Saturday, February 24, 2024

ರಾಷ್ಟ್ರೀಯ ಕ್ರೀಡಾಕೂಟ: ಜಿಮ್ನಾಸ್ಟಿಕ್‌ನಲ್ಲಿ ಕುಣಿಗಲ್‌ನ ತ್ರಿಶೂಲ್‌ ಗೌಡ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಈಜು ಕಲಿಯಲು ಹೋದ ಪುಟ್ಟ ಹುಡುಗನಿಗೆ ಈಜಲು ಎತ್ತರ ಸಾಲದು ಎಂದು ನಿರಾಕರಿಸಿ ಮನೆಗೆ ಕಳುಹಿಸಿದರು. ಆದರೆ ಹುಡುಗನ ತಂದೆ ನಿರಾಸೆಯಲ್ಲಿ ಅಲ್ಲಿಗೆ ಕೈ ಚೆಲ್ಲಲಿಲ್ಲ. ಬೇರೆ ಯಾವುದಾದರೂ ಕ್ರೀಡೆಯಲ್ಲಿ ಮಗನಿಗೆ ತರಬೇತಿ ನೀಡಬೇಕು ಎಂಬ ಛಲ, ಕೊನೆಗೆ ಜಿಮ್ನಾಸ್ಟಿಕ್‌ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಆ ಹುಡುಗ ಇಂದು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಹೆಮ್ಮೆ.

ಸದ್ಯ ಬೆಂಗಳೂರಿನ ನಾಗರಬಾವಿಯ ಕೊಟ್ಟಿಗೆ ಪಾಳ್ಯದಲ್ಲಿ ನೆಲೆಸಿರುವ ನಾಗರಾಜ್‌ ಬಿ.ಆರ್‌. ಮತ್ತು ಕವಿತಾ ಬಿ. ದಂಪತಿಯ ಮಗನಾದ ತ್ರಿಶೂಲ್‌ ಗೌಡ, ಇದೇ ತಿಂಗಳ 28ರಂದು ಗುಜರಾತಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಜಿಮ್ನಾಸ್ಟಿಕ್‌ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ತ್ರಿಶೂಲ್‌ ಗೌಡ ಅವರ ತಂದೆ ನಾಗರಾಜ್‌ ಕೊರಿಯರ್‌ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿತದ್ದಾರೆ. ಅಕ್ಕ ಕೊನೆಯ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ.

ತ್ರಿಶೂಲ್‌ ಯು.ಕೆ.ಜಿಯಿಂದ ಜಿಮ್ನಾಸ್ಟಿಕ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಖ್ಯಾತ ಜಿಮ್ನಾಸ್ಟಿಕ್‌ ಗುರು ಚಂದ್ರಶೇಖರ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಕ್ರೀಡಾ ಕೋಟಾದಡಿ ಅಗ್ರ ಸ್ಥಾನ ಪಡೆದಿರುವ ತ್ರಿಶೂಲ್‌ ಮುಂದೆ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಗಳಿಸುವ ಗುರಿ ಹೊಂದಿದ್ದಾರೆ. ಆದರೆ ಈ ನಡುವೆ ತನ್ನ ಬದುಕಿನ ಉಸಿರಾಗಿರುವ ಜಿಮ್ನಾಸ್ಟಿಕ್‌ನಲ್ಲಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಆಶಯವನ್ನೂ ಹೊಂದಿದ್ದಾರೆ.

ರಾಜ್ಯ ಮಟ್ಟದಲ್ಲಿ 50ಕ್ಕೂ ಹೆಚ್ಚು ಪದಕ:

ಉಳಿದ ಕ್ರೀಡೆಗಳಂತೆ ಜಿಮ್ನಾಸ್ಟಿಕ್‌ ಅಷ್ಟು ಸುಲಭದ ಕ್ರೀಡೆಯಲ್ಲ. ಗಾಯವಾಗದಂತೆ ಸದಾ ಎಚ್ಚರಿಕೆ ವಹಿಸಿಕೊಂಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ, ನಮ್ಮಲ್ಲಿ ಕ್ರಿಕೆಟ್‌ ಬಿಟ್ಟರೆ ಬೇರೆ ಕ್ರೀಡೆಗಳ ಸಾಧನೆಯ ಬಗ್ಗೆ ಬೆಳಕು ಚೆಲ್ಲುವುದು ವಿರಳ. ತ್ರಿಶೂಲ್‌ ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಸೀನಿಯರ್‌ ವಿಭಾಗಗಳಲ್ಲಿ ರಾಜ್ಯಮಟ್ಟದಲ್ಲಿ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. 14 ಬಾರಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾರೆ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ರಾಷ್ಟ್ರೀಯ ಸ್ಕೂಲ್‌ ಗೇಮ್ಸ್‌ಗಳಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಆರ್ಟಿಸ್ಟಿಕ್‌, ಟ್ರಾಂಪೊಲೈನ್‌, ಏರೋಬಿಕ್ಸ್‌, ಆಕ್ರೋಬೆಟಿಕ್ಸ್‌, ಟಂಬಲಿಂಗ್‌ ಹೀಗೆ ಜಿಮ್ನಾಸ್ಟಿಕ್ಸ್‌ನ ವಿವಿಧ ವಿಭಾಗಗಳಲ್ಲಿ ತ್ರಿಶೂಲ್‌ ಸ್ಪರ್ಧಿಸಿರುತ್ತಾರೆ. ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌ನಲ್ಲಿ ರಾಷ್ಟ್ರದಲ್ಲೇ ಆರನೇ ರಾಂಕ್‌ ಹೊಂದಿದ್ದು, ಏರೋಬಿಕ್ಸ್‌ನಲ್ಲಿ ಎಂಟನೇ ರಾಂಕ್‌ ಹೊಂದಿದ್ದಾರೆ.

ಈಜು ತರಬೇತಿಗೆ ಅವಕಾಶ ನೀಡಲಿಲ್ಲ: ನಾಗರಬಾವಿಗೆ ಭಾರತೀಯ ಕ್ರೀಡಾಪ್ರಾಧಿಕಾರ ಅತಿ ಸಮೀಪ. ನಾಗರಾಜ್‌ ಅವರು ಮಗನನ್ನು ಈಜುಪಟುವನ್ನಾಗಿಸಬೇಕೆಂಬ ಆಶಯ ಹೊಂದಿದ್ದರು. ಆದರೆ ಈಜು ತರಬೇತುದಾರರು ಹುಡುಗ ಇನ್ನೂ ಚಿಕ್ಕವನು, ಎತ್ತರ ಕೂಡ ಇಲ್ಲ. ಈಗ ತರಬೇತಿ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದರು. ಆದರೆ ಮಗನನ್ನು ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಬೇಕೆಂಬ ನಾಗರಾಜ್‌ ಅವರ ಹಂಬಲಕ್ಕೆ ಬೆಂಬಲವಾಗಿ ಸಿಕ್ಕಿದ್ದು ಜಿಮ್ನಾಸ್ಟಿಕ್‌ ಬೇಸಿಗೆ ಶಿಬಿರ. “ಜಿಮ್ನಾಸ್ಟಿಕ್‌ ನನಗೆ ಸೂಕ್ತವೆನಿಸಿತು. ಆರಂಭದಲ್ಲಿ ಅದರ ಬಗ್ಗೆ ಹೆಚ್ಚು ಅರಿವಿರಲಿಲ್ಲ. ಬರಬರುತ್ತ ಹೊಸ ಉತ್ಸಾಹ ಸಿಕ್ಕಿತು. ಜೂನಿಯರ್‌ ಹಂತದಲ್ಲಿ ಸ್ಪರ್ಧಿಸಿ ಪದಕ ಗೆದ್ದಾಗ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿತು. ನಂತರ ರಾಜ್ಯಮಟ್ಟದಲ್ಲೂ ಯಶಸ್ಸು ಕಂಡೆ. ಈಗ ಕರ್ನಾಟಕವನ್ನು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ,” ಎಂದು ತ್ರಿಶೂಲ್‌ ಹೇಳಿದರು.

ಸುಂಕದಕಟ್ಟೆಯ ಲಕ್ಷ್ಮೀ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿರುವ ತ್ರಿಶೂಲ್‌, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲು ಆತ್ಮವಿಶ್ವಾಸವನ್ನು ಹೊಂದಿದ್ದಾರೆ. “ಗುಜರಾತ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿದೆ. ಈ ಬಾರಿ ನಮಗೆ ಪೂರ್ಣ ಪ್ರಮಾಣದ ತರಬೇತಿ ಲಭಿಸಿದೆ. ಹಿಂದಿನ ಸಾಧನೆ ಅಥವಾ ವೈಫಲ್ಯಗಳು ಮುಂದಿನ ಪ್ರದರ್ಶನದ ಮೇಲೆ ಪರಿಣಾಮ ಬೀರುವುದಿಲ್ಲ. ಸ್ಪರ್ಧೆಯ ದಿನ ನಾವು  ಯಾವ ರೀತಿಯಲ್ಲಿ ಪ್ರದರ್ಶನ ನೀಡುತ್ತೇವೋ ಅದಕ್ಕೆ ಪೂರಕವಾದ ಫಲಿತಾಂಶ ಲಭಿಸುತ್ತದೆ. ಆದ್ದರಿಂದ ಯಾವಾಗಲೂ ಪದಕ ಗೆಲ್ಲುತ್ತೇನೆಂಬ ಆತ್ಮವಿಶ್ವಾಸದಲ್ಲೇ ಅಂಗಣಕ್ಕಿಳಿಯುತ್ತೇನೆ,” ಎಂದು ತ್ರಿಶೂಲ್ ಹೇಳುವ ತ್ರಿಶೂಲ್‌ ಅವರ ಮಾತಿನಲ್ಲಿ ಒಬ್ಬ ಅನುಭವಿ ಕ್ರೀಡಾಪಟುವಿದ್ದಾನೆಂಬುದು ಸ್ಪಷ್ಟ.

ಜಿಮ್ನಾಸ್ಟಿಕ್‌ಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ:

ಜಿಮ್ನಾಸ್ಟಿಕ್‌ ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಅದು ಇತರ ಎಲ್ಲ ಕ್ರೀಡೆಗಳಿಗೂ ನೆರವಾಗುತ್ತದೆ. ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಪ್ರಾಥಮಿಕ ಹಂತದಲ್ಲೇ ಉತ್ತಮ ತರಬೇತಿ ಪ್ರೋತ್ಸಾಹ ಸಿಗದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ಪರ್ಧೆ ನೀಡಲು ಕಠಿಣವಾಗುತ್ತದೆ ಎಂದು ತ್ರಿಶೂಲ್‌ ಅಭಿಪ್ರಾಯಪಟ್ಟರು.

ಅಪ್ಪ, ಅಮ್ಮನ ಪ್ರೋತ್ಸಾಹ:

ಒಬ್ಬ ಕ್ರೀಡಾ ಸಾಧಕನ ಹಿಂದೆ ಹಲವು ತ್ಯಾಗಗಳಿರುತ್ತವೆ. ಅದೇ ರೀತಿ ತ್ರಿಶೂಲ್‌ ಅವರ ಯಶಸ್ಸಿನ ಹಿಂದೆ ಇರುವುದು ಅವರ ಅಪ್ಪ ಅಮ್ಮ. ನಾಗರಾಜ್‌ ತಮ್ಮ ಮಗನ ಯಶಸ್ಸಿಗಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಅದನ್ನು ತ್ರಿಶೂಲ್‌ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. “ಆಚೀಚೆಯ ಹುಡುಗರೆಲ್ಲ ಕ್ರಿಕೆಟ್‌ನಲ್ಲಿ ತೊಡಗಿಕೊಂಡಿದ್ದರೆ ನಮ್ಮ ತಂದೆ ನನ್ನನ್ನು ಜಿಮ್ನಾಸ್ಟಿಕ್‌ನಲ್ಲಿ ತರಬೇತಿ ನೀಡುತ್ತಿದ್ದರು. ಅದೆಷ್ಟೋ ಬಾರಿ ಕೆಲಸಕ್ಕೆ ರಜೆ ಹಾಕಿ ನನ್ನ ತರಬೇತಿಯಲ್ಲಿ ನೆರವು ನೀಡಿದ್ದಾರೆ. ನನ್ನ ಯಶಸ್ಸಿನಲ್ಲಿ ಅವರ ತ್ಯಾಗ ಬಹಳವಿದೆ,” ಎಂದರು.

Related Articles