ಸ್ಪೋರ್ಟ್ಸ್ ಮೇಲ್ ವರದಿ
ಮಧ್ಯಪ್ರದೇಶದಲ್ಲಿ ನಡೆದ ಆರನೇ ರಾಷ್ಟ್ರೀಯ ಕಯಾಕಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಕಂಚಿನ ಪದಕಗಳನ್ನು ಗೆದ್ದ ಕರ್ನಾಟಕ ತಂಡದ ಸಾಧಕರನ್ನು ಯುವಜನ ಸೇವಾ ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಅವರು ಅಭಿನಂದಿಸಿದರು.
ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯಲ್ಲಿ ಪಳಗಿದ ಈ ಸ್ಪರ್ಧಿಗಳು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿರುವುದಕ್ಕೆ ಶ್ರೀನಿವಾಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಲು ಈ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಶ್ರೀನಿವಾಸ್ ಈ ಸಂದರ್ಭದಲ್ಲಿ ಹೇಳಿದರು. ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಜೇತ್ನಾದ ಆಡಳಿತಾಧಿಕಾರಿ ಡಾ. ಜಿತೇಂದ್ರ ಶೆಟ್ಟಿ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತಾಂತ್ರಿಕ ಸಲಹೆಗಾರ ಕೀರ್ತಿ ಪಾಯಸ್ ಹಾಗೂ ಇತರ ಗಣ್ಯರು ಹಾಜರಿದ್ದರು.