ಸ್ಪೋರ್ಟ್ಸ್ ಮೇಲ್ ವರದಿ:
ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಪವರ್ ಲಿಫ್ಟರ್ ಬೆಂಗಳೂರಿನ ರಘು ಹೊಂಡದಕೇರಿ ನಾಯಕತ್ವದಲ್ಲಿ ಭಾರತ ಪವರ್ ಲಿಫ್ಟಿಂಗ್ ತಂಡ, ರಷ್ಯಾದಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್ ಕಾಂಗ್ರೆಸ್ (ಡಬ್ಲ್ಯುಪಿಸಿ) ಚಾಂಪಿಯಷನ್‌ಷಿಪ್‌ನಲ್ಲಿ ಆರು ಸ್ವರ್ಣ ಪದಕಗಳನ್ನು ಗೆದ್ದ ದೇಶಕ್ಕೆ ಕೀರ್ತಿ ತಂದಿದೆ.
ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ೩೮ ವರ್ಷದ ಅನುಭವಿ ಲಿಫ್ಟರ್ ರಘು, ಜುಲೈ ೧೩ರಿಂದ ೧೫ರವರೆಗೆ ನಡೆದ ಡಬ್ಲ್ಯುಪಿಸಿ ಚಾಂಪಿಯನ್‌ಷಿಪ್‌ನ ರಾ-ಪವರ್‌ಲಿಫ್ಟಿಂಗ್ ವಿಭಾಗದಲ್ಲಿನ ಸ್ಕ್ವಾಟ್ ಮತ್ತು ಡೆಡ್‌ಲಿಫ್ಟ್ ಎರಡರಲ್ಲೂ ಚಿನ್ನ ಗೆದ್ದಿದ್ದಾರೆ.
೧೪೦ ಕೆ.ಜಿ. ಸ್ಕ್ವಾಟ್ ನಲ್ಲಿ ೩೩೫ ಕೆ.ಜಿ ಭಾರವನ್ನು ಎತ್ತುವ ಮೂಲಕ ರಾಷ್ಟ್ರೀಯ ದಾಖಲೆ ಹೊಂದಿರುವ ರಘು, ರಷ್ಯಾದಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ಮುರಿಯುವ ಗುರಿ ಹೊಂದಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರೂ ಸ್ವರ್ಣ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವನ್ನು ಮೀರಿಸಿದ ಶಿಶ್ಯರು
ಪವರ್ ಲಿಫ್ಟಿಂಗ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ರಘು, ಹಲವು ಉದಯೋನ್ಮುಖ ಲಿಫ್ಟರ್‌ಗಳನ್ನು ಕೂಡ ಬೆಳಕಿಗೆ ತಂದಿದ್ದಾರೆ. ನಗರದ ಬಸವೇಶ್ವರ ನಗರದಲ್ಲಿರುವ ರಘು ಅವರ ಮ್ಯೂಟಂಟ್ ಪವರ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದಿರುವ ಮೊಹಮ್ಮದ್ ಅಜ್ಮಾತ್ (೧೦೦ ಕೆ.ಜಿ), ಮಾಸ್ಟರ್ ವಿಭಾಗದ ಡೆಡ್‌ಲಿಫ್ಟ್‌ನಲ್ಲಿ ೨೯೫ ಕೆ.ಜಿ ಭಾರ ಎತ್ತುವ ಮೂಲಕ ನೂತನ ವಿಶ್ವ ದಾಖಲೆ ಬರೆದು ಚಿನ್ನ ಗೆದ್ದಿದ್ದಾರೆ. ಜತೆಗೆ ಫುಲ್ ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದರು. ಇವರಲ್ಲದೆ ೭೫ ಕೆ.ಜಿ, ವಿಭಾಗದಲ್ಲಿ ವರದ ಪಾಟಿಲ್, ರಾ ಮತ್ತು ಎಕ್ವಿಪ್ಡ್ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಭಾರತದ ಏಕೈಕ ಸ್ಪರ್ಧಿ ಸುಹಾಸಿನಿ (೯೦+ ಕೆ ಜಿ ) ಫುಲ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಗುರುವಿಗೆ ಕೀರ್ತಿ ತಂದಿದ್ದಾರೆ.