Thursday, April 25, 2024

ಆಡಿನ ಕೊಟ್ಟಿಗೆಯಿಂದ ಅರ್ಜೆಂಟೀನಾಕ್ಕೆ ಧನಲಕ್ಷ್ಮೀಯ ಯಶೋಗಾಥೆ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಶಿವಮೊಗ್ಗ ಜಿಲ್ಲೆಯ, ಶಿವಮೊಗ್ಗ ತಾಲೂಕಿನ ಪುಟ್ಟ ಗ್ರಾಮ ಆಡಿನ ಕೊಟ್ಟಿಗೆ. ಹೆಸರಿಗೆ ತಕ್ಕಂತೆ ಆ ಪುಟ್ಟ ಊರಿನಲ್ಲಿ ಇರುವುದೇ 60 ಮನೆಗಳು. ಈ ಊರಿಗೂ ಸ್ನೋ ಶೂ ಕ್ರೀಡೆಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಊರಿನ ಹೆಣ್ಣುಮಗಳೊಬ್ಬಳು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಪದಕಗಳನ್ನು ಗೆದ್ದು, ಈಗ ಅರ್ಜೆಂಟೀನಾದಲ್ಲಿ ನಡೆಯಲಿರುವ ವಿಶ್ವ ಸ್ನೋ ಶೂ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ. ರಾಜ್ಯಕ್ಕೆ ಕೀರ್ತಿ ತರುವ ಮೂಲಕ ಪುಟ್ಟ ಊರನ್ನು ಬೆಳಗಿದ ಕ್ರೀಡಾಪಟು ಧನಲಕ್ಷ್ಮೀ ಅರ್ಮುಗಮ್‌.

ಒಂದು ಕಾಲದಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಹಣವಿಲ್ಲದೆ, ದೇವರ ಕಾಣಿಕೆ ಡಬ್ಬದ ಹಣ ತೆಗೆದು ಪದಕ ಗೆದ್ದು ಬಂದ ದನಲಕ್ಷ್ಮೀ ಹಾಗೂ ಸಹೋದರಿ ಲತಾ ಅವರ ಕ್ರೀಡಾ ಬದುಕಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಅರ್ಮುಗಮ್‌ ಹಾಗೂ ಯಶೋಧ ದಂಪತಿಯ ಮಕ್ಕಳಾದ ಧನಲಕ್ಷ್ಮೀ ಹಾಗೂ ಲತಾ ದೇಶೀಯ ಸ್ನೋ ಶೂ ರೇಸಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದ ಅಪೂರ್ವ ಸಹೋದರಿಯರು. ಅಕ್ಕ ಅಭ್ಯಾಸ ಮಾಡುವುದನ್ನು ಕಲಿತು ತಂಗಿ ಲತಾನೂ ಕ್ರೀಡೆಯಲ್ಲಿ ಪಾಲ್ಗೊಂಡು ಯಶಸ್ಸು ಕಂಡವರು.

ಸಾಹಸ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಧನಲಕ್ಷ್ಮೀ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಮೂಲಕ ಹಲವಾರು ರಾಷ್ಟ್ರೀಯ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರು. ಪರ್ವತಾರೋಹಣ, ಕಯಾಕಿಂಗ್‌, ಕೆನಾಯಿಂಗ್‌, ರಿವರ್‌ರಾಫ್ಟಿಂಗ್‌, ಸ್ನೋ ಶೂ ರೇಸಿಂಗ್‌ ಹೀಗೆ ವಿವಿಧ ಸಾಹಸ ಕ್ರೀಡೆಗಳಲ್ಲಿ ಆರಂಭಿಕ ಅನುಭವ ಗಿಟ್ಟಿಸಿಕೊಂಡರು.

ಮೊದಲು ಕಯಾಕಿಂಗ್‌ ಮತ್ತು ಕೆನಾಯಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ, ಎರಡು ಕಂಚಿನ ಪದಕ ಗೆದ್ದರು, ನಂತರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಸಾಧನೆ ಮಾಡಿದರು. 2021ರ ಖೇಲೋ ಇಂಡಿಯಾ ಸ್ನೂ ಶೂ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಗೆಲ್ಲುವುದರ ಮೂಲಕ ಧನಲಕ್ಷ್ಮೀ ಭಾರತದ ಉತ್ತಮ ಸ್ನೂ ಶೂ ರೇಸರ್‌ ಆಗಿ ಮೂಡಿ ಬಂದರು. ರಾಷ್ಟ್ರ ಮಟ್ಟದಲ್ಲಿ 2  ಚಿನ್ನ ಸೇರಿದಂತೆ ಒಟ್ಟು 11 ಪದಕಗಳನ್ನು ಗೆದ್ದಿರುವ ಧನಲಕ್ಷ್ಮೀ ಈಗ ಅರ್ಜೆಂಟೀನಾದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕ್ರೀಡೆ ಹೊಸ ಬದುಕು ನೀಡಿದೆ: ಅರ್ಜೆಂಟೀನಾದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿರುವ ಧನಲಕ್ಷ್ಮೀ ಅಲ್ಲಿ ಪದಕ ಗೆಲ್ಲುವ ಆತ್ಮವಿಶ್ವಾಸ ಮೂಡಿಸಿದ್ದಾರೆ. “ನಮ್ಮದು ಅತ್ಯಂತ ಚಿಕ್ಕ ಊರು. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಆದರೆ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯಿಂದಾಗಿ ನಮಗೆ ಹೊಸ ಬದುಕು ಸಿಕ್ಕಿದೆ. ಕ್ರೀಡೆಯಲ್ಲಿ ಪಾಲ್ಗೊಂಡಿದ್ದರಿಂದ ಬದುಕಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಬಂದಿದೆ. ಅರ್ಜೆಂಟೀನಾದಲ್ಲಿ ಪದಕ ಗೆದ್ದು ದೇಶಕ್ಕೆ, ರಾಜ್ಯಕ್ಕೆ ಜೊತೆಯಲ್ಲಿ ನಮ್ಮ ಪುಟ್ಟ ಊರಿಗೆ ಕೀರ್ತಿ ತರಬೇಕೆಂಬ ಹಂಬಲವಿದೆ, ನನ್ನ ಯಶಸ್ಸಿನ ಹಾದಿಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಲ್ಲ ರೀತಿಯಿಂದಲೂ ನೆರವು ನೀಡಿದೆ. ಆ ನೆರವಿಗೆ ಪದಕ ಗೆಲ್ಲುವ ಸಾಧನೆ ಮಾಡಬೇಕು,” ಎಂದು ಹೇಳಿದರು.

ಶಿಖರದಿಂದ ಸಾಗರಕ್ಕೆ ಸಾಹಸ ಯಾತ್ರೆ: ಕರ್ನಾಟಕ ಸರಕಾರವು ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಸಂದರ್ಭದಲ್ಲಿ ಶಿಖರದಿಂದ ಸಾಗರ ತನಕ ಎಂಬ ಸಾಹಸ ಯಾತ್ರೆ ಹಮ್ಮಿಕೊಂಡಿತ್ತು. ಜಮ್ಮು ಕಾಶ್ಮೀರದ ಲಡಾಕ್‌ನಿಂದ ಕಾರವಾರದ ತನಕ ಸೈಕ್ಲಿಂಗ್‌, ಕಾರವಾರದಿಂದ ಮಂಗಳೂರು ತನಕ ಸಮುದ್ರದಲ್ಲಿ ಕಯಾಕಿಂಗ್‌ ಸಾಹಸ ಯಾನ ಇದಾಗಿತ್ತು. ಈ ಯಾನದಲ್ಲಿ ಧನಲಕ್ಷ್ಮೀ ಕೂಡ ಪಾಲ್ಗೊಂಡಿದ್ದರು.

ಏನಿದು ಸ್ನೋ ಶೂ ರೇಸ್‌?

ಇದು ಚಳಿಗಾಲದ ಕ್ರೀಡೆ. ಮಂಜುಗಡ್ಡೆಯ ಮೇಲೆ ಓಡುವ ಆಟ. ಇದಕ್ಕೆ ವಿಶೇಷವಾದ ಸ್ನೋ ಶೂ ಇರುತ್ತದೆ. ವಿಶೇಷ ಒಲಿಂಪಿಕ್ಸ್‌ ಮತ್ತು ಆರ್ಕಿಟಿಕ್‌ ಚಳಿಗಾಲದ ಕ್ರೀಡಾಕೂಟದಲ್ಲಿ ನಡೆಯುತ್ತದೆ. ಅಂತಾರಾಷ್ಟ್ರೀಯ ಸ್ನೋಶೂ ಫೆಡೆರೇಷನ್‌ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸ್ನೋಶೂರನ್ನಿಂಗ್‌ ಸ್ಪರ್ಧೆಯನ್ನು ನಡೆಸುತ್ತದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯು ಈ ಕ್ರೀಡೆಗೆ ಮಾನ್ಯತೆ ನೀಡಿದೆ.

Related Articles