Saturday, July 27, 2024

ಪಂದ್ಯವನ್ನೂ ಗೆಲ್ಲಿ, ಜತೆಯಲ್ಲಿ ಹೃದಯವನ್ನೂ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಕಪ್ ರಾಷ್ಟ್ರೀಯ ವಾಲಿಬಾಲ್ ಪಂದ್ಯಗಳು ನಡೆಯುತ್ತಿರುವುದನ್ನು ಗಮನಿಸಿದಾಗ ವಾಜಪೇಯಿ ಅವರಿಗೆ ಕ್ರೀಡೆಯ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ನಡೆಯುವ ಅತ್ಯಂತ ಶ್ರೀಮಂತ ಹಾಗೂ ಪ್ರಸಿದ್ಧ ವಾಲಿಬಾಲ್ ಚಾಂಪಿಯನ್‌ಷಿಪ್ ಎಂದರೆ ಅದು ಅಟಲ್ ಬಿಹಾರಿ ವಾಜಪೇಯಿ ಕಪ್.

ರಾಜಕೀಯ ಮಾತ್ರವಲ್ಲ ಕ್ರೀಡೆಯ ಮೂಲಕವೂ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರುವಾಗಿ ನಮ್ಮ ಮುಂದೆ ಸದಾ ಹಸಿರಾಗಿ ಉಳಿಯುತ್ತಾರೆ. ಪಾಕಿಸ್ತಾನಕ್ಕೆ  ಐತಿಹಾಸಿಕ ಟೆಸ್ಟ್ ಪಂದ್ಯವನ್ನಾಡಲು ಹೊರಟ  ಭಾರತ ತಂಡಕ್ಕೆ ಅಂದಿನ ಪ್ರಧಾನಿ ಉಡುಗೊರೆಯಾಗಿ ನೀಡಿದ  ಬ್ಯಾಟ್‌ನಲ್ಲಿರುವ ಒಂದು ಮಾತು ಈ ಜಗನಲ್ಲಿ ಈಗಲೂ ಮಾರ್ದನಿಗೊಳ್ಳುತ್ತಿದೆ. ಕ್ರೀಡೆಯಿಂದ ಏನಾಗಬೇಕೆಂಬುದನ್ನು ಅಟಲ್‌ಜೀ ಮತ್ತೊಮ್ಮೆ ಜಗತ್ತಿಗೆ ಹೇಳಿದ್ದಾರೆ. ಈಗ ನಾವು ಪಂದ್ಯಗಳನ್ನು ಗೆಲ್ಲುತ್ತೇವೆ, ಆದರೆ ಹೃದಯ ಗೆಲ್ಲುತ್ತಿಲ್ಲ…

ಪಂದ್ಯವನ್ನೂ ಗೆಲ್ಲಿ, ಜತೆಯಲ್ಲಿ ಹೃದಯವನ್ನೂ

2004 ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿತು. ಅಂದಿನ ಪ್ರ‘ಭಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಸಿರು ನಿಶಾನೆ ತೋರಿದರು. 1985 ರ ನಂತರ ಮೊದಲ ಬಾರಿಗೆ ಭಾರತ ತಂಡ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಆಗ ತಂಡದ ಮ್ಯಾನೇಜರ್ ಆಗಿ ಕನ್ನಡಿಗ ಡಾ. ರತ್ನಾಕರ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದರು. ಪಾಕಿಸ್ತಾನಕ್ಕೆ ತೆರಳುವ  ಮುನ್ನ ಭಾರತ ತಂಡ ಹೊಸದಿಲ್ಲಿಯಲ್ಲಿ ಪ್ರಧಾನಿ ಅವರನ್ನು ಭೇಟಿಯಾಗುವ  ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದೇ ರೀತಿ ಪ್ರಧಾನಿ ವಾಜಪೇಯಿ ಕೂಡ ತಂಡವನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡರು. ಈಗ ಬಿಸಿಸಿಐನಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಡಾ. ರತ್ನಾಕರ ಶೆಟ್ಟಿ ಅಂದು ಭಾರತ ತಂಡದ ಮ್ಯಾನೇಜರ್. ಅಟಲ್‌ಜೀ ಅವರೊಂದಿಗಿನ ಮಾತುಕತೆಯ ನೆನಪುಗಳನ್ನು  ಡಾ. ಶೆಟ್ಟಿ ಸ್ಪೋರ್ಟ್ಸ್ ಮೇಲ್ ಜತೆ ಹಂಚಿಕೊಂಡಿದ್ದಾರೆ.
ಮುಂಬಯಿಯಿಂದ ಮಾತನಾಡಿದ ಡಾ. ಶೆಟ್ಟಿ, ‘ಈಗಿನ ರಾಜಕೀಯ ಸ್ಥಿತಿಯಲ್ಲಿ ಅಂತ ತೀರ್ಮಾನವನ್ನು ಕೈಗೊಳ್ಳುವುದು ಕಷ್ಟ. ಆದರೆ ವಾಜಪೇಯಿ ಮಾನವ ಪ್ರೇಮಿ, ಅವರಿಗೆ ದ್ವೇಷ ಎಂದರೆ ಆಗದು. ಸದಾ ಪ್ರೀತಿಯ ಮಾತುಗಳನ್ನಾಡುತ್ತಿದ್ದರು.   ಸುಮಾರು 20,000 ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ವೀಸಾ ಕಲ್ಪಿಸಿ ಪಾಕಿಸ್ತಾನಕ್ಕೆ ಹೋಗಿ ಪಂದ್ಯ ವೀಕ್ಷಿಸುವಂತೆ ನೆರವಾದರು,‘ ಎಂದು ಡಾ. ಶೆಟ್ಟಿ ನೆನಪುಗಳನ್ನು ಮೆಲುಕು ಹಾಕಿದರು.
ಸೌರವ್ ಗಂಗೂಲಿ ಅಂದು  ಭಾರತ ತಂಡದ ನಾಯಕತ್ವ ವಹಿಸಿದ್ದರು. ಸೌರವ್ ಅವರೊಂದಿಗೆ ಮಾತನಾಡುವಾಗ ಪಂದ್ಯವನ್ನು ಗೆಲ್ಲುವುದರ ಜತೆಯಲ್ಲಿ ಪಾಕಿಸ್ತಾನದ ಜನರ ಹೃದಯವನ್ನೂ ಗೆದ್ದು ಬನ್ನಿ ಎಂದು ಅಟಲ್ ಜೀ ಹೇಳಿರುವುದು ಅಂದು ಸಾಕಷ್ಟು ಸುದ್ದಿಯಾಗಿತ್ತು. ಅವರ ಈ ಮಾತನ್ನು ಉಡುಗೊರೆಯಾಗಿ ನೀಡಿದ ಬ್ಯಾಟ್‌ನಲ್ಲಿ ಬರೆಯಲಾಗಿತ್ತು. ಈಗ ನಾವು ಪಂದ್ಯವನ್ನು ಗೆಲ್ಲುತ್ತೇವೆ ಆದರೆ ಹೃದಯ ಗೆಲ್ಲುವ ಪಂದ್ಯಗಳು ನಡೆಯುತ್ತಿಲ್ಲ.
‘ಅದು ನಮ್ಮ ಪಾಲಿಗೆ ಎರಡು ಕುತೂಹಲ. ಒಂದೆಡೆ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ, ಇನ್ನೊಂದೆಡೆ ಪ್ರಧಾನಿ ವಾಜಪೇಯಿ ಅವರನ್ನು ತಂಡದೊಂದಿಗೆ ನೋಡುವ ಭಾಗ್ಯ, ನಿಜವಾಗಿಯೂ ವಾಜಪೇಯಿ ಅವರು ಅಜಾತ ಶತ್ರು. ಅವರಿಗೆ ವೈರಿಗಳೇ ಇಲ್ಲ, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ತಾನು ಪ್ರಧಾನಿ ಎಂಬುದನ್ನು ಆ ಕ್ಷಣಕ್ಕೆ ಮರೆತು ಎಲ್ಲರೊಂದಿಗೂ ಬೆರೆತು ಮಾತನಾಡಿದರು,‘ ಎಂದು ಡಾ. ಶೆಟ್ಟಿ ತಿಳಿಸಿದರು.
ಇದೇ ವೇಳೆ ಭಾರತ ತಂಡಕ್ಕೆ ವಾಜಪೇಯಿ ಅವರು ಬ್ಯಾಟೊಂದನ್ನು ಉಡುಗೊರೆಯಾಗಿ ನೀಡಿದರು. ಆಗ ತಂಡದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಜಹೀರ್ ಖಾನ್ ಹಾಗೂ ಇರ್ಫಾನ್  ಪಠಾಣ್ ಪ್ರಮುಖರಾಗಿದ್ದರು. ಭಾರತ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

Related Articles