗೆ ಆಸಕ್ತಿ ವಹಿಸಿದ್ದ ರವಿ ಶೆಟ್ಟಿ ಬೆಂಗಳೂರಿಗೆ ಬಂದು ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಕನಸು ಕಂಡರು. ಅದಕ್ಕಾಗಿ ಸಂಜೆ ಕಾಲೇಜಿನಲ್ಲಿ ಡಿಪ್ಲೋಮಾಕ್ಕೆ ಸೇರಿಕೊಂಡು ಹಗಲಿನಲ್ಲಿ ಕ್ರಿಕೆಟ್‌ ಆಡುವ ಯೋಜನೆ ಹಾಕಿಕೊಂಡರು. ಬೆಂಗಳೂರು ಸಿಟಿ ಕ್ರಿಕೆಟರ್ಸ್‌ ಕ್ಲಬ್‌ನಲ್ಲಿ ಕ್ರಿಕೆಟ್‌ ಕಲಿಯಲು ಮುಂದಾದರು, ಆದರೆ ಬೆಂಗಳೂರಿನಲ್ಲಿ ಹಳ್ಳಿಯಿಂದ ಬಂದ ಆಟಗಾರರಿಗೆ ಯಾವ ರೀತಿಯ ಅವಕಾಶ ಸಿಗುತ್ತದೆ ಎಂಬುದನ್ನು ತಿಳಿಯಲು ರವಿ ಅವರಿಗೆ 18 ದಿನಗಳೇ ಬೇಕಾಯಿತು. ಅಷ್ಟು ದಿನ ಚೆಂಡು ಮುಟ್ಟಲೂ ಅವಕಾಶ ಸಿಗಲಿಲ್ಲ. ಇದರಿಂದ ಬೇಸತ್ತ ರವಿ ಅವರು ಮಣ್ಣಿನ ಕ್ರೀಡೆಯಾದ ಕಬಡ್ಡಿಯಲ್ಲಿ ತೊಡಗಿಸಿಕೊಂಡರು. 1982-87ರ ವರೆಗೆ ಕರ್ನಾಟಕ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದರು. 1998ರಲ್ಲಿ ಎನ್‌ಎಸ್‌ಐ ಮೂಲಕ ಕಬಡ್ಡಿ ಕೋಚ್‌ ಆಗಿ ತರಬೇತಿ ಪಡೆಯುತ್ತಾರೆ. 2001 ರಿಂದ 2018ರವೆರೆಗೂ ಕರ್ನಾಟಕದ ಕೋಚ್‌ ಆಗಿ ಕಾರ್ಯನಿರ್ವಹಿಸಿ ತಂತರ ಪ್ರೋ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ಕೋಚ್‌ ಆಗಿ ಸೇರಿಕೊಂಡರು. ಭಾರತೀಯ ರಕ್ಷಣಾ ಇಲಾಖೆಯಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದ ರವಿ ಶೆಟ್ಟಿ 2020ರಲ್ಲಿ ನಿವೃತ್ತಿಯಾದರು.

“ಕ್ರಿಕೆಟ್‌ನಲ್ಲಿ ಅವಕಾಶ ಸಿಗದಿದ್ದದೇ ಉತ್ತಮವಾಯಿತು. ಒಂದು ವೇಳೆ ಅವಕಾಶ ಸಿಕ್ಕಿರುತ್ತಿದ್ದರೆ ಈ ಅವಕಾಶಗಳು ಸಿಗುತ್ತಿರಲಿಲ್ಲ. ಎಲ್ಲೋ ಮೂಲೆಗುಂಪಾಗಿ ಇರುತ್ತಿದ್ದೆ. ಆದರೆ ಕಬಡ್ಡಿ ನನ್ನ ಬದುಕಿಗೆ ಎಲ್ಲವನ್ನೂ ನೀಡಿದೆ. ಇತರರಿಗೂ ಬದುಕನ್ನು ನೀಡುವ ಅವಕಾಶ ಕಲ್ಪಿಸಿದೆ,” ಎಂದು ರವಿ ಶೆಟ್ಟಿ ಅವರು ಅತ್ಯಂತ ಖುಷಿಯಿಂದ ನುಡಿದರು.

ಆಗ್ನೇಯ ಏಷ್ಯದ ರಾಷ್ಟ್ರಗಳಿಗೆ ಕಬಡ್ಡಿ ಪಾಠ: ಪ್ರೊ ಕಬಡ್ಡಿ ಲೀಗ್‌ನಲ್ಲಿ ಐದು ವರ್ಷಗಳ ಕಾಲ ಕೋಚ್‌ ಆಗಿ ಕಾರ್ಯನಿರ್ವಹಿಸಿದ ರವಿ ಶೆಟ್ಟಿಯವರ ತರಬೇತಿಯ ಕ್ರಮ ವಿದೇಶಗಳಿಗೂ ಹಬ್ಬಿತು. ಆಗ್ನೇಯ ಏಷ್ಯಾ ರಾಷ್ಟ್ರಗಳು ತಮ್ಮದೇ ಆದ ಕಬಡ್ಡಿ ಒಕ್ಕೂಟವನ್ನು ಸ್ಥಾಪಿಸಿಕೊಂಡು, ಕಬಡ್ಡಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ರವಿ ಶೆಟ್ಟಿ ಅವರನ್ನು ಆಹ್ವಾನಿಸಿದವು. ಕಬಡ್ಡಿ ಆಟದ ತಂತ್ರಗಾರಿಗೆ, ಅಂಕಣದ ಕ್ರಮ ಎಲ್ಲವನ್ನೂ ಚೆನ್ನಾಗಿ ಅರಿತಿರುವ ರವಿ ಶೆಟ್ಟಿ ಅವರ ತರಬೇತಿಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಬಡ್ಡಿ ಆಟ ಕೇವಲ ಒಂದು ದೇಶಕ್ಕೆ ಸೀಮಿತವಾಗಬಾರದು ಎನ್ನುವ ರವಿ ಶೆಟ್ಟಿ ಈ ಕ್ರೀಡೆ ಒಲಿಂಪಿಕ್ಸ್‌ಗೆ ಬರಬೇಕಾದರೆ ಇನ್ನೂ ಹೆಚ್ಚಿನ ರಾಷ್ಟ್ರಗಳಿಗೆ ಹಬ್ಬಬೇಕು ಎನ್ನುತ್ತಾರೆ. “ನಾವು ಕೊರಿಯಾ ಅಥವಾ ಜಪಾನ್‌ ತಂಡವನ್ನು ಸೋಲಿಸುವುದು ಜಯ ಮಾತ್ರ, ಆದರೆ ಕೊರಿಯಾ ಮತ್ತು ಜಪಾನ್‌ ಬಲಿಷ್ಠ ಭಾರತವನ್ನು ಸೋಲಿಸಿತೆಂದರೆ ಕಬಡ್ಡಿ ಜಗತ್ತಿನ ಬೇರೆ ರಾಷ್ಟ್ರಗಳಿಗೆ ಪಸರಿಸಿದೆ ಎಂದರ್ಥ,” ಎನ್ನುತ್ತಾರೆ ರವಿ ಶೆಟ್ಟಿ. ತಮ್ಮ ಗುರು, ಹಿರಿಯ ಕಬಡ್ಡಿ ಕೋಚ್‌ ಸುಂದರಂ ಅವರನ್ನು ಈ ಸಂದರ್ಭದಲ್ಲಿ ರವಿ ಶೆಟ್ಟಿ ನೆನಪಿಸಿಕೊಂಡರು. ಏಕೆಂದರೆ ಸುಂದರಂ ಕೂಡ ಜಪಾನ್‌ ದೇಶಕ್ಕೆ ಕಬಡ್ಡಿಯ ಆಟ ಕಲಿಸಿದವರು.

ನೆದರ್ಲೆಂಡ್ಸ್‌ಗೆ ಆನ್‌ಲೈನ್‌ನಲ್ಲೇ ತರಬೇತಿ: ಭಾರತದ ಕಬಡ್ಡಿ ಆಟವನ್ನು ಜಗತ್ತಿನ ಇತರ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಸಂತಸದ ವಿಷಯ. ಜಗತ್ತನ್ನು ಕೊರೋನಾ ಆವರಿಸಿದಾಗ ಕ್ರೀಡಾಲೋಕವೇ ಮೌನಕ್ಕೆ ಜಾರಿತ್ತು. ಆದರೆ ರವಿ ಶೆಟ್ಟಿ ಮಾತ್ರ ಒಂದು ದೇಶಕ್ಕೆ ಕಬಡ್ಡಿಯ ಪಾಠ ಮಾಡುತ್ತಿದ್ದರು. ಅದೂ ಆನ್‌ಲೈನ್‌ನಲ್ಲಿ. ನೆದರ್ಲೆಂಡ್‌ನ ಕಬಡ್ಡಿ ಆಸಕ್ತರಿಗೆ ರವಿ ಶೆಟ್ಟಿ ಅವರು ಆನ್‌ಲೈನ್‌ ಮೂಲಕ ಕಬಡ್ಡಿಯನ್ನು ಕಲಿಸಿದ್ದಾರೆ. ಅಲ್ಲಿ ಈಗ ಕಬಡ್ಡಿ ಆಟ ಜನಪ್ರಿಯವಾಗುತ್ತಿದೆ. ನೆದರ್ಲೆಂಡ್ಸ್‌ನವರು ಭಾರತದಿಂದಲೇ ಕಬಡ್ಡಿ ಮ್ಯಾಟ್‌, ಶೂ ತರಿಸಿಕೊಂಡು ಅಲ್ಲಿ ಈಗ ಕಬಡ್ಡಿ ಸಂಸ್ಥೆ ಕಟ್ಟಿಕೊಂಡು ಕಬಡ್ಡಿ ಆಡುತ್ತಿರುವುದು ಸಂತಸದ ವಿಷಯ. ಸುಮಾರು ಆರು ತಿಂಗಳುಗಳ ಕಾಲ ತರಬೇತಿ ನೀಡಿದ ರವಿ, ಕಬಡ್ಡಿಯ ಆರಂಭಿಕ ಹಂತಗಳು, ಅಂಕಣದ ಅಳತೆ, ಮೊದಲಾದ ಅಂಶಗಳನ್ನು ಕಲಿಸಿದ್ದಾರೆ. ಅಲ್ಲಿಯ ಕಬಡ್ಡಿ ಸಂಸ್ಥೆ ಅಧ್ಯಕ್ಷರು ರವಿಯವರ ಕಾರ್ಯವೈಖರಿಯನ್ನು ಮೆಚ್ಚಿ ತಮ್ಮ ದೇಶದ ರಾಷ್ಟ್ರೀಯ ಕೋಚ್‌ ಆಗಿ ಬರುವಂತೆ ಆಹ್ವಾನವನ್ನೂ ನೀಡಿದ್ದಾರೆ.

ಮಿನಿ ಕಬಡ್ಡಿ ಹುಟ್ಟು ಹಾಕಿದ ರವಿ: ಸಾಮಾನ್ಯ ಕಬಡ್ಡಿಗಿಂತ ಭಿನ್ನವಾದ ಕಬಡ್ಡಿಯ ಪ್ರಕಾರವನ್ನು ರವಿ ಥಾಯ್ಲೆಂಡಿನ ಕಬಡ್ಡಿ ಆಟಗಾರರಿಗೆ ಕಲಿಸಿದ್ದಾರೆ, ಇದು 14 ನಿಮಿಷಗಳ ಕಬಡ್ಡಿಯಾಟವಾಗಿರುತ್ತದೆ. ಮೂರು ಜನರ ತಂಡ, ಐದು ಜನರ ತಂಡವೆಂಬಂತೆ ಎರಡು ಪ್ರಕಾರದ ಕಬಡ್ಡಿಯನ್ನು ಹುಟ್ಟುಹಾಕಿದ್ದಾರೆ. ಸಾಮಾನ್ಯ ಕಬಡ್ಡಿಯಲ್ಲಿ 40 ನಿಮಿಷವಿದ್ದರೆ ಇಲ್ಲಿ ಕೇವಲ 14 ನಿಮಿಷಗಳ ಆಟವಿರುತ್ತದೆ, ಇಲ್ಲಿ ಕೋರ್ಟ್‌ ಕೂಡ ಚಿಕ್ಕದಾಗಿರುತ್ತದೆ. ನಿಯಮದಲ್ಲೂ ಬದಲಾವಣೆ ಇರುತ್ತದೆ. ಇದರಿಂದ ವೈಯಕ್ತಿಕ ಕೌಶಲ್ಯ ಮತ್ತು ರೈಡಿಂಗ್‌ ಕೌಶಲ್ಯ ಮತ್ತು ಆಟದ ಇತರ ಕೌಶಲ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎನ್ನುತ್ತಾರೆ ರವಿ. “ಕ್ರಿಕೆಟ್‌ನಲ್ಲಿ ಟೆಸ್ಟ್‌ ನಂತರ ಏಕದಿನ, ಟಿ20, ಟಿ10 ಬಂದಿರುವಂತೆ ಕಬಡ್ಡಿಯಲ್ಲೂ ಈ ಮಾದರಿ ಅಳವಡಿಸಬಹುದು. ಭಾರತಕ್ಕೆ ಇನ್ನೂ ಈ ಮಾದರಿ ಪ್ರವೇಶವಾಗಿಲ್ಲ. ಥಾಯ್ಲೆಂಡ್‌ನವರು ಈ ಕ್ರಮವನ್ನು ಆಳವಡಿಸಿಕೊಂಡು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ಗೆ ಅವಕಾಶ ಕೋರಿ ಮನವಿ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಬಹುದು,” ಎನ್ನುತ್ತಾರೆ ರವಿ ಶೆಟ್ಟಿ.

2012ರಲ್ಲಿ ಮಲೇಷ್ಯಾದ ರಾಷ್ಟ್ರೀಯ ಮಹಿಳಾ ತಂಡಕ್ಕೆ ಕೋಚ್‌ ಆಗಿ ರವಿ ಅವರು ಕಾರ್ಯನಿರ್ವಹಿಸಿದ್ದರು. ಆಗ ಅಲ್ಲಿಯ ಕ್ರೀಡಾ ಸಚಿವರು ಅಲ್ಪ ಅವಧಿಯ ಹಾಗೂ ಕಡಿಮೆ ಆಟಗಾರರಿರುವ ಮಾದರಿಯೊಂದನ್ನು ಹುಟ್ಟು ಹಾಕಿ ಎಂದು ಹೇಳಿದಾಗ ರವಿ ಈ ಮಾದರಿಯನ್ನು ತಯಾರು ಮಾಡಿದರು.” ಮಲೇಷ್ಯಾ ಈ ಚುಟುಕು ಮಾದರಿಯ ಕಬಡ್ಡಿಯನ್ನು ಮೆಚ್ಚಿಕೊಂಡಿದೆ. ಅವರು ರಾಷ್ಟ್ರೀಯ ಅಧಿಕೃತ ಕ್ರೀಡೆಗಳ ಪಟ್ಟಿಯಲ್ಲಿ ಈ ಆಟವನ್ನು ಸೇರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ..” ಎಂದು ರವಿ ತಿಳಿಸಿದರು.

ಕಬಡ್ಡಿಯಲ್ಲಿ ಎಲ್ಲ ಕ್ರೀಡೆಗಳೂ ಸೇರಿವೆ: ಕುಸ್ತಿ, ಹೈಜಂಪ್‌, ಲಾಂಗ್‌ಜಂಪ್‌, ಕಿಕ್‌,  ಫೆನ್ಸಿಂಗ್‌, ಬಾಕ್ಸಿಂಗ್‌, ಚೆಸ್‌, ರಗ್ಬಿ ಹೀಗೆ ಒಲಿಂಪಿಕ್ಸ್‌ನಲ್ಲಿರುವ ಹೆಚ್ಚಿನ ಕ್ರೀಡೆಗಳು ಕಬಡ್ಡಿಯಲ್ಲಿ ಸೇರಿವೆ. ಇದು ಈ ಮಣ್ಣಿನ ಆಟ, ಈ ಕ್ರೀಡೆಯನ್ನು ಒಲಿಂಪಿಕ್ಸ್‌ಗೆ ಸೇರಿಸಬೇಕು, ಅದಕ್ಕಾಗಿ ಇನ್ನೂ ಹೆಚ್ಚಿನ ರಾಷ್ಟ್ರಗಳಿಗೆ ಈ ಕ್ರೀಡೆ ಹಬ್ಬಬೇಕು. ಮುದೊಂದು ದಿನ ಕ್ರಿಕೆಟ್‌ ಆಟವನ್ನು ಹಿಂದಿಕ್ಕಿ ಜನಪ್ರಿಯಗೊಳ್ಳುವ ಸಾಮರ್ಥ್ಯ ಕಬಡ್ಡಿಗೆ ಇದೆ ಎನ್ನುತ್ತಾರೆ ರವಿ ಶೆಟ್ಟಿ.

ಇಂಥ ಸಾಧಕರನ್ನು ಸರಕಾರ ಗುರುತಿಸಬೇಕು: ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕ್ರೀಡಾ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸುವಾಗ ರವಿ ಶೆಟ್ಟಿ ಅವರಂಥ ಸಾಧಕರನ್ನು ಗುರುತಿಸಬೇಕು. ಕಬಡ್ಡಿ ಕ್ರೀಡೆಯ ಬಗ್ಗೆ ಅರಿವಿರುವವರು ಆಯ್ಕೆ ಸಮಿತಿಯಲ್ಲಿರಬೇಕು. ಭಾರತದ ನೆಲೆದ ಕ್ರೀಡೆಯನ್ನು ವಿದೇಶಗಳ ನೆಲಕ್ಕೆ ಕೊಂಡೊಯ್ಯವು ಕೆಲಸ ಮಾಡಿರುವುದು ಗಮನಾರ್ಹ. ಕ್ರೀಡಾ ಇಲಾಖೆಗಳು ಪ್ರಭಾವಗಳಿಗೆ ಬೆಲೆ ಕೊಡದೆ ಸಾಧನೆಗೆ ಮಾತ್ರ ಬೆಲೆ ಕೊಡುವುದಾದರೆ ರವಿ ಶೆಟ್ಟಿಯವರಂಥ ಸಾಧಕರಿಗೆ ಸರಕಾರದ ಪ್ರಶಸ್ತಿ, ಗೌರವ ದಕ್ಕುವುದು ಕಷ್ಟವಲ್ಲ.

Related Articles