Wednesday, November 6, 2024

ಶಿಸ್ತಿನ ಬೌಲಿಂಗ್‌ಗೆ ಕುಸಿದ ಇಂಗ್ಲೆಂಡ್

ಏಜೆನ್ಸೀಸ್ ಸೌತ್‌ಹ್ಯಾಂಪ್ಟನ್ 

ಭಾರತದ ಬೌಲರ್‌ಗಳ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ನಾಲ್ಕನೇ ಟೆಸ್ಟ್‌ನ ಮೊದಲ ದಿನದಲ್ಲಿ ಕೇವಲ ೨೪೬ ರನ್‌ಗೆ ಸರ್ವ ಪತನ ಕಂಡಿದೆ.

ಜಸ್‌ಪ್ರೀತ್ ಬುಮ್ರಾ (೪೬ಕ್ಕೆ ೩), ಇಶಾಂತ್  ಶರ್ಮಾ (೨೬ಕ್ಕೆ ೨), ಮೊಹಮ್ಮದ್ ಶಮಿ (೫೧ಕ್ಕೆ ೨), ಆರ್. ಅಶ್ವಿನ್ (೪೦ಕ್ಕೆ ೨) ಹಾಗೂ ಹಾರ್ದಿಕ್ ಪಾಂಡ್ಯ (೫೧ಕ್ಕೆ ೧) ದಾಳಿಗೆ ಸಿಲುಕಿದ ಇಂಗ್ಲೆಂಡ್ ಲಗುಬಗನೆ ವಿಕೆಟ್ ಕಳೆದುಕೊಂಡಿತು. ಸ್ಯಾಮ್ ಕರಾನ್ (೭೮) ಅವರು ಕೊನೆ ಕ್ಷಣದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸದೆ ಇರುತ್ತಿದ್ದರೆ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ಅಲ್ಪ ಮೊತ್ತದಲ್ಲಿ ಕೊನೆಗಾಣುತ್ತಿತ್ತು. ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ ೧೯ ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ೮೬ ರನ್ ಗಳಿಸುವಷ್ಟರಲ್ಲಿ ೬ ವಿಕೆಟ್ ಕಳದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆಲ್ರೌಂಡರ್ ಕರಾನ್ ೭ನೇ ವಿಕೆಟ್ ಜತೆಯಾಟದಲ್ಲಿ  ಮೊಯಿನ್ ಅಲಿ (೪೦) ಅವರೊಂದಿಗೆ ೮೦ ರನ್ ಗಳಿಸಿದರು. ನಂತರ ಸ್ಟುವರ್ಟ್ ಬ್ರಾಡ್ (೧೭) ಅವರೊಂದಿಗೆ ೯ನೇ ವಿಕೆಟ್ ಜತೆಯಾಟದಲ್ಲಿ ೬೩ ರನ್ ಕಲೆಹಾಕಿದರು.  ಕರಾನ್ ಅವರು ೧೩೬ ಎಸೆತಗಳನ್ನೆದುರಿಸಿ ೮ ಬೌಂಡರಿ ಹಾಗೂ ೧ ಸಿಕ್ಸರ್ ನೆರವಿನಿಂದ ಕುಸಿದ ಇಂಗ್ಲೆಂಡ್‌ಗೆ ನೆರವಾಗಿ ದಿನದ ಗೌರವ ಕಾಯ್ದರು.

Related Articles