Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕಬಡ್ಡಿ ಗುರು ರವಿ ಶೆಟ್ಟಿಗೆ ಕೊನೆಗೂ ದಕ್ಕಿತು ರಾಜ್ಯ ಸರಕಾರದ ಜೀವಮಾನ ಸಾಧನಾ ಪ್ರಶಸ್ತಿ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಬಡ್ಡಿ ಆಟಗಾರರಾಗಿ, ದೇಶ ವಿದೇಶಗಳಲ್ಲಿ ಕಬಡ್ಡಿ ಗುರುವಾಗಿ, ರಕ್ಷಣಾ ಇಲಾಖೆಯಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದ, ಪ್ರಸಕ್ತ ಪ್ರೋ ಕಬಡ್ಡಿ ಲೀಗ್‌ನಲ್ಲಿ ಪಾಟ್ನಾ ಪೈರೇಟ್ಸ್‌ನ ಪ್ರಧಾನ ಕೋಚ್‌ ಆಗಿರುವ ಕರ್ನಾಟಕದ ಶ್ರೇಷ್ಠ ಕ್ರೀಡಾ ಸಾಧಕ ರವಿ ಶೆಟ್ಟಿ ಅವರಿಗೆ ಕೊನೆಗೂ ರಾಜ್ಯ ಸರಕಾರ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಶಸ್ತಿಯ ಗೌರವಕ್ಕೆ ಪಾತ್ರಾರಾಗವುದು ಮತ್ತು ಪ್ರಶಸ್ತಿ ಹೊಡೆದುಕೊಳ್ಳುವುದು ಎಂಬ ಎರಡು ಪ್ರಕಾರಗಳಿವೆ. ಅನರ್ಹರು ಪ್ರಶಸ್ತಿ ಹೊಡೆದುಕೊಂಡ ನಂತರ ಅರ್ಹರಿಗೆ ಪ್ರಶಸ್ತಿ ಸಿಗುವುದು ಇಂದಿನ ಪರಿಸ್ಥಿತಿಯಾಗಿದೆ. ಕಳೆದ ವರ್ಷವೇ ರವಿ ಶೆಟ್ಟಿ ಅವರಿಗೆ ಈ ಪ್ರಶಸ್ತಿ ನೀಡು ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಆದರೆ ಆಯ್ಕೆ ಸಮಿತಿಯ ಕರ್ತವ್ಯಕ್ಕೆ ಬೆಲೆ ಕೊಡದೆ ಪ್ರಭಾವಗಳಿಗೆ ಬೆಲೆ ಕೊಟ್ಟ ಕಾರಣ ಸಾಧರಕರಲ್ಲೇ ಅತಿ ಹೆಚ್ಚು ಅಂಕ ಅಂದರೆ 9700 ಅಂಕ ಗಳಿಸಿದ್ದ ರವಿ ಶೆಟ್ಟಿಯನ್ನು ಪ್ರಶಸ್ತಿಯಿಂದ ಕೈ ಬಿಡಲಾಗಿತ್ತು. ಆದರೆ ಈ ಬಾರಿ 11,000ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ರವಿ ಶೆಟ್ಟಿ ಅವರು ಘನತೆಯೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ರವಿಯ ಪ್ರಕಾಶಕ್ಕೆ ಪ್ರಯೋಜನಕ್ಕೆ ಬಾರದ ಶುಶ್ಕ ಮೋಡಗಳು ತಡೆಯೊಡ್ಡ ಬಹುದು, ಆದರೆ ಅವುಗಳು ಬದಿ ಸರಿದಂತೆ ರವಿಯ ಪ್ರಕಾಶ ಬೆಳಗಿಯೇ ಬೆಳಗುತ್ತದೆ ಎಂಬುದಕ್ಕೆ ಕಬಡ್ಡಿ ಗುರು ರವಿ ಶೆಟ್ಟಿ ನಿದರ್ಶನ.

ಕಬಡ್ಡಿಯಲ್ಲಿ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದರು, ಕರ್ನಾಟಕ ತಂಡದ ಕೋಚ್‌ ಆಗಿ ಪ್ರತಿಭೆಗಳಿಗೆ ಅವಕಾಶ ನೀಡಿದರು, ಪ್ರೋ ಕಬಡ್ಡಿಯಲ್ಲಿ ಐದು ಋತುಗಳ ಕಾಲ ಯು ಮುಂಬಾ ತಂಡದ ಕೋಚ್‌ ಆಗಿದ್ದರು, ಎರಡು ಋತುಗಳಿಗೆ ಪುಣೇರಿ ಪಲ್ಟನ್‌ ತಂಡದ ಕೋಚ್‌ ಆಗಿದ್ದರು, ಈಗ ಪಾಟ್ನಾ ಪೈರೇಟ್ಸ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಮಲೇಷ್ಯಾ, ಥಾಯ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ಗೆ ಕಬಡ್ಡಿಯ ಪಾಠ ಮಾಡಿದರು… ಊರು ಕಾರವಾರ, ಹುಟ್ಟಿ ಬೆಳೆದದ್ದು ಬ್ಯಾಡಗಿ ..ಕ್ರೀಡಾ ಸಾಧನೆ ಮಾಡಿದ್ದು ಬೆಂಗಳೂರಿನಲ್ಲಿ…. ಇದು ಮೂರು ರಾಷ್ಟ್ರಗಳಿಗೆ ಕಬಡ್ಡಿಯ ಪಾಠ ಕಲಿಸಿದ,  ಭಾರತದ ಹಲವಾರು ಪ್ರತಿಭೆಗಳಿಗೆ ಆಸ್ರಯ ನೀಡಿದ ದೇಶದ ಶ್ರೇಷ್ಠ ಕಬಡ್ಡಿ ಕೋಚ್‌ ಕರ್ನಾಟಕದ ರವಿ ಶೆಟ್ಟಿ ಅವರ ಕ್ರೀಡಾ ಬದುಕಿನ ಹೆಜ್ಜೆಗಳು. 1982-87ರ ವರೆಗೆ ಕರ್ನಾಟಕ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದರು. 1998ರಲ್ಲಿ ಎನ್‌ಎಸ್‌ಐ ಮೂಲಕ ಕಬಡ್ಡಿ ಕೋಚ್‌ ಆಗಿ ತರಬೇತಿ ಪಡೆಯುತ್ತಾರೆ. 2001 ರಿಂದ 2018ರವೆರೆಗೂ ಕರ್ನಾಟಕದ ಕೋಚ್‌ ಆಗಿ ಕಾರ್ಯನಿರ್ವಹಿಸಿ ತಂತರ ಪ್ರೋ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ಕೋಚ್‌ ಆಗಿ ಸೇರಿಕೊಂಡರು. ಭಾರತೀಯ ರಕ್ಷಣಾ ಇಲಾಖೆಯಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದ ರವಿ ಶೆಟ್ಟಿ 2020ರಲ್ಲಿ ನಿವೃತ್ತಿಯಾದರು.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಐದು ವರ್ಷಗಳ ಕಾಲ ಕೋಚ್‌ ಆಗಿ ಕಾರ್ಯನಿರ್ವಹಿಸಿದ ರವಿ ಶೆಟ್ಟಿಯವರ ತರಬೇತಿಯ ಕ್ರಮ ವಿದೇಶಗಳಿಗೂ ಹಬ್ಬಿತು. ಆಗ್ನೇಯ ಏಷ್ಯಾ ರಾಷ್ಟ್ರಗಳು ತಮ್ಮದೇ ಆದ ಕಬಡ್ಡಿ ಒಕ್ಕೂಟವನ್ನು ಸ್ಥಾಪಿಸಿಕೊಂಡು, ಕಬಡ್ಡಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ರವಿ ಶೆಟ್ಟಿ ಅವರನ್ನು ಆಹ್ವಾನಿಸಿದವು. ಕಬಡ್ಡಿ ಆಟದ ತಂತ್ರಗಾರಿಗೆ, ಅಂಕಣದ ಕ್ರಮ ಎಲ್ಲವನ್ನೂ ಚೆನ್ನಾಗಿ ಅರಿತಿರುವ ರವಿ ಶೆಟ್ಟಿ ಅವರ ತರಬೇತಿಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಬಡ್ಡಿ ಆಟ ಕೇವಲ ಒಂದು ದೇಶಕ್ಕೆ ಸೀಮಿತವಾಗಬಾರದು ಎನ್ನುವ ರವಿ ಶೆಟ್ಟಿ ಈ ಕ್ರೀಡೆ ಒಲಿಂಪಿಕ್ಸ್‌ಗೆ ಬರಬೇಕಾದರೆ ಇನ್ನೂ ಹೆಚ್ಚಿನ ರಾಷ್ಟ್ರಗಳಿಗೆ ಹಬ್ಬಬೇಕು ಎನ್ನುತ್ತಾರೆ ರವಿ ಶೆಟ್ಟಿ.

ಜೀವಮಾನ ಸಾಧನಾ ಪ್ರಶಸ್ತಿಗೆ ಭಾಜನರಾದ ನಂತರ ಹೈದರಾಬಾದ್‌ನಿಂದ sportsmail ಜೊತೆ ಮಾತನಾಡಿದ ಕೋಚ್‌ ರವಿ ಶೆಟ್ಟಿ, “ನನ್ನ ಸಾಧನೆಯನ್ನು ಸರಕಾರ ಗುರುತಿಸಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಕಬಡ್ಡಿ ಆಟಗಾರರು, ನನ್ನ ಶಿಷ್ಯರು, ಕಬಡ್ಡಿ ಅಭಿಮಾನಿಗಳು, ಕಬಡ್ಡಿ ಸಂಸ್ಥೆಗಳ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು, ಈ ಪ್ರಶಸ್ತಿ ನನ್ನ ಮುಂದಿನ ಸಾಧನೆಗೆ ಸ್ಫೂರ್ತಿಯಾಗಲಿದೆ. ಮತ್ತಷ್ಟು ಪ್ರತಿಭೆಗಳನ್ನು ಬೆಳಗಲು ಇದು ದಾರಿದೀಪವಾಗಲಿದೆ,” ಎಂದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.