Saturday, February 24, 2024

ನಿಟ್ಟೆ ಕ್ರಿಕೆಟ್‌ ಹಬ್ಬ: ರಾಯಲ್‌ ಇಂಡಿಯನ್ಸ್‌ಗೆ ಜಯ

ನಿಟ್ಟೆ: ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಬ್ರಹ್ಮಾವರ ಮತ್ತು ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಕಟಪಾಡಿ ಇದರ ವತಿಯಿಂದ ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ನಿಟ್ಟೆ ಇದರ ಆಶ್ರಯದಲ್ಲಿ ಆರಂಭಗೊಂಡ 50 ವರ್ಷ ವಯೋಮಿತಿಯ ಮೂರು ದಿನಗಳ ಕ್ರಿಕೆಟ್‌ ಟೂರ್ನಿಯ ಮೊದಲ ದಿನದಲ್ಲಿ ಪ್ರವಾಸಿ ರಾಯಲ್‌ ಇಂಡಿಯನ್ಸ್‌ ತಂಡ 6 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ BACA KRS ಇವೆಲೆನ್‌ ತಂಡ 28 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿತು. ಉದಯ್‌ ಕುಮಾರ್‌ (28), ಅಲ್ವಿನ್‌ ಫೆರ್ನಾಂಡೀಸ್‌ (23) ತಂಡದ ಸಾಧಾರಣ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು. ರಾಯಲ್‌ ಇಂಡಿಯನ್ಸ್‌ ಪರ ರಾಜೇಶ್‌ ಜಾಂಬ್ಲೆ 6 ಓವರ್‌ಗಳಲ್ಲಿ ಕೇವಲ 9 ರನ್‌ ನೀಡಿ 4 ವಿಕೆಟ್‌ ಗಳಿಸಿದರೆ, ಅರುಣ್‌ ಕುಮಾರ್‌ 3 ಓವರ್‌ಗಳಲ್ಲಿ  18 ರನ್‌ ನೀಡಿ 2 ವಿಕೆಟ್‌ ಗಳಿಕೆಯ ಸಾಧನೆ ಮಾಡಿದರು.

ಇದಕ್ಕೆ ಉತ್ತರವಾಗಿ ರಾಯಲ್‌ ಇಂಡಿಯ್ಸ್‌ ತಂಡ 17.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಮೊದಲ ದಿನದ ಗೌರವಕ್ಕೆ ಪಾತ್ರವಾಯಿತು. ತಂಡದ ಪರ ಗುರುದೀಪ್‌ ಸಿಂಗ್‌ 50* ಹಾಗೂ ನರೇಶ್‌ ಶೇಣೈ 40* ಜಯದ ರೂವಾರಿ ಎನಿಸಿದರು. ಬಿಎಸಿಎ ಕೆಆರ್‌ಎಸ್‌ ತಂಡದ ಪರ ನಾಯಕ ಉದಯ್‌ ಕುಮಾರ್‌ 29 ರನ್‌ಗೆ 3 ವಿಕೆಟ್‌ ಗಳಿಸಿದರೆ ವಿಜಯ ಆಳ್ವಾ 24ರನ್‌ಗೆ 1 ವಿಕೆಟ್‌ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ವೈಯಕ್ತಿಕ ಪ್ರಶಸ್ತಿ: ಉತ್ತಮ ಬ್ಯಾಟ್ಸ್‌ಮನ್‌: ಗುರುದೀಪ್‌ ಸಿಂಗ್‌ (ರಾಯಲ್‌ ಇಂಡಿಯನ್ಸ್‌), ಅಲ್ವಿನ್‌ ಫೆರ್ನಾಂಡೀಸ್‌ (ಬೆಎಸಿಎ-ಕೆಆರ್‌ಎಸ್‌).

ಉತ್ತಮ ಬೌಲರ್‌: ರಾಜೇಶ್‌ ಜಾಂಬ್ಲೆ (ರಾಯಲ್‌ ಇಂಡಿಯನ್ಸ್‌), ಉದಯ್‌ ಕುಮಾರ್‌ ವೈ (ಬಿಎಸಿಎ ಕೆಆರ್‌ಎಸ್‌).

ಉತ್ತಮ ಫೀಲ್ಡರ್‌: ವಿಶ್ವನಾಥ್‌ ನಾಯಕ್‌ (ರಾಯಲ್‌ ಇಂಡಿಯನ್ಸ್‌), ಸತ್ಯಮೂರ್ತಿ (ಬಿಎಸಿಎ ಕೆಆರ್‌ಎಸ್‌).

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಅಶೋಕ್‌ ಅಡ್ಯಂತಾಯ ಅವರು ಟೂರ್ನಿಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ನಿಟ್ಟೆ ಕ್ಯಾಂಪಸ್‌ನ ನಿರ್ವಾಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಯೋಗೇಶ್‌ ಹೆಗ್ಡೆ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಂಗಳೂರು ವಲಯದ ಸಮನ್ವಯಕಾರ ರತನ್‌ ಕುಮಾರ್‌ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮಂಗಳೂರು ವಲಯದ ಅಧ್ಯಕ್ಷ ಮನೋಹರ್‌ ಅಮೀನ್‌ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗರಾದ ಬ್ರಿಯಾನ್‌ ಪಾಯಸ್‌ ಮತ್ತು ಸಿ.ಆರ್‌. ರಾವ್‌ ಅವರನ್ನು ಸನ್ಮಾನಿಸಲಾಯಿತು.

 

ರಾಯಲ್‌ ಇಂಡಿಯನ್ಸ್‌ ತಂಡದ ನಾಯಕ ಪ್ರದೀಪ್‌ ಗೋಡ್ಬೊಲೆ ಅವರು ಮಾತನಾಡಿ, ಹಿರಿಯ ಆಟಗಾರರನ್ನು ಗೌರವಿಸಿ ನಡೆಸುತ್ತಿರುವ ಈ ಟೂರ್ನಿ ದೇಶದ ಇತರ ಕ್ರಿಕೆಟ್‌ ಸಂಸ್ಥೆಗಳಿಗೆ ಮಾದರಿ. ಹಿರಿಯ ಆಟಗಾರರ ಉತ್ಸಾಹವನ್ನು ನೋಡಿ ಕಿರಿಯ ಆಟಗಾರರು ಇನ್ನೂ ಹೆಚ್ಚಿನ ಶ್ರಮ ವಹಿಸಲು ಸ್ಫೂರ್ತಿಯಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ದೇಹವನ್ನು ಸದಾ ಚೈತನ್ಯದಿಂದ ಕಾಯ್ದುಕೊಳ್ಳಲು ಕ್ರೀಡೆ ನೆರವಾಗುತ್ತದೆ. ಈ ಟೂರ್ನಿಯ ಅವಕಾಶ ನೀಡಿದ ನಿಟ್ಟೆ ವಿಶ್ವವಿದ್ಯಾನಿಲಯಕ್ಕೆ ಚಿರಋಣಿ,” ಎಂದರು.

ಖ್ಯಾತ ವೀಕ್ಷಕ ವಿವರಣೆಗಾರ ಅಜಯ್‌ ರಾಜ್‌ ಮಂಗಳೂರು ಅವರು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ವೀಕ್ಷಕ ವಿವರಣೆ ನೀಡಿದರು.

Related Articles