Saturday, July 27, 2024

ನಿಟ್ಟೆ ಬಿ.ಸಿ. ಆಳ್ವಾ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಮೂರು ದಿನಗಳ ಕಾಲ ಕ್ರಿಕೆಟ್‌ ಹಬ್ಬ

ನಿಟ್ಟೆ: ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಬ್ರಹ್ಮಾವರ ಮತ್ತು ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಕಟಪಾಡಿ ಇದರ ವತಿಯಿಂದ ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ನಿಟ್ಟೆ ಇದರ ಆಶ್ರಯದಲ್ಲಿ ಜನವರಿ 6, 7 ಮತ್ತು 8 ರಂದು ಇಲ್ಲಿನ ಬಿ.ಸಿ. ಆಳ್ವಾ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

ರಾಯಲ್‌ ಇಂಡಿಯನ್ಸ್‌ ಹಾಗೂ ಬಾಕಾ ಕೆಆರ್‌ಎಸ್‌ ಇಲೆವೆನ್‌ ತಂಡಗಳ ನಡುವೆ 50 ಓವರ್‌ಗಳ ಪಂದ್ಯ ನಡೆಯಲಿದೆ.

ಪುಣೆ, ಮುಂಬಯಿ, ಸೌರಾಷ್ಟ್ರ, ಧಾರವಾಡ, ಚೆನ್ನೈ, ತಮಿಳುನಾಡು, ಮಂಗಳೂರು ಬೆಂಗಳೂರು, ಉಡುಪಿಯ ಹಿರಿಯ ಆಟಗಾರರು ಮೂರು ದಿನಗಳ ಕಾಲ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಜನವರಿ 6 ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಅಶೋಕ್‌ ಅಡ್ಯಂತಾಯ ಅವರು ಟೂರ್ನಿಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ನಿಟ್ಟೆ ಕ್ಯಾಂಪಸ್‌ನ ನಿರ್ವಾಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಯೋಗೇಶ್‌ ಹೆಗ್ಡೆ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಂಗಳೂರು ವಲಯದ ಸಮನ್ವಯಕಾರ ರತನ್‌ ಕುಮಾರ್‌ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮಂಗಳೂರು ವಲಯದ ಅಧ್ಯಕ್ಷ ಮನೋಹರ್‌ ಅಮೀನ್‌ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗರಾದ ಬ್ರಿಯಾನ್‌ ಪಾಯಸ್‌ ಮತ್ತು ಸಿ.ಆರ್‌. ರಾವ್‌ ಅವರನ್ನು ಸನ್ಮಾನಿಸಲಾಗುವು.

ಜನವರಿ 8 ರಂದು ನಡೆಯುವ ಟೂರ್ನಿಯ ಎರಡನೇ ದಿನದ ಪಂದ್ಯಗಳ ವೇಳೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್‌. ವಿನಯ್‌ ಹೆಗ್ಡೆ ಅವರು ಪಾಲ್ಗೊಳ್ಳುವರು. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ವಿಶಾಲ್‌ ಹೆಗ್ಡೆ ಅವರು ಈ ಟೂರ್ನಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ಅವರು ಕೂಡ ಟೂರ್ನಿಯ ವೇಳೆ ಪಾಲ್ಗೊಂಡು ಆಟಗಾರರಿಗೆ ಶುಭ ಹಾರೈಸಲಿದ್ದಾರೆ.

ಜನವರಿ 9 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ನಿಟ್ಟೆ ಎನ್‌ಎಂಎಎಂಐಟಿಯ ಪ್ರಾಂಶುಪಾಲರಾದ ಡಾ. ನಿರಂಜನ್‌ ಎನ್‌. ಚಿಪ್ಳೂಣ್ಕರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪಡುಬಿದ್ರಿ ಸಿ.ಎ, ಬ್ಯಾಂಕಿನ ಅಧ್ಯಕ್ಷ ವೈ. ಸುಧೀರ್‌ ಕುಮಾರ್‌, ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷ ಗೌತಮ್‌ ಶೆಟ್ಟಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಎನ್‌ಎಂಎಎಂಐಟಿ ನಿಟ್ಟೆ ಇದರ ದೈಹಿಕ ಶಿಕ್ಷಣ ನಿರ್ದೇಶಕ ಶ್ಯಾಮ್‌ಸುಂದರ್‌ ಅವರನ್ನು ಸನ್ಮಾನಿಸಲಾಗುವುದು ಎಂದು ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಬ್ರಹ್ಮಾವರ ಇದರ ಅಧ್ಯಕ್ಷರಾದ ಅನಿತಾ ಆಳ್ವಾ ಮತ್ತು ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಕಟಪಾಡಿ ಇದರ ಕಾರ್ಯದರ್ಶಿ ಉದಯ್‌ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles