ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜನವರಿ 5, 2025 ರಂದು ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ರೇಸ್ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಇದನ್ನು ಓದಿದಾಗ ಅಚ್ಚರಿಯಾಯಿತು. ಏಕೆಂದರೆ ಜಗತ್ತಿನ ಎಲ್ಲ ಕಡೆ ಕ್ರಾಸ್ ಕಂಟ್ರಿ ರೇಸ್ ನಡೆಯುವುದು ನಗರದ ಹೊರ ವಲಯಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ. ನಗರಗಳಲ್ಲಿ ನಡೆಯುವುದು ಮ್ಯಾರಥಾನ್ ಅಥವಾ ರಸ್ತೆ ಓಟ. In Karnataka Cross country race means road race 31 Districts not shown interest to host the event.
ಯಾಕೆ ಹೀಗೆ? ಎಂದು ವಿಚಾರಿಸಿದಾಗ, ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಈ ಕ್ರಾಸ್ ಕಂಟ್ರಿ ರೇಸ್ ಆಯೋಜಿಸಲು ಯಾರೂ ಸಿದ್ಧರಿಲ್ಲವಂತೆ. ರಾಜ್ಯದಲ್ಲಿ ಕ್ರೀಡಾ ಸಚಿವರು ಇಲ್ಲದೆ ಇರುವಾಗ ಇಂಥ ಗೊಂದಲಗಳು ಸೃಷ್ಠಿಯಾಗುವುದು ಸಹಜ. ಪ್ರಭುತ್ವ ಇರುವವರು ತಮಗೆ ಬೇಕಾದ, ತಮ್ಮ ಪ್ರತಿಷ್ಠೆಗೆ ಅನುಕೂಲವಾದ ಕ್ರೀಡಾಕೂಟಗಳನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿ ಕೈತೊಳೆದುಕೊಳ್ಳುತ್ತಾರೆ.
ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯು ಕರ್ನಾಟಕಕ್ಕೆ ಈ ಆತಿಥ್ಯವನ್ನು ಒದಗಿಸಿದೆ. ಇದು ವರ್ಷದ ಆರಂಭದಲ್ಲೇ ನಿರ್ಣಯವಾಗು ವೇಳಾಪಟ್ಟಿ. ಇಲ್ಲಿ ಆಯ್ಕೆಯಾದ ಓಟಗಾರರನ್ನು ರಾಷ್ಟ್ರ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಜನವರಿ 12, 2025 ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ರಾಷ್ಟ್ರೀಯ ಕ್ರಾಸ್ ಕಂಟ್ರಿ ರೇಸ್ ನಡೆಯಲಿದೆ. ಅಲ್ಲಿಗೆ ಕರ್ನಾಟಕದ ಸ್ಪರ್ಧಿಗಳನ್ನು ಕಳುಹಿಸಲು ಈ ಓಟವನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗುತ್ತದೆ. ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಡಿಸೆಂಬರ್ 27 ರಂದು ಪ್ರಕಟಣೆಯನ್ನು ಹೊರಡಿಸಿದ್ದು. ಇದನ್ನು ಓದಿದಾಗ ಬೆಂಗಳೂರು ಹೊರತಾಗಿ ಬೇರೆ ಜಿಲ್ಲೆಯ ಓಟಗಾರರು ಪಾಲ್ಗೊಳ್ಳವುದು ಕಷ್ಟ ಅನಿಸುತ್ತಿದೆ.
ವಸತಿ ಸೌಲಭ್ಯ ಇಲ್ಲ, 300 ರೂ. ಪ್ರವೇಶ ಶುಲ್ಕ: ಈ ಕ್ರಾಸ್ ಕಂಟ್ರಿ ಓಟದಲ್ಲಿ ಪಾಲ್ಗೊಳ್ಳ ಬಯಸುವವರು 300 ರೂ.ಗಳನ್ನು ಸಂದಾಯ ಮಾಡಿ ಆನ್‌ಲೈನ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಆದರೆ ಓಟಗಾರರಿಗೆ ಯಾವುದೇ ರೀತಿಯ ವಸತಿ ಸೌಲಭ್ಯ ನೀಡಲಾಗುವುದಿಲ್ಲ. ಸ್ಪರ್ಧಿಗಳೇ ವಸತಿ ಸೌಲಭ್ಯವನ್ನು ಮಾಡಿಕೊಳ್ಳಬೇಕೆಂದು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಎ. ರಾಜವೇಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 2, 2025ರ ಒಳಗಾಗಿ ಓಟಗಾರರು ತಮ್ಮ ಹೆಸರನ್ನು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು.
ಪುರುಷರ 10 ಕಿಮೀ ಓಟ, 20 ವರ್ಷ ವಯೋಮಿತಿಯವರಿಗಾಗಿ 8 ಕಿಮೀ ಓಟ, 18 ವರ್ಷ ವಯೋಮಿತಿಯ ಹುಡುಗರಿಗಾಗಿ 6 ಕಿಮೀ ಓಟ ಹಾಗೂ 16 ವರ್ಷ ವಯೋಮಿತಿಯ ಬಾಲಕರಿಗಾಗಿ 6 ಕಿಮೀ ಓಟವಿರುತ್ತದೆ. ವನಿತೆಯರಿಗಾಗಿ 10 ಕಿಮೀ ಓಟ, 20 ವರ್ಷ ವಯೋಮಿತಿಯ ವನಿತೆಯರಿಗಾಗಿ 6 ಕಿಮೀ ಓಟ, 18 ವರ್ಷ ವಯೋಮಿತಿಯ ಬಾಲಕಿಯರಿಗಾಗಿ 4 ಕಿಮೀ ಓಟ, 16 ವರ್ಷ ವಯೋಮಿತಿಯ ಬಾಲಕಿಯರಿಗಾಗಿ 2 ಕಿಮೀ ಓಟದ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಮೂಲಗಳ ಪ್ರಕಾರ ರಾಜ್ಯದಲ್ಲಿ ಯಾವುದೇ ಜಿಲ್ಲಾ ಸಂಘಟನೆಗಳು ಈ ಕೂಟವನ್ನು ಆಯೋಜಿಸಲು ಒಪ್ಪಿಕೊಳ್ಳದೆ ಇದ್ದ ಕಾರಣ ಬೆಂಗಳೂರಿನಲ್ಲಿ ಅನಿವಾರ್ಯವಾಗಿ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಒಂದಿಷ್ಟು ಸ್ಪರ್ಧಿಗಳನ್ನು ರಾಷ್ಟ್ರ ಮಟ್ಟಕ್ಕೆ ಕಳುಹಿಸಬೇಕಾಗಿದೆ.
ಈ ರೀತಿಯ ಅವ್ಯವಸ್ಥೆಯಲ್ಲಿ ಕ್ರಾಸ್ ಕಂಟ್ರಿ ನಡೆಸುವುದರಿಂದ ಬೆಂಗಳೂರಿನಲ್ಲಿರುವ ಓಟಗಾರರು ಮಾತ್ರ ಪಾಲ್ಗೊಳ್ಳುತ್ತಾರೆ. ಮತ್ತು ಆಯ್ಕೆಯಾಗುತ್ತಾರೆ. ಬೇರೆ ಜಿಲ್ಲೆಗಳಲ್ಲಿರುವ ಓಟಗಾರರು ಪಾಲ್ಗೊಳ್ಳುವುದು ಕಷ್ಟ. ಏಕೆಂದರೆ ಬೆಂಗಳೂರಿನಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಾಗ ಬರುವುದಾದರೂ ಹೇಗೆ? ಎಲ್ಲಕ್ಕಿಂತ ಮುಖ್ಯವಾಗಿ ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯವಾಗಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಇಂಥ ಓಟಗಳಲ್ಲಿ ಪಾಲ್ಗೊಳ್ಳುವುದೂ ಕಷ್ಟ. ಇದನ್ನು ಪೂರ್ವಯೋಜಿತವಾಗಿ ನಡೆಸಿರುತ್ತಿದ್ದರೆ ರಾಜ್ಯದ ಎಲ್ಲ ಭಾಗಗಳ ಕ್ರೀಡಾಪಟುಗಳು ಪಾಲ್ಗೊಳ್ಳುತಿದ್ದರು. ಈಗ ಕ್ರಾಸ್ ಕಂಟ್ರಿ ಹೋಗಿ ರಾಜ್ಯ ಮಟ್ಟದ ರಸ್ತೆ ಓಟವನ್ನು ನಡೆಸುವುದು ಅನಿವಾರ್ಯವಾಗಿದೆ.