ಅಭಿಯಾನ ಮುಗಿಸಿದ ಸಿಂಧು, ಶ್ರೀಕಾಂತ್

0
187
ಪುಜೋಹ್: 

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೊಲುವ ಮೂಲಕ ಚೀನಾ ಓಪನ್ ವಿಶ್ವ ಟೂರ್ ಸೂಪರ್ 750 ಟೂರ್ನಿಯಿಂದ ಹೊರನಡೆದರು.

ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಪಂದ್ಯದಲ್ಲಿ ಸಿಂಧು, ಚೀನಾದ ಹೇ ಬಿಗ್ಜಿಯಾವೊ ಎದುರು 17-21, 21-17, 15-21 ಅಂತರಗಳಿಂದ ಸೋಲು ಅನುಭವಿಸಿದರು. ಕಳೆದ ಪಂದ್ಯಗಳಲ್ಲಿನ ಜಯದ ವಿಶ್ವಾಸದೊಂದಿಗೆ ಕಣಕ್ಕೆ ಇಳಿದಿದ್ದ ಸಿಂಧು ಮೊದಲ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಾಲ್ಕು ಅಂಕ ಹಿನ್ನಡೆಯೊಂದಿಗೆ ಪರಾಭವಗೊಂಡರು. ಬಳಿಕ ಎರಡನೇ ಸೆಟ್‌ನಲ್ಲಿ ಯೋಜನೆಯೊಂದಿಗೆ ಕಣಕ್ಕೆ ಇಳಿದರು. ಅದರಂತೆ ಚುರುಕಿನ ಹೋರಾಟ ನಡೆಸಿದ ಭಾರತದ ಆಟಗಾರ್ತಿ ಅಂದುಕೊಂಡಂತೆ ಚೀನಾ ಆಟಗಾರ್ತಿಯನ್ನು 21-17 ಅಂತರದಲ್ಲಿ ಕಟ್ಟಿ ಹಾಕಿದರು. ತೀವ್ರ ಕುತೂಹಲ ಮೂಡಿಸಿದ ಅಂತಿಮ ಸೆಟ್ ನಲ್ಲಿ ಸಿಂಧು ಹೇಳಿಕೊಳ್ಳುವಂತ ಆಟ ಆಡುವಲ್ಲಿ ವಿಫಲರಾದರು. ಎದುರಾಳಿ ಆಟಗಾರ್ತಿ ಎದುರು ಸಿಂಧೂ ಆಟ ನಡೆಯಲಿಲ್ಲ. ಕೊನೆಯದಾಗ 15-21 ಅಂತರದಲ್ಲಿ ಸೋತು ತಮ್ಮ ಟೂರ್ನಿಯ ಅಭಿಯಾನ ಮುಗಿಸಿದರು.
ಪುರುಷರ ಸಿಂಗಲ್ಸ್ ನ  ಎಂಟರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ ಚೈನೀಸ್ ತೈಪೈನ ಚು ಥಿನ್ ಚೆನ್ ಎದುರು 14-21, 14-21 ನೇರಸೆಟ್‌ಗಳಿಂದ ಸೋಲಿಗೆ ಶರಣಾದರು. ಪಂದ್ಯ ಆರಂಭದಿಂದಲೂ ಉತ್ತಮ ಆಟವಾಡುವಲ್ಲಿ ವಿಫಲರಾದ ಕಿಡಂಬಿ ಮೊದಲ ಸೆಟ್‌ನಲ್ಲಿ ಏಳು ಹಾಗೂ ಎರಡನೇ ಸೆಟ್‌ನಲ್ಲಿಯೂ ಏಳು ಅಂಕ ಹಿನ್ನಡೆಯಾಗಿ ನಿರಾಸೆಗೊಳಗಾದರು. ಕ್ವಾರ್ಟರ್‌ನಲ್ಲಿ ಸೋಲನುಭವಿಸಿರುವುದಕ್ಕೆ ಬೇಸರವಾಗಿದೆ. ಮುಂದಿನ ಟೂರ್ನಿಗಳಲ್ಲಿ ಉತ್ತಮ ಆಟವಾಡಿ ಜಯ ಸಾಧಿಸುತ್ತೇನೆ’ ಎಂದು ಶ್ರೀಕಾಂತ್ ತಿಳಿಸಿದರು.
ಸೆಮಿಗೆ ಚಿರಾಗ್ ಜೋಡಿ
ಪುರುಷರ ಡಬಲ್‌ಸ್‌ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಿರಾಜ್ ಜೋಡಿ ಉತ್ತಮ ಪ್ರದರ್ಶನ ತೋರುವ ಮೂಲಕ ಸೆಮಿಗೆ ಅರ್ಹತೆ ಪಡೆಯಿತು. ಇಲ್ಲಿ ನಡೆದ ಪಂದ್ಯದಲ್ಲಿ ಚಿರಾಗ್ ಜೋಡಿ, ವಹು ನಾಯಕ ಮತ್ತು ಆಡೆ ಯೂಸುಫ್ ಸಾಂಟೊಸಾ ಜೋಡಿಯನ್ನು 16-21, 21-14, 21-15 ಅಂತರಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಪಂದ್ಯ ಆರಂಭದ ಮೊದಲ ಸೆಟ್‌ನಲ್ಲಿ ಐದು ಅಂಕ ಹಿನ್ನಡೆಯಾದ ಭಾರತ ಜೋಡಿ, ಎರಡನೇ ಸೆಟ್‌ನಲ್ಲಿ ಏಳು ಹಾಗೂ ಮೂರನೇ ಸೆಟ್‌ನಲ್ಲಿ ಆರು ಅಂಕ ಮುನ್ನಡೆಯಾಗುವ ಮೂಲಕ ಗೆಲುವಿನ  ನಗೆ ಬೀರಿತು.