Thursday, October 10, 2024

ಕೋಸ್ಟಾ ಬ್ಯಾಡ್ಮಿಂಟನ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಆರಂಭ

ಕುಂದಾಪುರ: ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಿ ಅವರನ್ನು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಪಳಗಿಸುವ ಗುರಿಹೊತ್ತಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಪ್ರಥಮವಾಗಿ ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಬಡಾಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಸೆ. 22 ರಂದು ಚಾಲನೆ ಸಿಕ್ಕಿತು. Costa Badminton Center started free coaching for government school students.

ಕೋಸ್ಟಾ ಬ್ಯಾಡ್ಮಿಂಟನ್‌ ಕೇಂದ್ರದ ನಿರ್ದೇಶಕರಲ್ಲಿ ಒಬ್ಬರಾದ ಕೊಸೆಸ್‌ ಡಿʼಕೋಸ್ಟಾ ಚಾಲನೆ ನೀಡಿದರು. ಪ್ರಧಾನ ಕೋಚ್‌ ವಿರಾಜಪೇಟೆಯ ಹೆಸಗೂರಿನ ಸೋಮಣ್ಣ ನಂಜಪ್ಪ ಅರಮನಮಾಡ, ಈ ಅಕಾಡೆಮಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಯಲ್‌ ಡಿಸಿಲ್ವಾ, ಮ್ಯಾನೇಜರ್‌ ನಿಧೇಶ್‌ ಆಚಾರಿ ಈ ಸಂದರ್ಭದಲ್ಲಿ ಹಾಜರಿದ್ದರು.

ಪಾಲ್ಗೊಂಡ ಎಲ್ಲ ಮಕ್ಕಳಿಗೂ ಕಿಟ್‌ ವಿತರಿಸಲಾಯಿತು. ಅಕಾಡೆಮಿಯ ಮುಖ್ಯಸ್ಥರಾದ ಅಜಿತ್‌ ಡಿ ಕೋಸ್ಟಾ ಅವರು ಕನ್ನಡ ಶಾಲಾ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿ ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು. ಕುಂದಾಪುರದ ಗ್ರಾಮೀಣ ಪ್ರದೇಶದಿಂದ ಒಬ್ಬರನ್ನಾದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲು ಸಜ್ಜುಗೊಳಿಸಬೇಕು ಎಂಬ ಉದ್ದೇಶದಿಂದಲೇ ಅಕಾಡೆಮಿ ಸ್ಥಾಪಿಸಿದವರು. ಅದಕ್ಕಾಗಿಯೇ ಸರಕಾರಿ ಶಾಲೆಯ ಮಕ್ಕಳಿಗೆ ತರಬೇತಿ ನೀಡುವ ಗುರಿ ಇಟ್ಟುಕೊಂಡರು.

ಕ್ರೀಡೆಯಿಂದ ಶಿಸ್ತು: ಈ ಸಂದರ್ಭದಲ್ಲಿ ಮಾತನಾಡಿದ ಅಕಾಡೆಮಿಯ ಪ್ರಧಾನ ಕೋಚ್‌ ಸೋಮಣ್ಣ ನಂಜಪ್ಪ, “ಬದುಕಿನಲ್ಲಿ ಶಿಸ್ತಿನ ಜೀವನನ್ನು ಸಾಗಿಸಬೇಕಾದರೆ ಶಿಸ್ತನ್ನು ಆಳವಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಿಸ್ತು ಸಹಜವಾಗಿಯೇ ನಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಚಿಕ್ಕಂದಿನಲ್ಲಿಯೇ ಶಿಸ್ತಿನ ಬದುಕನ್ನು ಆರಂಭಿಸಿದರೆ ನಮ್ಮ ಬದುಕಿಗೆ ಭದ್ರ ತಳಪಾಯ ಸಿಗುತ್ತದೆ. ನಿಮ್ಮನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುವಲ್ಲಿ ಅಕಾಡೆಮಿ ಬದ್ಧವಾಗಿರುತ್ತದೆ. ಎಲ್ಲರೂ ಚಾಂಪಿಯನ್ನರಾಗಲು ಸಾಧ್ಯವಿಲ್ಲ, ಆದರೆ ಎಲ್ಲರೂ ಉತ್ತಮ ಆರೋಗ್ಯವಂತ ಪ್ರಜೆಗಳಾಗಿ ಬದುಕಲು ಸಾಧ್ಯವಿದೆ. ಅದು ಕ್ರೀಡೆಯಿಂದ ಸಾಧ್ಯ. ಅಜಿತ್‌ ಅವರ ಕನಸು ನನಸಾಗಬೇಕು. ಅದಕ್ಕಾಗಿಯೇ ಅವರು ಇಷ್ಟು ಉತ್ತಮ ಗುಣಮಟ್ಟದ ಬ್ಯಾಡ್ಮಿಂಟನ್‌ ಕೇಂದ್ರವನ್ನು ಸ್ಥಾಪಿಸಿದ್ದಾರೆ. ನಾವು ಅಷ್ಟೇ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು,” ಎಂದು ಹೇಳಿದರು. ಸ್ಟೇಟ್‌ ರಾಂಕಿಂಗ್‌ ಆಟಗಾರರೂ ಆಗಿರುವ ಸೋಮಣ್ಣ ನಂಜಪ್ಪ ಅವರು ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಆಟಗಾರ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೋಸ್ಟಾ ಬ್ಯಾಡ್ಮಿಂಟನ್‌ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಯಲ್‌ ಡಿ ಸಿಲ್ವಾ ಅವರು ಮಾತನಾಡಿ, “ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ಉದ್ದೇಶ ಸ್ಪಷ್ಟವಾಗಿದೆ. ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡುವುದು ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವುದ. ಅಜಿತ್‌ ಡಿಕೋಸ್ಟಾ ಅವರು ಈ ನಿಟ್ಟಿನಲ್ಲಿ ಉತ್ತಮ ಶ್ರಮ ವಹಿಸಿದ್ದಾರೆ. ಇಲ್ಲಿ ಹಲವು ಜನರ ಶ್ರಮ ಮತ್ತು ಬದ್ಧತೆ ಇದೆ. ನೀವೆಲ್ಲರೂ ಈ ಉಚಿತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬದುಕಿನಲ್ಲಿ ಯಶಸ್ಸು ಕಾಣಬೇಕು, ಕ್ರೀಡೆಯಲ್ಲಿ ಯಶಸ್ಸು ಸಾಧಿಸಿದರೆ ಅದು ಉನ್ನತ ಶಿಕ್ಷಣಕ್ಕೂ ನೆರವಾಗುತ್ತದೆ. ಕ್ರೀಡೆಯಲ್ಲಿ ಯಶಸ್ಸು ಕಂಡರೆ ಸಮಾಜದಲ್ಲಿ ಗೌರವ ಸಿಗುತ್ತದೆ. ನಿಮಗೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ಮೂಲಭೂತ ಸೌಕರ್ಯ ಸಿಕ್ಕಿದೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಿಮಗೆ ಸಿಕ್ಕಿದೆ. ಶಿಸ್ತಿನಿಂದ ಕಲಿತು ಹೊಸ ಚಾಂಪಿಯನ್ನರಾಗಿ,” ಎಂದು ಸಲಹೆ ನೀಡಿದರು.

Related Articles