ಪಾನ್ ಆಫ್ರಿಕಾ ರೇಸ್‌ಗೆ ಟಿವಿಎಸ್ ಸಿದ್ಧ

0
273
ಸ್ಪೋರ್ಟ್ಸ್ ಮೇಲ್ ವರದಿ 

ಸೆಪ್ಟಂಬರ್ 8 ರಿಂದ 15 ರವರೆಗೆ ಮೊರಾಕ್ಕೋದಲ್ಲಿ ನಡೆಯಲಿರುವ ಪಾನ್ ಆಫ್ರಿಕಾ ರಾಲಿ 2018 ರಲ್ಲಿ ಪಾಲ್ಗೊಳ್ಳಲು ಟಿವಿಎಸ್ ರೇಸಿಂಗ್‌ನ ಕೆಪಿ ಅರವಿಂದ್ ಹಾಗೂ ಅಬ್ದುಲ್ ವಹೀದ್ ತನ್ವೀರ್ ಸಜ್ಜಾಗಿದ್ದಾರೆ. ತಾಂತ್ರಿಕ, ವೇಗ ಹಾಗೂ ಮರಳಿನ ಹಾದಿಯಿಂದ ಕೂಡಿದ ಈ ರೇಸ್ ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದಿದೆ.

 

ಡಕಾರ್ ರಾಲಿಯಲ್ಲಿ ಗಾಯಗೊಂಡು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕೆ.ಪಿ. ಅರವಿಂದ್ ಟಿವಿಎಸ್ ತಂಡವನ್ನು ಮುನ್ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್, ‘ಗಾಯದಿಂದ ಚೇತರಿಸಿದ ನಂತರ ಇದು ನನ್ನ ಮೊದಲ ರೇಸ್. ಗಾಯದಿಂದ ವಾಪಾಸಾದ ನಂತರ ಯಾವಾಗಲೂ ನಮ್ಮ ಬಗ್ಗೆ ನಮಗೆ ಸಂಶಯವಿರುತ್ತದೆ. ಆದರೆ ಕಾಲ ಕಳೆದಂತೆ ಅದು ಸಹಜ ಸ್ಥಿತಿಗೆ ಬರುತ್ತದೆ. ಹೋರಾಟದ ಛಲ ಹಾಗೆಯೇ ಇದೆ, ಗಾಯ ಆಗಿರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ,‘  ಎಂದು ಹೇಳಿದರು.
೨೦೧೯ರ ಡಕಾರ್‌ಗೆ ಉತ್ತಮ ರೀತಿಯಲ್ಲಿ ಸಜ್ಜಾಗಿರುವುದಾಗಿ ಅರವಿಂದ್ ಈ ಸಂದರ್ಭದಲ್ಲಿ ಹೇಳಿದರು. ಈ ಬಾರಿಯ ಡಕಾರ್‌ಗೆ ಟಿವಿಎಸ್ ತಂಡ ಉತ್ತಮ ರೀತಿಯಲ್ಲಿ ಸಜ್ಜಾಗುತ್ತಿದೆ. ಅದೇ ರೀತಿ ನಮ್ಮ ಟಿವಿಎಸ್ ಕೂಡ ಉತ್ತಮ ರೀತಿಯಲ್ಲಿ ಬೆಂಬಲ ಸೂಚಿಸುತ್ತಿದೆ. ಗಾಯಗೊಂಡಾಗ ನಮ್ಮ ತಂಡ ಎಲ್ಲ ರೀತಿಯ ನೆರವನ್ನು ನೀಡಿದ್ದು, ಫಿಟ್ನೆಸ್ ಮರಳಿ ಪಡೆಯಲು ಉತ್ತಮ ರೀತಿಯಲ್ಲಿ ಸಹಕಾರ ನೀಡಿದೆ ಎಂದರು.
ಇಂಡಿಯಾ ಬಾಜಾ 2018ರಲ್ಲಿ 450 ಸಿಸಿ ವಿಭಾಗದ ಗ್ರೂಪ್ ಎ ನಲ್ಲಿ ಮೂರನೇ ಸ್ಥಾನ ಪಡೆದಿದ್ದ ತನ್ವೀರ್ ಮಾತನಾಡಿ, ನಾವು ಬಳಸುತ್ತಿರುವ ಆರ್‌ಟಿಐರ್ ೪೫೦ ಬೈಕ್ ಬಹಳ ಭಾರವಾಗಿವೆ. ಅದಕ್ಕೆ ಹೆಚ್ಚಿನ ಪೆಟ್ರೋಲ್ ಅಗತ್ಯವಿರುತ್ತದೆ. ಅದನ್ನು ಚಲಾಯಿಸಲು ರೈಡಿಂಗ್ ಶೈಲಿ ವಿಭಿನ್ನವಾಗಿರಬೇಕು. ಬೈಕ್‌ಗೆ ಹೊಂದಿಕೊಳ್ಳಲು ಸಾಕಷ್ಟು ಶ್ರಮಬೇಕಾಯಿತು, ಎಂದರು. ಇದೇ ಸಂದರ್ಭದಲ್ಲಿ ಟಿವಿಎಸ್ ತಂಡ ಮೊರಾಕ್ಕೋದಲ್ಲಿ ನಡೆಯಲಿರುವ ಒಲಿಬಿಯಾ ರಾಲಿಯಲ್ಲೂ ಪಾಲ್ಗೊಳ್ಳಲಿದೆ.