ಕಂಠೀರವದಲ್ಲಿ ಕೇವಲ ಅಥ್ಲೆಟಿಕ್ಸ್, ನೋ ಫುಟ್ಬಾಲ್: ಮುತ್ತಪ್ಪ ರೈ

0
434
ಸ್ಪೋರ್ಟ್ಸ್ ಮೇಲ್ ವರದಿ

ಕಂಠೀರವ ಕ್ರೀಡಾಂಗಣ ರಾಜ್ಯದಲ್ಲಿ ಇರುವ ಏಕೈಕ ಅಥ್ಲೆಟಿಕ್ಸ್ ಅಂಗಣ, ಇಲ್ಲಿ ಅಥ್ಲೆಟಿಕ್ಸ್ ಹೊರತಾಗಿ ಫುಟ್ಬಾಲ್ ಅಥವಾ ಇತರ ಕ್ರೀಡೆಗಳಿಗೆ ಅವಕಾಶ ನೀಡುವುದು ಸೂಕ್ತವಲ್ಲ. ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ  ಅಧಿಕಾರಿ ಸ್ವೀಕರಿಸಿದ ಸಮಾಜ ಸೇವಕ ಮುತ್ತಪ್ಪ ರೈ ಅವರು ಹೇಳಿದ್ದಾರೆ.

ರಾಜ್ಯ ಸರಕಾರ ಕ್ರೀಡಾಂಗಣವನ್ನು ಬೆಂಗಳೂರು ಎಫ್ ಸಿ ತಂಡಕ್ಕೆ ಫುಟ್ಬಾಲ್ ಆಡಲು ಬಾಡಿಗೆ ನೀಡಿದೆ. ಇದರಿಂದಾಗಿ ರಾಜ್ಯದ ಕ್ರೀಡಾಪಟುಗಳು ಕೇವಲ ಟ್ರ್ಯಾಕ್‌ನಲ್ಲಿ  ಅಭ್ಯಾಸ ನಡೆಸುವಂತಾಗಿದೆ. ಶಾಟ್‌ಪುಟ್, ಜಾವಲಿನ್, ಹ್ಯಾಮರ್ ಥ್ರೋ ಮೊದಲಾದ ಕ್ರೀಡೆಗಳ ಅಭ್ಯಾಸಕ್ಕೆ ಸ್ಥಳ ಇಲ್ಲದಂತಾಗಿದೆ. ಇದರಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕ್ರೀಡಾಪಟುಗಳು ಪದಕ ಗೆಲ್ಲುವಲ್ಲಿ ಕೆಲವು ವರ್ಷಗಳಿಂದ ವಿಫಲರಾಗುತ್ತಿದ್ದಾರೆ. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುತ್ತಪ್ಪ ರೈ, ‘ಅಥ್ಲೆಟಿಕ್ಸ್ ಕ್ರೀಡಾಂಗಣ ಕೇವಲ ಅಥ್ಲೆಟಿಕ್ಸ್ ಚಟುವಟಿಕೆಗಳಿಗೆ ಮೀಸಲಿಡಬೇಕು. ಈ ಕುರಿತು ಅಂತಾರಾಷ್ಟ್ರೀಯ ಹಾಲಿ ಹಾಗೂ ಮಾಜಿ ಕ್ರೀಡಾಪಟಕಗಳೊಂದಿಗೆ ಚರ್ಚಿಸಲಾಗುವುದು. ನಾನು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇನೆ. ಇನ್ನು ಕೆಲವು ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಅಥ್ಲೀಟ್‌ಗಳ ಪರವಾಗಿ ಶ್ರಮಿಸುವುದು ನಮ್ಮ ಮುಖ್ಯಉದ್ದೇಶ,‘ ಎಂದರು.
ಜಿಲ್ಲಾ ಮಟ್ಟದಲ್ಲಿ ಪ್ರತಿ ವರ್ಷ ಕ್ರೀಡಾಕೂಟಗಳನ್ನು ನಡೆಸಬೇಕು. ಅಲ್ಲಿ ಪ್ರತಭೆಗಳ ಅನ್ವೇಷಣೆಯಾಗಬೇಕು. ಜಿಲ್ಲಾ ಕ್ರೀಡಾಂಗಣಗಳಲ್ಲಿ ನಮ್ಮ ಅಥ್ಲೀಟ್‌ಗಳು ಸಕ್ರಿಯರಾಗಿರಬೇಕು. ಸಂಬಂಧಪಟ್ಟ ಜಿಲ್ಲೆಯ ಅಥ್ಲೆಟಿಕ್ಸ್ ಸಂಘನೆಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು. ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್

ಕಂಠೀರವ ಕ್ರೀಡಾಂಗಣಕ್ಕೆ ಹೊಸ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದ ನಂತರ ಬೆಂಗಳೂರಿನಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆಸುವ ಬಗ್ಗೆ ಭಾರತೀಯ ಅಥ್ಲೆಟಿಕ್ಸ್  ಫೆಡರೇಷನ್ ಜತೆ ಮಾತುಕತೆ ನಡೆಸಲಾಗುವುದು. ಸದ್ಯದಲ್ಲೇ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ವೆಬ್‌ಸೈಟ್ ನಿರ್ಮಿಸಿ, ಅದರಲ್ಲಿ ರಾಜ್ಯದ ಹಾಲಿ ಮಾಜಿ  ಅಥ್ಲೀಟ್‌ಗಳ ಮಾಹಿತಿ ಸಿಗುವಂತೆ ಮಾಡಲಾಗುವುದು ಎಂದರು.

ಸಾಧಕರಿಗೆ ಸನ್ಮಾನ

ಇತ್ತೀಚಿಗೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಕ್ರೀಡಾ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ಅಧ್ಯಕ್ಷ ಮುತ್ತಪ್ಪ ರೈ ತಿಳಿಸಿದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನವನ್ನೂ ಇನ್ನು ಮುಂದೆ ನೀಡುವುದಾಗಿ ತಿಳಿಸಿದರು.

ಬಿಗಿ ಭದ್ರತೆ, ಸಂಭ್ರಮ

ಮುತ್ತಪ್ಪ ರೈ  ಅವರ ಆಗಮನಕ್ಕೆ ಶ್ರೀ ಕಂಠೀರವ ಕ್ರೀಡಾಂಗಣವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅತ್ಯಂತ ಸುಂದರವಾಗಿ ಶೃಂಗಾರ ಮಾಡಲಾಗಿತ್ತು. ಕ್ರೀಡಾಂಗಣ ಪ್ರವೇಶವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಪೊಲೀಸ್ ಭದ್ರತೆ ಅಲ್ಲದೆ, ರೈ ಅವರ ಖಾಸಗಿ ಭದ್ರತಾ ಪಡೆ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಜಯಕರ್ನಾಟಕ ಸಂಘಟನೆಯ ಸಹಸ್ರಾರು ಸದಸ್ಯರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ  ಮಾತನಾಡಿದ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಪ್ಯಾರಾಲಿಂಪಿಕ್ಸ್ ಕೋಚ್ ಕೆ. ಸತ್ಯನಾರಾಯಣ, ‘ಮುತ್ತಪ್ಪ ರೈ ಅವರು ಕ್ರೀಡೆಗೆ ಬಹಳ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಪ್ರತಿಯೊಂದು ಕ್ರೀಡಾಕೂಟಕ್ಕೂ ನೆರವು ನೀಡುತ್ತಿದ್ದಾರೆ. ಎಂ.ಆರ್. ಸ್ಪೋರ್ಟ್ಸ್ ಫೌಂಡೇಷನ್ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ರಾಮನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಪರಾಗಿ ಅಲ್ಲಿಯ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ರಾಜ್ಯಮಟ್ಟದ ಕ್ರಾಸ್‌ಕಂಟ್ರಿ ರೇಸ್ ಅನ್ನು ರಾಷ್ಟ್ರೀಯ ಗುಣಮಟ್ಟದಲ್ಲಿ ನಡೆಸಿದ್ದಾರೆ. ಅಥ್ಲೆಟಿಕ್ಸ್ ಸಂಸ್ಥೆಗೆ  ರೈ ಅವರ ಆಗಮನ ಮತ್ತಷ್ಟು ಶಕ್ತಿ ಬಂದಂತಾಗಿದೆ ,‘ ಎಂದರು.

ವಾಲಿಬಾಲ್ ಸಂಸ್ಥೆಯಿಂದ ಅಭಿನಂದನೆ

ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮುತ್ತಪ್ಪ ರೈ ಅವರಿಗೆ ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಡಾ. ಬೆಟ್ಟೇ ಗೌಡ ಹಾಗೂ ಕಾರ್ಯದರ್ಶಿ ಕೆ. ನಂದ ಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ  ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಕೆ. ನಂದಕುಮಾರ್, ‘ಮುತ್ತಪ್ಪ ರೈ ಅವರು ಯಾವುದೇ ಕ್ರೀಡಾಕೂಟವಿರಲಿ ಇದುವರೆಗೂ ಉತ್ತಮ ರೀತಿಯಲ್ಲಿ ನೆರವು ನೀಡಿದ್ದಾರೆ. ಅವರ ಆಗಮನದಿಂದ ರಾಜ್ಯದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡೆಗೆ ಹೊಸ ಚೈತನ್ಯ ಸಿಗಲಿದೆ. ರಾಜ್ಯದ ಅಥ್ಲೆಟಿಕ್ಸ್ ಸರಿಯಾದ ಟ್ರ್ಯಾಕ್‌ನಲ್ಲಿ ಇನ್ನು ಉತ್ತಮ ರೀತಿಯಲ್ಲಿ ಮುಂದೆ ಸಾಗಲಿದೆ, ವಾಲಿಬಾಲ್ ಸಂಸ್ಥೆಯಿಂದ ರೈ ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇವೆ,‘ ಎಂದರು.

ಈ ರೀತಿಯ ಕಾರ್ಯಕ್ರಮ ನೋಡಿರಲಿಲ್ಲ

ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯ ಶ್ರೀವಾತ್ಸವ್ ಅವರು ಮಾತನಾಡಿ, ‘ನನ್ನ ಕ್ರೀಡಾ ಬದುಕಿನಲ್ಲಿ ಅಥವಾ ಆಡಳಿತದಲ್ಲಿ  ಈ ರೀತಿಯ ವೈಭವದ ಕಾರ್ಯಕ್ರಮನ್ನು ನೋಡಿರಲಿಲ್ಲ. ಕ್ರೀಡಾಸಂಸ್ಥೆಗಳಿಗೆ ಇಂಥ ವ್ಯಕ್ತಿಗಳ ಅಗತ್ಯವಿದೆ. ಕ್ರೀಡಾಪಟಗಳಿಗೆ ಪ್ರೋತ್ಸಾಹ ನೀಡುವುದೆಂದರೆ ಬರೇ ಬಾಯಿ ಮಾತು ಆಗಬಾರದು. ಅವರಿಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡಬೇಕು. ರೈ ಅವರಲ್ಲಿ ಅಂಥ ಸಾಮರ್ಥ್ಯ ಇದೆ. ಯಾವ ರೀತಿಯಲ್ಲಿ ಆಡಳಿತ ವ್ಯವಸ್ಥೆ ನಡೆಸಬೇಕು. ಗ್ರಾಮೀಣ ಪ್ರತಿಭೆಗಳನ್ನು ಯಾವ ರೀತಿಯಲ್ಲಿ ಗುರುತಿಸಬೇಕು ಎಂಬುದರ ಬಗ್ಗೆ ಮಹಿತಿ ನೀಡಲಾಗುವುದು. ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಗೆ ಕಾರ್ಯಕ್ರಮ ಹಾಗೂ ಚುನಾವಣೆ ಕುರಿತು ವರದಿ ಸಲ್ಲಿಸಲಾಗುವುದು. ಕರ್ನಾಟಕದ ಕ್ರೀಡಾಪಟುಗಳಿಗೆ ರೈ ಅವರಿಂದ ಉತ್ತಮ ರೀತಿಯಲ್ಲಿ ನೆರವಾಗಲಿದೆ ಎಂಬ ನಂಬಿಕೆ ಇದೆ,‘ ಎಂದರು.

2018-22ನೇ ಸಾಲಿನ ಕೆಎಎ ಪದಾಧಿಕಾರಿಗಳು

ಅಧ್ಯಕ್ಷರು- ಎನ್. ಮುತ್ತಪ್ಪ ರೈ, ಹಿರಿಯ ಉಪಾಧ್ಯಕ್ಷರು- ಎಚ್.ಟಿ. ಮಹಾದೇವ್, ಉಪಾಧ್ಯಕ್ಷರು-ಸದಾನಂದ ಎನ್.ನಾಯಕ್, ಎಸ್. ಎಸ್. ಹಿರೇಮಠ್, ಸೋಮಶೇಖರ್ ಎಸ್., ಬಿ.ಎಲ್. ಭಾರತಿ.
ಕಾರ್ಯದರ್ಶಿ- ಎ.ರಾಜವೇಲು, ಹಿರಿಯ ಜಂಟಿ ಕಾರ್ಯದರ್ಶಿ-ಅಜಯ್ ಕುಮಾರ್, ಜಂಟಿ ಕಾರ್ಯದರ್ಶಿ-ಎ.ಎನ್. ಪ್ರಭಾಕರ್, ಎಂ.ಕೆ. ಶ್ರೀನಿವಾಸ್ ಹಾಗೂ ಆರ್.ಬಿ. ಕಲ್ಲೇಶ್, ಖಚಾಂಚಿ-ಸುನಿಲ್ ಕುಮಾರ್ ಶೆಟ್ಟಿ.