Thursday, March 28, 2024

ರಾಷ್ಟ್ರೀಯ ಕಬಡ್ಡಿ: ಹರಿಯಾಣಕ್ಕೆ ಸುಲಭ ಜಯ, ಇಂದು ಕರ್ನಾಟಕದ ಫೈಟ್‌

ಚಾರ್ಕಿ ದಾದ್ರಿ (ಹರಿಯಾಣ): ಇಲ್ಲಿ ನಡೆಯುತ್ತಿರುವ 69ನೇ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಹರಿಯಾಣ ತಂಡ ದುರ್ಬಲ ಬಿಎಸ್‌ಎನ್‌ಎಲ್‌ ವಿರುದ್ಧ 58-5 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿ ಶುಭಾರಂಭ ಕಂಡಿದೆ.

ರೋಹಿರ್‌ ಗುಲಿಯಾ ಅವರ 10 ಅಂಕಗಳ ಸಾಧನೆಯ ನೆರವಿನಿಂದ ಇಂಡಿಯನ್‌ ರೈಲ್ವೇಸ್‌ ತಂಡ ಒಡಿಶಾ ವಿರುದ್ಧ 51-19 ಅಂತರದಲ್ಲಿ ಜಯ ಗಳಿಸಿತು. ವಿದರ್ಭಾ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ 60-31 ಅಂತರದಲ್ಲಿ ಜಯ ಗಳಿಸಿತು.

ಕಳೆದ ಬಾರಿ ಫೈನಲ್‌ ಹಂತ ತಲುಪಿದ್ದ ಸರ್ವಿಸಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಸ್ಸಾಂ ಯಶಸ್ಸು ಕಾಣುವಲ್ಲಿ ವಿಫಲವಾಗಿ 17-55 ಅಂತರದಲ್ಲಿ ಸೋಲೊಪ್ಪಿಕೊಂಡಿತು. ಕುಣಾಲ್‌ ಮೆಹ್ತಾ ಅವರ 11ಅಂಕಗಳ ನೆರವಿನಿಂದ ಹಿಮಾಚಲ ಪ್ರದೇಶ ತಂಡ ಜಮ್ಮು ಮತ್ತು ಕಾಶ್ಮೀರದ ವಿರುದ್ಧ 46-23 ಅಂತರದಲ್ಲಿ ಜಯ ಸಾಧಿಸಿತು. ಆಲ್ರೌಂಡ್‌ ಪ್ರದರ್ಶನ ತೋರಿದ ಮಹಾರಾಷ್ಟ್ರ ತಂಡ ತ್ರಿಪುರಾ ವಿರುದ್ಧ 69-20 ಅಂತರದಲ್ಲಿ ಜಯ ಗಳಿಸಿತು.  ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಚಂಡೀಗಢ 51-50 ಅಂತರದಲ್ಲಿ ಪಂಜಾಬ್‌ಗೆ ಸೋಲುಣಿಸಿತು. ಉತ್ತರ ಪ್ರದೇಶ ತಂಡವು ಮಧ್ಯಪ್ರದೇಶದ ವಿರುದ್ಧ 63-40 ಅಂತರದಲ್ಲಿ ಜಯ ಗಳಿಸಿತು. ಗೋವಾ ತಂಡವು 48-29 ಅಂತರದಲ್ಲಿ ಜಯ ಗಳಿಸುವುದರೊಂದಿಗೆ ವಿದರ್ಭ ದಿನದ ಎರಡನೇ ಆಘಾತ ಅನುಭವಿಸಿತು. ಡೆಲ್ಲಿ ತಂಡ ಅಸ್ಸಾಂ ವಿರುದ್ಧ 24-11 ಅಂತರದಲ್ಲಿ ಜಯದ ಖಾತೆ ತೆರೆಯಿತು.

ಕರ್ನಾಟಕ ತಂಡಕ್ಕೆ ಪ್ರಶಾಂತ್‌ ರೈ ನಾಯಕ: ಎರಡನೇ ದಿನದಲ್ಲಿ ಅಂಗಣಕ್ಕಿಳಿಯಲಿರುವ ಕರ್ನಾಟಕ ತಂಡದ ನಾಯಕತ್ವವನ್ನು ಪ್ರೋ ಕಬಡ್ಡಿಯ ಸ್ಟಾರ್‌ ಆಟಗಾರ ಪ್ರಶಾಂತ್‌ ರೈ ವಹಿಸಲಿದ್ದಾರೆ. ಪ್ರೋ ಕಬಡ್ಡಿಯ ಇನ್ನೋರ್ವ ಸ್ಟಾರ್‌ ಆಟಗಾರ ಸುಖೇಶ್‌ ಹೆಗ್ಡೆ ಕರ್ನಾಟಕ ತಂಡದ ಬೆನ್ನೆಲುಬು. ರಕ್ಷಿತ್‌ ಎಸ್‌, ಸಚಿನ್‌ ವಿಟ್ಠಲ, ಅಭಿಷೇಕ್‌ ಎನ್‌., ನರೇಂದ್ರ ಕುಮಾರ್‌ ಎ, ರತನ್‌ ಕೆ.ಎ., ಬಿ.ವೈ ಸೋಮೇಶ್ವರ ದರ್ಶನ್‌, ಅರ್ಮುಗಂ ಎಂ, ಸಚಿನ್‌ ಪೂವಯ್ಯ, ಮೊಹಮ್ಮದ್‌ ಅಫ್ರೀದ್‌, ರಾಖೇಶ್‌ ಗೌಡ ಕೆ.ಎ. ತಂಡದ ಇತರ ಆಟಗಾರರು.

ಕರ್ನಾಟಕ ಶುಕ್ರವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಬಿಎಸ್‌ಎನ್‌ಎಲ್‌ ಹಾಗೂ ಎರಡನೇ ಪಂದ್ಯದಲ್ಲಿ ಪಶ್ಚಿಮ ಬಂಗಾಳವನ್ನು ಎದುರಿಸಲಿದೆ.

ತಂಡದ ಮ್ಯಾನೇಜರ್‌ ಆಗಿ ಮಾಜಿ ಅಂತಾರಾಷ್ಟ್ರೀಯ ಆಟಗಾರ, ಅರ್ಜುನ ಪ್ರಶಸ್ತಿ ವಿಜೇತ ಡಾ. ಸಿ.ಹೊನ್ನಪ್ಪ ಗೌಡ ಅವರು ಕಾರ್ಯನಿರ್ವಹಿಸಲಿದ್ದು, ಮೊಹಮ್ಮದ್‌ ಇಸ್ಮಾಯಿಲ್‌ ಲತೀಪ್‌ ತಂಡದ ಕೋಚ್‌ ಆಗಿರುತ್ತಾರೆ.

Related Articles