Tuesday, November 12, 2024

ಬಾಲ್ ಬ್ಯಾಡ್ಮಿಂಟನ್ : ಕರ್ನಾಟಕಕ್ಕೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ 

ಒರಿಸ್ಸಾದ ಖಾಲಿ ಕೋರ್ಟ್ ನಲ್ಲಿ ಜರುಗಿದ 5ನೇ ರಾಷ್ಟ್ರೀಯ ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಮಹಿಳಾ ತಂಡ ಚಾಂಪಿಯನ್ ಪಟ್ಟ  ಗೆದ್ದುಕೊಂಡಿದೆ .

ರಾಷ್ಟ್ರದ ಐದು ವಲಯಗಳಿಂದ ಹತ್ತು ತಂಡಗಳು ಆಗಮಿಸಿದ್ದು ಈ ಟೂರ್ನಿಯ ಫೈನಲ್ಸ್ನಲ್ಲಿ ರಾಜ್ಯ ತಂಡ ತಮಿಳುನಾಡು ವಿರುದ್ಧ 35-29 ಹಾಗೂ 35-31ಅಂಕಗಳಿಂದ ನೇರ ಸೆಟ್ನಲ್ಲಿ ಜಯಿಸಿ ಸತತ ಎರಡನೇ ಬಾರಿ ಅಂತರ್ ವಲಯ ಪ್ರಶಸ್ತಿಯನ್ನು ತನ್ನದಾಗಿಸಿತು .ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಜರುಗಿದ ಪಂದ್ಯಗಳಲ್ಲಿ ರಾಜ್ಯ ತಂಡ ಲೀಗ್ ಹಂತದಲ್ಲಿ ಹರ್ಯಾಣ, ಮುಂಬೈ, ಒರಿಸ್ಸಾ ಹಾಗೂ ಛತ್ತೀಸ್ಗಡ ತಂಡದ ವಿರುದ್ಧ ಜಯಿಸಿ ಸೆಮಿಫೈನಲ್ನಲ್ಲಿ ಮಹಾರಾಷ್ಟ್ರ ವಿರುದ್ಧ 35-12 ಹಾಗೂ 35-16 ನೇರ ಸೆಟ್ ಗಳಿಂದ ಜಯಿಸಿ ಫೈನಲ್ ಹಂತಕ್ಕೆ ತಲುಪಿತ್ತು .ತಮಿಳುನಾಡು ತಂಡ ಸೆಮಿ ಫೈನಲ್ಸ್ ನಲ್ಲಿ ಛತೀಸ್ಗಡ ತಂಡದ ವಿರುದ್ಧ ಜಯಿಸಿ ಫೈನಲ್ ಹಂತಕ್ಕೆ ಅರ್ಹತೆಯನ್ನು ಪಡೆದಿತ್ತು .

ಈ ಹಿಂದೆ ತಮಿಳುನಾಡಿನ ದಿಂಡಿಗಲ್ನಲ್ಲಿ ಜರುಗಿದ ದಕ್ಷಿಣ ವಲಯ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ವಿಜೇತ ತಂಡವಾಗಿ ಹಾಗೂ ತಮಿಳುನಾಡು ರನ್ನರ್ ಅಪ್  ಆಗಿ ಮೂಡಿಬಂದಿತ್ತು .ಭಾರತೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಹಾಗೂ ಒರಿಸ್ಸಾ ರಾಜ್ಯ ಬಾಲ್ ಬಾಡ್ಮಿಂಟನ್ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಈ ಚಾಂಪಿಯನ್ ಶಿಪ್ ಅನ್ನು ಆಯೋಜಿಸಲಾಗಿತ್ತು .ರಾಜ್ಯ ತಂಡದ ನಾಯಕಿ ಜಯಲಕ್ಷ್ಮಿ ನೇತೃತ್ವದ ತಂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಅರುವತ್ತ ನಾಲ್ಕು ನೇ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ಷಿಪ್ ನಲ್ಲೂ ಚಾಂಪಿಯನ್ ಆಗಿತ್ತು .ರಾಜ್ಯ ಮಹಿಳಾ ತಂಡದ ಸಾಧನೆಗೆ ರಾಜ್ಯ ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ .

Related Articles