ವಾಲಿಬಾಲ್‌ಗೆ ಜೀವ ತುಂಬಿದ ನಂದ ಕುಮಾರ್

0
195
ಸೋಮಶೇಖರ್ ಪಡುಕರೆ ಬೆಂಗಳೂರು

ಸಾಮಾನ್ಯವಾಗಿ ನಾನು ಕ್ರೀಡಾ ಸಂಸ್ಥೆಗಳಲ್ಲಿರುವವರ  ಬಗ್ಗೆ ಬರೆಯುವುದು ಕಡಿಮೆ. ಆದರೆ ವಾಲಿಬಾಲ್‌ಗೆ ಜೀವ ತುಂಬುವ ನಂದ ಕುಮಾರ್ ಬಗ್ಗೆ ಬರೆಯಲೇಬೇಕೆನಿಸಿತು. ನ್ಯಾಯಾಲದಲ್ಲಿ ವಾಲಿಬಾಲ್ ಫೆಡರೇಷನ್ ಅವ್ಯವಸ್ಥೆಯ ವಿರುದ್ಧ ಒಂಟಿಯಾಗಿ ಹೋರಾಡಿದ ಕಾರಣಕ್ಕೆ ಅವರು ಕ್ರೀಡಾವಲಯದಲ್ಲಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾದರು.

ಕಂಠೀರವ ಕ್ರೀಡಾಂಗಣಕ್ಕೆ ಕಾಲಿಟ್ಟರೆ ನಮಗೆ ಕಾಣಸಿಗುವುದು ಒಂದಿಷ್ಟು ಅಥ್ಲೀಟ್‌ಗಳು, ಉಚಿತವಾಗಿ ತರಬೇತಿ ನೀಡುವ ಕೋಚ್‌ಗಳು, ಹಣಕ್ಕಾಗಿ ತರಬೇತಿ ನೀಡುವ ತರಬೇತುದಾರರು ಹಾಗೂ ಕೋಣಾರ್ಕ್ ಹೊಟೇಲ್‌ಗೆ ಟೀ ಕುಡಿಯಲು ಬಂದವರು. ಇವರೆಲ್ಲರ ನಡುವೆ ಒಳಾಂಗಣ ಕ್ರೀಡಾಂಗಣದಲ್ಲಿ ಸದಾ ವಾಲಿಬಾಲ್‌ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಂದ ಕುಮಾರ್ ಕಾಣಸಿಗುತ್ತಾರೆ.
ಮಾಜಿ ಆಟಗಾರ, ಕರ್ನಾಟಕ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ, ಭಾರತ ವಾಲಿಬಾಲ್ ಅಸೋಸಿಯೇಷನ್‌ನ ಮಾಜಿ ಕಾರ್ಯದರ್ಶಿ ಹಾಗೂ ಭಾರತ್ ವಾಲಿಬಾಲ್ ಲೀಗ್‌ನ ಹುಟ್ಟುಹಾಕುತ್ತಿರುವ ನಂದ ಕುಮಾರ್ ಭಾರತೀಯ ವಾಲಿಬಾಲ್ ಸಂಸ್ಥೆಯ ಅವ್ಯವಸ್ಥೆಯ ವಿರುದ್ಧವಾಗಿ ಕೋರ್ಟ್ ಮೆಟ್ಟಿಲೇರಿ ಯಶಸ್ಸು ಕಂಡವರು.
ಕೇಂದ್ರದಲ್ಲಿ ಕ್ರೀಡಾ ಇಲಾಖೆ ಉತ್ತಮ ರೀತಿಯ ಯೋಜನೆಗಳನ್ನು ಹಾಕಿಕೊಂಡು ಎಲ್ಲ ಕ್ರೀಡಾ ಸಂಸ್ಥೆಗಳು ಹಾಗೂ ಕ್ರೀಡಾಪಟುಗಳ ಮೆಚ್ಚುಗೆಗೆ ಪಾತ್ರವಾಗಿದೆ. ಏಕೆಂದರೆ ಅಲ್ಲಿ ಕ್ರೀಡಾ ಸಚಿವರಾದ ರಾಜ್ಯವರ್ಧನ ಸಿಂಗ್ ರಾಥೋಡ್  ಒಬ್ಬ ಕ್ರೀಡಾಪಟು. ಕ್ರೀಡಾಪಟುವಾಗಿದ್ದ ಕಾರಣ ಅವರಿಗೆ ಕ್ರೀಡಾ ವ್ಯವಸ್ಥೆ ಹಾಗೂ ಕ್ರೀಡಾಪಟುವಿನ ನೋವು ನಲಿವು ಸ್ಪಷ್ಟವಾಗಿ ಕೂಡಲೇ ಅರ್ಥವಾಗುತ್ತದೆ. ಈ ಕಾರಣಕ್ಕಾಗಿ ಅವರು ಪ್ರತಿಯೊಂದು ಸಮಸ್ಯೆಗೂ ಕೂಡಲೇ ಸ್ಪಂದಿಸುತ್ತಾರೆ.
ವಾಲಿಬಾಲ್ ವಿಚಾರ ಬಂದಾಗ ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ವಾಲಿಬಾಲ್ ಪಂದ್ಯಗಳಿಗಿಂತ ವಾಲಿಬಾಲ್ ಸಂಸ್ಥೆಯ ಆಟವೇ ಹೆಚ್ಚಾಗಿದೆ. ನ್ಯಾಯಾಲಯದಲ್ಲಿ ಈ ಬಗ್ಗೆ ಸಾಕಷ್ಟು ವಿಚಾರಣೆ ನಡೆದಿದೆ. ಚೆನ್ನೈನಲ್ಲಿ ಅವ್ಯವಸ್ಥಿತ ರೀತಿಯಲ್ಲಿ ವಾಲಿಬಾಲ್ ಅಸೋಸಿಯೇಷನ್‌ನ ಚಟುವಟಿಕೆಗಳು ನಡೆಯುತ್ತಿವೆ. ಹಣ ಪಡೆದದ್ದು, ಕೊಟ್ಟಿದ್ದು ಯಾವುದಕ್ಕೂ ಲೆಕ್ಕಾಚಾರವೇ ಇಲ್ಲ. ಪದಾಧಿಕಾರಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ಖಾತೆ ಹೊಂದಿ ಹಣ ಪಡೆದಿರುವುದು, ಹಣ ನೀಡಿರುವುದು ವ್ಯವಸ್ಥಿತವಾಗಿ ನಡೆದಿದೆ. ಈ ಬಗ್ಗೆ ಒಂಟಿಯಾಗಿ ಧ್ವನಿ ಎತ್ತಿದವರು ನಂದ ಕುಮಾರ್.
ಸಿಬಿಐ ತನಿಖೆ, ನ್ಯಾಯಾಲಯದಲ್ಲಿ ಹಣ ದುರುಪಯೋಗದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ನ್ಯಾಯಾಲಯ ಯಾವುದೇ ಆಡಳಿತಾತ್ಮಕ ಚಟುವಟಿಕೆ ನಡೆಸುವಂತಿಲ್ಲ ಎಂದು ಆದೇಶ ನೀಡಿದೆ. ಅಲ್ಲದೆ ಇನ್ನೆರಡು ವಾರಗಳಲ್ಲಿ ಅಂತಿಮ ತೀರ್ಪು ಹೊರಬೀಳಲಿದೆ. ಮುಂದಿನ ಚುವಾಣೆಯನ್ನು ನಡೆಸುವ ಜವಾಬ್ದಾರಿಯನ್ನು ನಡೆಸುವ ಸಮಿತಿಯಲ್ಲೂ ನಂದ ಕುಮಾರ್ ಅವರಿಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ನೀಡಲಾಗಿದೆ.
ಪ್ರೊ ವಾಲಿಬಾಲ್ ಲೀಗ್ 
ಫೆಬ್ರವರಿ ತಿಂಗಳಲ್ಲಿ ದೇಶದಲ್ಲಿ ಎಂಟು ತಂಡಗಳ ನಡುವೆ ಪ್ರೊ ವಾಲಿಬಾಲ್ ಲೀಗ್ ನಡೆಯಲಿದೆ. ಈಗಾಗಲೇ ಆಟಗಾರರ ಹರಾಜು ಕೂಡ ನಡೆದಿದೆ. ಆದರೆ ಈ ಲೀಗ್‌ನ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ಅಂತಾರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ಸೆಬಾಸ್ಟಿಯನ್ ಜಾರ್ಜ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಮದ್ರಾಸ್ ಹೈಕೋರ್ಟ್ ಲೀಗ್‌ಗೆ ತಡೆಯಾಜ್ಞೆಯನ್ನು ತರಲು ಸಮ್ಮತಿ ನೀಡದಿದ್ದರೂ, ಟೆಂಡರ್ ಪ್ರಕ್ರಿಯೆಯಲ್ಲಿ ಗೊಂದಲ ಇರುವುದನ್ನು ಸ್ಪಷ್ಟಪಡಿಸಿದೆ. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಲೀಗ್ ಕೆಲವು ಅಡೆತಡೆಗಳನ್ನು ಎದುರಿಸುವುದು ಸ್ಪಷ್ಟವಾಗಿದೆ.
ಒಬ್ಬ ವಾಲಿಬಾಲ್ ಆಟಗಾರನಾಗಿ ನಾನು ಎಲ್ಲಿಯೂ ವಾಲಿಬಾಲ್ ಪಂದ್ಯಗಳನ್ನು ನಡೆಸುವ ಬಗ್ಗೆ ಅಡ್ಡಿ ತಂದಿಲ್ಲ. ವಾಲಿಬಾಲ್ ಫೆಡರೇಷನ್‌ನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವುದೇ ನನ್ನ ಉದ್ದೇಶವಾಗಿತ್ತು. ಮುಂಬರುವ ಚುನಾವಣೆಯಲ್ಲಿ ಯಾರು ಜಯ ಗಳಿಸಬೇಕು ಎಂಬುದನ್ನು ರಾಜ್ಯ ಡರೇಷನ್‌ಗಳು ತೀರ್ಮಾನಿಸಲಿವೆ ಎಂದು ನಂದ ಕುಮಾರ್ ಹೇಳಿದ್ದಾರೆ.