ಸ್ಪೋರ್ಟ್ಸ್ ಮೇಲ್ ವರದಿ
ಜೆ.ಸುಚಿತ್(4) ಸ್ಪಿನ್ ಮೋಡಿಗೆ ನಲುಗಿದ ಮಹಾರಾಷ್ಟ್ರ ತಂಡ ರಣಜಿ ಟ್ರೋಫಿ ಎಲೈಟ್ ಗುಂಪು‘ಎ’ ನಾಲ್ಕನೇ ಸುತ್ತಿನ ಕರ್ನಾಟಕ ವಿರುದ್ಧದ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಕೇವಲ 113 ರನ್‌ಗಳಿಗೆ ಕುಸಿಯಿತು.
ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ಮಹಾರಾಷ್ಟ್ರದ ಯೋಜನೆ ಸಂಪೂರ್ಣ ನೆಲಕಚ್ಚಿತು. ಸ್ಥಳೀಯ ಆಟಗಾರ ಜಗದೀಶ್ ಸುಚಿತ್ ಅವರ ಪರಿಣಾಮಕಾರಿ ಸ್ಪಿನ್ ಮೋಡಿ ಹಾಗೂ ವಿನಯ್ ಕುಮಾರ್(2), ಅಭಿಮನ್ಯು ಮಿಥುನ್(2) ಮತ್ತು ರೋನಿತ್ ಮೋರೆ(2) ಅವರ ಮಾರಕ ದಾಳಿ ಎದುರಿಸಲಾಗದ ಮಹಾರಾಷ್ಟ್ರ 39.4 ಓವರ್‌ಗಳಿಗೆ ಕೇವಲ 113 ರನ್‌ಗಳಿಗೆ ಸರ್ವಪತನವಾಯಿತು.
ಮಹಾರಾಷ್ಟ್ರ ಪರ ಋತುರಾಜ್ ಗಾಯಕ್ವಾಡ್(39) ಹಾಗೂ ರೋಹಿತ್ ಮೊತ್ವಾನಿ(34) ಅವರನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸ್ ಮನ್‌ಗಳು 30ರ ಗಡಿ ದಾಟಲೇ ಇಲ್ಲ. ಸ್ವಪ್ನಿಲ್ ಗುಗಲೆ(1), ಚಿರಾಗ್ ಖುರಾನ(0), ಜೇ ಪಾಂಡೆ(20) ನಾಯಕ ರಾಹುಲ್ ತ್ರಿಪಾಠಿ(0) ನೌಶಾದ್ ಶೈಖ್(2) ಬಹುಬೇಗ ನಿರ್ಗಮಿಸಿದರು.
ಬಳಿಕ, ಪ್ರಥಮ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ದೇವ್‌ದತ್ ಪಡಿಕ್ಕಲ್(7) ಅವರನ್ನು ಸಂಕ್ಲೇಚ್ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು. ನಂತರ, ಕ್ರೀಸ್‌ಗೆ ಬಂದ ಮೀರ್ ಕೌನೆನ್ ಅಬ್ಬಾಸ್ ಕೇವಲ 15 ರನ್ ಗಳಿಸಿ ನಾಯಕ ರಾಹುಲ್ ತ್ರಿಪಾಠಿ ಎಸೆತದಲ್ಲಿ ಮೊತ್ವಾನಿಗೆ ಕ್ಯಾಚ್ ನೀಡಿದರು. ಕಳೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದ ಕೃಷ್ಣ ಮೂರ್ತಿ ಸಿದ್ಧಾರ್ಥ್ 11 ರನ್ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಆರಂಭದಿಂದಲೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಡಿ. ನಿಶ್ಚಲ್ ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲರಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಎದೆಗುಂದದೆ ಬ್ಯಾಟಿಂಗ್ ಮಾಡಿದ ನಿಶ್ಚಲ್, ಮಹಾರಾಷ್ಟ್ರ ಬೌಲರ್‌ಗಳನ್ನು ಕಾಡಿದರು. ತಾಳ್ಮೆೆಯ ಇನಿಂಗ್‌ಸ್ ಕಟ್ಟಿದ ಅವರು, 101 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 32 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಮತ್ತೊಂದು ತುದಿಯಲ್ಲಿ ನೈಟ್‌ಮನ್ ಆಗಿ ಬಂದ ಜೆ.ಸುಚಿತ್ ಎರಡು ರನ್ ಗಳಿಸಿ ಇಂದು ಬ್ಯಾಟಿಂಗ್ ಮುಂದುವರಿಸಿಲಿದ್ದಾರೆ. ಒಟ್ಟಾರೆ, ಮೊದಲ ದಿನ ಮುಕ್ತಾಯಕ್ಕೆೆ 40 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ ಕರ್ನಾಟಕ ಪ್ರಥಮ ಇನಿಂಗ್ಸ್ ನಲ್ಲಿ 70ರನ್ ದಾಖಲಿಸಿದೆ. ಇನ್ನೂ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಕೇವಲ 43 ರನ್ ಹಿನ್ನಡೆಯಲ್ಲಿದೆ.