ಸ್ಪೋರ್ಟ್ಸ್ ಮೇಲ್ ವರದಿ
4ನೇ ಸುತ್ತಿನ ಎಂಆರ್‌ಎಫ್ , ಎಫ್ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ರಾಲಿ ಚಾಂಪಿಯನ್‌ಷಿಪ್‌ಗೆ ಚಿಕ್ಕಮಗಳೂರು ಸಜ್ಜಾಗಿದೆ. ಅಮಿತ್ರಾಜಿತ್ ಘೋಷ್ ಹಾಗೂ ಗೌರವ್ ಗಿಲ್ ಪ್ರಶಸ್ತಿಗಾಗಿ ತೀವ್ರ ಹೋರಾಟ ನಡೆಸಲಿದ್ದಾರೆ.
ಕಾಫಿ ಡೇ ಗ್ರೂಪ್ ಪ್ರಾಯೋಜಕತ್ವ ಹೊಂದಿರುವ ಚಿಕ್ಕಮಗಳೂರು ಮೊಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಈ ರಾಲಿ ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ರಾಲಿ ಚಾಂಪಿಯನ್‌ಷಿಪ್‌ನಲ್ಲಿ ದೇಶದ ಅಗ್ರ ಮೋಟಾರ್ ಸ್ಪೋರ್ಟ್ಸ್ ಪರಿಣತರು ಪಾಲ್ಗೊಳ್ಳಲಿದ್ದಾರೆ. ರಾಮಕೃಷ್ಣ ರೇಸ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ (ಆರ್‌ಆರ್‌ಪಿಎಂ) ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ರಾಲಿ, ಚೆನ್ನೈನಲ್ಲಿ ಆರಂಭಗೊಂಡು, ನಂತರ ಕೊಯಮತ್ತೂರ್ ಹಾಗೂ ಅರುಣಾಚಲಪ್ರದೇಶದಲ್ಲಿ ನಡೆದಿತ್ತು. 61 ಅಂಕ ಗಳಿಸಿರುವ ಮಹೀಂದ್ರಾ ಅಡ್ವೆಂಚರ್ ತಂಡದ ಅಮಿತ್ರಾಜಿತ್ ಘೋಷ್ ಹಾಗೂ ಸಹ ಚಾಲಕ ಅಶ್ವಿನ್ ನಾಯಕ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. 50 ಅಂಕ ಗಳಿಸಿರುವ ಗೌರವ್ ಗಿಲ್ ಹಾಗೂ ಮೂಸಾ ಶರೀಫ್ ಎರಡನೇ ಸ್ಥಾನದಲ್ಲಿದ್ದಾರೆ.
ಅಂಬರ್ ವ್ಯಾಲಿ ಶಾಲಾ ಮೈದಾದನಲ್ಲಿ ಶುಕ್ರವಾರ ಸೂಪರ್ ಸ್ಪೆಷಲ್ ಹಂತ (2.2 ಕಿ.ಮೀ) ನಡೆಯಿತು. ಕಾಫಿ ಡೇ ಗ್ರೂಪ್‌ನ ಎಸ್ಟೇಟ್‌ನಲ್ಲಿ ಶನಿವಾರ ಮತ್ತು ಭಾನುವಾರ ಎರಡನೇ ಸುತ್ತಿನ ಸ್ಪೆಷಲ್ ಸ್ಟೇಜ್ ನಡೆಯಲಿದೆ.
ಮಹೀಂದ್ರಾ ಅಡ್ವೆಂಚರ್ ತಂಡಕ್ಕೆ ಉತ್ತಮ ರೀತಿಯಲ್ಲಿ ಸ್ಪರ್ಧೆ ನೀಡುತ್ತಿರುವ ಅರ್ಕಾ ಮೋಟೋಸ್ಪೋರ್ಟ್ಸ್‌ನ ರಾಹುಲ್ ಕಾಂತಾರಾಜ್ ಹಾಗೂ ವಿವೇಕ್ ಭಟ್, ಕರಣ್ ಕಡೂರ್ ಹಾಗೂ ನಿಖಿಲ್ ಪೈ ಸ್ಪರ್ಧೆಯಲ್ಲಿದ್ದಾರೆ. ಕಡೂರ್ ಹಾಗೂ ಕಾಂತಾರಾಜ್ ಸಮಗ್ರವಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಯುವ ತಂಡವಾದ ಮಂಗಳೂರಿನ ಅರೂರ್ ವಿಕ್ರಮ್ ರಾವ್ (ಫಾಲ್ಕನ್ ಮೋಟೋ ಸ್ಪೋರ್ಟ್ಸ್ 68 ಅಂಕ) ಹಾಗೂ ಡೀನ್ ಮಸ್ಕರೆನ್ಹಾಸ್ (ಚೆಟ್ಟಿನಾಡ್ ಸ್ಪೋರ್ಟಿಂಗ್ 53 ಅಂಕ) ಐಎನ್‌ಆರ್‌ಸಿ ೩ಯಲ್ಲಿ ಮುನ್ನಡೆಯಲ್ಲಿದ್ದಾರೆ. 122.77 ಮತ್ತು 229 ಕಿಮೀ. ಅಂತರವನ್ನು ಹೊಂದಿರುವ ರಾಲಿ ಒಟ್ಟು 351.77 ಕಿಮೀ ದೂರವನ್ನು ಹೊಂದಿದೆ.