ಆಸೀಸ್‌ಗೆ ಆಘಾತ ನೀಡಿದ ಭಾರತ

0
188
ಏಜೆನ್ಸೀಸ್, ಸಿಡ್ನಿ

ಭಾರತದ 622 ರನ್‌ಗಳ ಬೃಹತ್‌ಮೊತ್ತವನ್ನು ಬೆಂಬತ್ತುವಲ್ಲಿ ಎಡುವಿದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ ಕೇವಲ 260 ರನ್ ಗಳಿಸಿ ಫಾಲೋ ಆನ್ ಭೀತಿಯಲ್ಲಿದೆ. ನಾಲ್ಕನೇ ಟೆಸ್ಟ್‌ನ ಮೂರನೇ ದಿನ ಮಳೆಗೆ ಅಡ್ಡಿಯಾದ ಕಾರಣ ಆಸ್ಟ್ರೇಲಿಯಾ ಸದ್ಯ ನೆಮ್ಮದಿಯ ನಿಟ್ಟುಸಿರಿಟ್ಟಿದೆ. ಆದರೆ ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಪಡೆ ಐತಿಹಾಸಿಕ ಸರಣಿ ಜಯದ ಹಾದಿಯಲ್ಲಿ ಸಾಗಿದೆ.

ಚೇತೇಶ್ವರ  ಪೂಜಾರ (193), ರಿಶಬ್ ಪಂತ್ (159*) ಹಾಗೂ ರವೀಂದ್ರ ಜಡೇಜಾ (81) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ  7 ವಿಕೆಟ್ ನಷ್ಟಕ್ಕೆ 622ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು.
ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲಿಲ್ಲ. ಮಾರ್ಕಸ್ ಹ್ಯಾರಿಸ್ (79) ಹೊರತುಪಡಿಸಿದರೆ ಭಾರತದ ಬೃಹತ್ ಮೊತ್ತವನ್ನು ತಲಪುವ ಪ್ರಯತ್ನವನ್ನು ಆಸೀಸ್ ಬ್ಯಾಟ್ಸ್‌ಮನ್ ಮಾಡಲಿಲ್ಲ. ಒಂದು ವೇಳೆ ಹ್ಯಾರಿಸ್ ತಾಳ್ಮೆಯ ಆಟ ಪ್ರದರ್ಶಿಸದೇ ಇರುತ್ತಿದ್ದರೆ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ನೂರು ವರ್ಷಗಳ ಇತಿಹಾಸದಲ್ಲೇ ಕಡಿಮೆ ಮೊತ್ತ ಗಳಿಸಿದ ಕುಖ್ಯಾತಿಗೆ ತುತ್ತಾಗುತ್ತಿತ್ತು. ಆದರೆ ಹ್ಯಾರಿಸ್ ಅದಕ್ಕೆ ಅವಕಾಶ ಕೊಡಲಿಲ್ಲ. ಮಲ್ಬೋರ್ನ್‌ನಲ್ಲಿ ಮಿಂಚಿದ್ದ ಜಸ್‌ಪ್ರೀತ್ ಬುಮ್ರಾ ವಿಕೆಟ್ ಪಡೆಯುವಲ್ಲಿ ವಿಲರಾದರೂ, ಸ್ಪಿನ್ ಮಂತ್ರಕ್ಕೆ ಆಸೀಸ್ ತಲೆ ಬಾಗಿತು. ಕುಲ್‌ದೀಪ್ ಯಾದವ್ (71ಕ್ಕೆ 3), ರವೀಂದ್ರ ಜಡೇಜಾ (62ಕ್ಕೆ ೨) ಹಾಗೂ ಮೊಹಮ್ಮದ್ ಶಮಿ (54ಕ್ಕೆ 1) ಆಸೀಸ್ ಬ್ಯಾಟಿಂಗ್ ಶಕ್ತಿಯನ್ನು ಅಡಗಿಸುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ಮಳೆಯಿಂದಾಗಿ ಮೂರನೇ ದಿನದಾಟ ಕೊನೆಗೊಂಡಾಗ ಆಸಿಸ್ ತಂಡ  6 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.