Thursday, September 12, 2024

ಟೆನ್ನಿಸ್ ಬಾಲ್ ಕ್ರಿಕೆಟ್ ನ ಮಾದರಿ ತಂಡ ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ

ಆರ್. ಕೆ. ಆಚಾರ್ಯ ಕೋಟ 

ಸ್ನೇಹಿತರೇ ಟೆನ್ನಿಸ್ ಕ್ರಿಕೆಟ್ ವಲಯದಲ್ಲಿ ಬೆಂಗಳೂರು,ಮಂಗಳೂರು, ಉಡುಪಿ,ಕುಂದಾಪುರದ ಹಲವಾರು ಪ್ರತಿಸ್ಪರ್ಧಿಗಳನ್ನು ನಾವು ಗುರುತಿಸಿದ್ದೇವೆ.

ಈ ನಡುವೆ ಉಡುಪಿ ಉದ್ಯಾವರದ ಸಮಾಜಮುಖಿ,ಕ್ರೀಡಾ ಸ್ಪೂರ್ತಿ ಮೆರೆದ ಅತ್ಯಂತ ಶಿಸ್ತಿನ ತಂಡದ ಪರಿಚಯವನ್ನು ಈ ಲೇಖನದ ಮೂಲಕ ಪರಿಚಯಿಸಲಿದ್ದೇನೆ.

1988 ರಲ್ಲಿ ಪಿತ್ರೋಡಿಯ ಮುಡ್ಡೆಲಗುಡ್ಡೆಯ ಪರಿಸರದ ಶಾಲಾ ವಿದ್ಯಾರ್ಥಿಗಳು ಸಂಜೆಯ ಬಿಡುವಿನ ವೇಳೆಯಲ್ಲಿ ಆಡಲು ಪ್ರಾರಂಭಿಸಿ,ತಂಡವೊಂದನ್ನು ರಚಿಸಿ ಸ್ಥಳೀಯ “ಶ್ರೀ ವೆಂಕಟರಮಣ ಭಜನಾ ಮಂದಿರ”ದಿಂದ ಪ್ರೇರಣೆಗೊಂಡು “ವೆಂಕಟರಮಣ ಕ್ರಿಕೆಟರ್ಸ್” ಪಿತ್ರೋಡಿ ಎಂಬ ಹೆಸರಿನಿಂದ ಪ್ರಾರಂಭವಾದ ಈ ತಂಡ ಅಂದಿನಿಂದ ಸತತ ಮೂರು ದಶಕಗಳ ಕಾಲ ಕ್ರೀಡೆ,ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಯಶಸ್ವಿ 30 ವರ್ಷಗಳನ್ನು ಈ ವರ್ಷ ಪೂರೈಸಿದೆ.
ಸ್ಥಾಪನೆಯ ಪ್ರಾರಂಭದಲ್ಲಿ ಪಿತ್ರೋಡಿ ಮಟ್ಟದ ಪಂದ್ಯಾಕೂಟಗಳಲ್ಲಿ ಭಾಗವಹಿಸಿ,ಪ್ರಶಸ್ತಿಗಳನ್ನು ಪಡೆಯುತ್ತಾ,ನಂತರದ ದಿನಗಳಲ್ಲಿ ಉದ್ಯಾವರ ಗ್ರಾಮದ ಬಲಿಷ್ಠ ತಂಡವಾಗಿ ಹಲವಾರು ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಪಡೆಯುತ್ತಾ,ಈವರೆಗೆ ಬರೋಬ್ಬರಿ
 260 ಕ್ಕೂ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದಿರುತ್ತದೆ.
ಭಾಗವಹಿಸಿದ ಎಲ್ಲಾ ಪಂದ್ಯಾಟಗಳಲ್ಲಿ ಶಿಸ್ತಿಗೆ ಅತ್ಯಂತ ಹೆಚ್ಚು ಮಹತ್ವ ಕೊಡುವ ಈ ತಂಡ,ಇದುವರೆಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರತಿಷ್ಟಿತ ಪಂದ್ಯಾಕೂಟಗಳಲ್ಲಿ 14 ಬಾರಿ “ಶಿಸ್ತಿನ ತಂಡ” ದ ಗೌರವಕ್ಕೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರ.
ಇದುವರೆಗೆ ರಾಜ್ಯಮಟ್ಟದ 2 ಬಾರಿ ದ್ವಿತೀಯ ಹಾಗೂ 1 ಬಾರಿ ತೃತೀಯ ಹಾಗೂ 3 ಬಾರಿ ರಾಜ್ಯಮಟ್ಟದ ಪಂದ್ಯಾಕೂಟಗಳಲ್ಲಿ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿರುತ್ತದೆ.2013-2014 ನೇ ಸಾಲಿನಲ್ಲಿ ತಂಡದ ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಪಿತ್ರೋಡಿಯ ಈ ತಂಡ ಪ್ರತಿ ವರ್ಷದಲ್ಲಿ ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬೆಳ್ಳಿ ಹಬ್ಬದ ನೆನಪನ್ನು ಹಸಿರಾಗಿರಿಸಿದೆ.ವರ್ಷ ವರ್ಷವೂ ಕನಿಷ್ಟ 25 ವಿದ್ಯಾರ್ಥಿಗಳಿಗೆ ಗರಿಷ್ಠ ಮಟ್ಟದ ವಿದ್ಯಾರ್ಥಿ ವೇತನಗಳನ್ನು ನೀಡಿಕೊಂಡು  ಊರಿನ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿರುತ್ತದೆ.ತಂಡದ ಹಿರಿಯ ಸದಸ್ಯರಾದ ಉದಯ್ ಕುಮಾರ್ ರವರ ಮಗಳಾದ ತನುಶ್ರೀಯನ್ನು ಯೋಗಾಸನದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿಸುವಲ್ಲಿ ಮಹತ್ವದ ಪಾತ್ರವಹಿಸಿರುತ್ತದೆ.
2015 ರಲ್ಲಿ ತಂಡವನ್ನು ರಿಜಿಸ್ಟರ್ಡ್ ಮಾಡಲಾಗಿದ್ದು,”ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ರಿ.ಪಿತ್ರೋಡಿ ಎಂದು ಹೆಸರಿಸಲಾಯಿತು.4 ವರ್ಷಗಳ ಹಿಂದೆ ಸಮಾಜದಲ್ಲಿ ರಕ್ತದ ಅವಶ್ಯಕತೆಯನ್ನು ಮನಗಂಡ ಈ ಸಂಸ್ಥೆ ಹಿರಿಯ,ಕಿರಿಯ ಯುವಕರ ಸಮಾಗಮದಲ್ಲಿ,162 ಸದಸ್ಯರ ರಕ್ತದಾನಿಗಳ ” ವಿ.ಎಸ್.ಸಿ ಬ್ಲಡ್ ಫಾರ್ ಲೈಫ್” ಹೆಸರಿನ ಗುಂಪೊಂದನ್ನು ರಚಿಸಿ,ತುರ್ತು ಅವಶ್ಯಕತೆ ಇರುವ ರೋಗಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತುರ್ತಾಗಿ ರಕ್ತದಾನ ಮಾಡುವ ವಿಭಿನ್ನ ಕಾರ್ಯಕ್ಕೆ ಕೈ ಹಾಕಿ,ಇದುವರೆಗೂ 2,683 ಯೂನಿಟ್ ರಕ್ತವನ್ನು ದಾನಮಾಡಿ ಅದೆಷ್ಟೋ ರೋಗಿಗಳಿಗೆ ಮರುಜನ್ಮ ನೀಡುವಲ್ಲಿ
ಮಹತ್ತರವಾದ ಪಾತ್ರ ವಹಿಸಿದೆ.1988 ರಿಂದ ಪ್ರಾರಂಭವಾದ 6 ವರ್ಷಗಳ ಬಳಿಕ ಎಡಗೈ ಆಲ್ ರೌಂಡರ್ ಪ್ರವೀಣ್ ಪಿತ್ರೋಡಿಯವರು ತನ್ನ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡು ಸತತ 24 ವರ್ಷಗಳಿಂದ ಇಂದಿನವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತಾರೆ.ಯಾರ ಬಳಿಯೂ ಇದುವರೆಗೂ ನಯಾ ಪೈಸೆಯನ್ನೂ ಸ್ವೀಕರಿಸದ ಇವರು ಹಲವಾರು ಆಟಗಾರರನ್ನು ರಾಜ್ಯಕ್ಕೆ ಪರಿಚಯಿಸಿದ ಕೀರ್ತಿ ನಾಯಕನಿಗೆ ಸಲ್ಲುತ್ತದೆ.
ದಿನ ಬೆಳಿಗ್ಗೆ ಯುವ ಪ್ರತಿಭೆಗಳನ್ನು ಒಗ್ಗೂಡಿಸಿ ತರಬೇತುಗೊಳಿಸಿ,ಮುಂದಿನ ಪೀಳಿಗೆಗೆ ಯುವ ಸಾಧಕರನ್ನು ಪರಿಚಯಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ.
ರೋವೆಲ್ ಪ್ರೀತ್,ರೋಹನ್ ಕೀತ್ ಸವ್ಯಸಾಚಿ ಸಹೋದರರು,ಹಿರಿಯ ಆಟಗಾರ ನಾಯಕರಾದ ಪ್ರವೀಣ್ ಪಿತ್ರೋಡಿ ಹಾಗೂ ಇತ್ತೀಚೆಗಿನ ರಾಜ್ಯಮಟ್ಟದ. ಪಂದ್ಯಾಟಗಳಲ್ಲಿ ಬ್ಯಾಟಿಂಗ್ ಸೆನ್ಸೇಷನ್ ಆಗಿ,ಉಡುಪಿಯ ರಿಯಲ್ ಫೈಟರ್ಸ್ ತಂಡದಲ್ಲಿ,ಆರಂಭಿಕ ಆಟಗಾರನಾಗಿ “ಡೆರಿನ್ ಪ್ರಶಾಂತ್”ಗುರುತಿಸಿಕೊಂಡಿರುತ್ತಾರೆ.
ತಮ್ಮ ತಂಡದ ಮೇಲಿನ ಅತೀವ ಪ್ರೀತಿ,ಕಾಳಜಿ,ಶಿಸ್ತು,ಧಾರ್ಮಿಕ,ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮೂರು ದಶಕಗಳ ಕ್ರೀಡಾ ಸೇವೆಯಲ್ಲಿ ಗುರುತಿಸಿಕೊಂಡ “ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ಸ್ (ರಿ)ಸಾಧನೆ ಶ್ಲಾಘನೀಯ,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ತಂಡದ ಮೂರು ದಶಕಗಳ ಸೇವೆ ಗುರುತಿಸುವಂತಾಗಲಿ ಎಂದು ಈ ಲೇಖನದ ಮೂಲಕ ಆಶಿಸುತ್ತೇನೆ…

Related Articles