ಸುನಿಲ್ ಛೆಟ್ರಿ, ಗೌತಮ್ ಗಂಭೀರ್‌ಗೆ ಪದ್ಮಶ್ರೀ

0
185
ಸ್ಪೋರ್ಟ್ಸ್ ಮೇಲ್ ವರದಿ

 ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಸೇರಿದಂತೆ ಕ್ರೀಡಾ ಜಗತ್ತಿನ ಎಂಟು ಸಾಧಕರಿಗೆ ಪದ್ಮಶ್ರೀ ಹಾಗೂ ಮೌಂಟ್ ಎವರೆಸ್ಟ್ ಶಿಖರವನ್ನೇರಿದ ಭಾರತದ ಮೊದಲ ಮಹಿಳೆ ಬಚೇಂದ್ರಿಪಾಲ್ ಅವರಿಗೆ 2019ನೇ ಸಾಲಿನ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

ಚೆಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದ ಹರಿಕಾ ದ್ರೋಣವಲ್ಲಿ, ಟೇಬಲ್ ಟೆನಿಸ್‌ನಲ್ಲಿ ದೇಶವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ್ದ ಶರತ್ ಕಮಲ್, ಅಂತಾರಾಷ್ಟ್ರೀಯ ಆರ್ಚರಿ ಪಟು ಬೊಂಬಿಲಾದೇವಿ ಲೈಶ್ರಾಮ್, ಅಂತಾರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪೂನಿಯಾ, ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ತಾರೆ ಪ್ರಶಾಂತಿ ಸಿಂಗ್ ಹಾಗೂ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಕಬಡ್ಡಿ ಆಟಗಾರ ಅಜಯ್ ಠಾಕೂರ್ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. 
ಜೆಮ್ಷೆಡ್ಪುರದ ಟಾಟಾ ಕ್ರೀಡಾ ಫೌಂಡೇಷನ್‌ನಲ್ಲಿ  ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಬಚೇಂದ್ರಿ ಪಾಲ್ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿ, ‘ದೇಶದ ಅತ್ಯುನ್ನತ ನಾಗರಿಕ ಸನ್ಮಾನ ಸಿಕ್ಕಿರುವುದು ಖುಷಿಕೊಟ್ಟಿದೆ. ಸಾಹಸ ಕ್ರೀಡೆಗೆ ಸಿಕ್ಕ ಗೌರವ ಇದಾಗಿದೆ. ಪರ್ವತಾರೋಹಣದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರಿಗೂ ಇದು ಅರ್ಪಣೆ. ಇಂಥ ಗೌರವ ಯುವತಿಯರಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿದರೆ ಅದೇ ಸಂಭ್ರಮ.‘ ಎಂದು ಹೇಳಿದರು.