Saturday, October 12, 2024

VivoProkabaddiSeason9: ವೇಳಾಪಟ್ಟಿ ಪ್ರಕಟ

ಬೆಂಗಳೂರು, ಸೆಪ್ಟಂಬರ್‌ 21: ವಿವೋ ಪ್ರೊ ಕಬಡ್ಡಿ ಲೀಗ್‌ನ ಆಯೋಕರಾದ ಮಷಾಲ್‌ ಸ್ಪೋರ್ಟ್ಸ್‌, 9ನೇ ಆವೃತ್ತಿಯ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. 2022 ಅಕ್ಟೋಬರ್‌ 7ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್‌ ಆರಂಭಗೊಳ್ಳಲಿದ್ದು, ನಂತರ ಅಕ್ಟೋಬರ್‌ 28ರಂದು ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ (ಬ್ಯಾಡ್ಮಿಂಟನ್‌ ಕೋರ್ಟ್‌) ನಂತರದ ಹಂತ ನಡೆಯಲಿದೆ.

ಈ ಋತುವಿನ ಲೀಗ್‌ನಲ್ಲಿ ಕಬಡ್ಡಿ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನೋಡುವ ಅವಕಾಶವಿದ್ದು, ಅವರನ್ನು ವಿಶೇಷವಾಗಿ ಉಪಚರಿಸಲು ಲೀಗ್‌ ಸಜ್ಜಾಗಿದೆ. ಲೀಗ್‌ಗೆ ಈ ಬಾರಿ ಭವ್ಯವಾಗಿ ಉದ್ಘಾಟನೆಗೊಳ್ಳಲಿದ್ದು, ಮೂರು ದಿನಗಳ ಕಾಲ ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿದೆ. 66 ಪಂದ್ಯಗಳಿಂದ ಕೂಡಿದ ವೇಳಾಪಟ್ಟಿಯಲ್ಲಿ ಪ್ರತಿಯೊಂದು ಪಂದ್ಯ ವಿಭಿನ್ನವಾಗಿದ್ದು, ಮೊದಲ 2 ದಿನಗಳೊಳಗೆ ಕಬಡ್ಡಿ ಅಭಿಮಾನಿಗಳು ಎಲ್ಲ 12 ತಂಡಗಳ ಆಟವನ್ನು ವೀಕ್ಷಿಸಬಹುದು. ಪಿಕೆಎಲ್‌ 9ನೇ ಋತುವಿನಲ್ಲಿ ಲೀಗ್‌ ಹಂತದಲ್ಲಿ  ಪ್ರತಿ ಶುಕ್ರವಾರ ಮತ್ತು ಭಾನುವಾರ ಕಬಡ್ಡಿ ಅಭಿಮಾನಿಗಳು ಮೂರು ಪಂದ್ಯಗಳ ಸಂಭ್ರಮವನ್ನು ಸವಿಯಬಹುದು.

ಅಕ್ಟೋಬರ್‌ 7ರಂದು ನಡೆಯುವ 9ನೇ ಋತುವಿನ ಮೊದಲ ಪಂದ್ಯದಲ್ಲಿ 8ನೇ ಋತುವಿನ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಕೆ.ಸಿ. ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯು-ಮುಂಬಾ ವಿರುದ್ಧ ಸೆಣಸಲಿದೆ. ನಂತರ ನಡೆಯುವ ಲೀಗ್‌ನ ದಕ್ಷಿಣದ ಡರ್ಬಿಯಲ್ಲಿ ಬೆಂಗಳೂರು ಬುಲ್ಸ್‌ ಮತ್ತು ತೆಲುಗು ಟೈಟಾನ್ಸ್‌ ತಂಡಗಳು ಸೆಣಸಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಯು.ಪಿ. ಯೋಧಾಸ್‌ ವಿರುದ್ಧ ಹೋರಾಟ ನಡೆಸಲಿದೆ.

ಟೂರ್ನಿಯ ಎರಡನೇ ಹಂತದಲ್ಲಿ ತಂಡಗಳು ತಮ್ಮ ರಣತಂತ್ರ ರೂಪಿಸಲು, ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುಲು ಅವಕಾಶ ನೀಡುವ ದೃಷ್ಟಿಯಿಂದ ಲೀಗ್‌ನ ಎರಡನೇ ಹಂತದ ವೇಳಾಪಟ್ಟಿಯಲ್ಲಿ 2022ರ ಅಕ್ಟೋಬರ್‌ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು.

ವಿವೋ ಪ್ರೊ ಕಬಡ್ಡಿ ಲೀಗ್‌ 9ನೇ ಆವೃತ್ತಿಯ ವೇಳಾಪಟ್ಟಿಯ ಬಗ್ಗೆ ಮಾತನಾಡಿದ ವಿವೋ ಪ್ರೊಕಬಡ್ಡಿ ಲೀಗ್‌ನ ಲೀಗ್‌ ಕಮಿಷನರ್‌ ಮತ್ತು ಮಷಾಲ್‌ ಸ್ಪೋರ್ಟ್ಸ್‌ನ ಸ್ಪೋರ್ಟ್ಸ್‌ ಲೀಗ್‌ನ ಪ್ರಧಾನರಾದ ಅನುಪಮ್‌ ಗೋಸ್ವಾಮಿ ಮಾತನಾಡಿ, “ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿರುವ ವಿವೋ ಪಿಕೆಎಲ್‌ 9ನೇ ಆವೃತ್ತಿಯು ಭಾರತದಲ್ಲಿರುವ ಕ್ರೀಡಾಭಿಮಾನಿಗಳಿಗೆ ಜಗತ್ತಿನ ಉತ್ತಮ ಕಬಡ್ಡಿ ಪಂದ್ಯಗಳ ಸಂಭ್ರಮವನ್ನು ನೀಡಲಿದೆ. ಹಿಂದಿನ ಎಲ್ಲ ಪ್ರೋ ಕಬಡ್ಡಿ ಲೀಗ್‌ಗಳಿಗಿಂತ 9ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ ಮತ್ತು ಅದರ ಪ್ರಸಾರಕರು ಜೊತೆಯಲ್ಲಿ 12 ತಂಡಗಳು ಭಾರತದಲ್ಲಿ ಕಬಡ್ಡಿ ಅಭಿವೃದ್ಧಿಗೆ ಕ್ರೀಡಾಂಗಣದ ಒಳಗಡೆ ಮತ್ತು ಸ್ಕ್ರೀನ್‌ನ ಮೇಲೂ ಬಲಿಷ್ಠ ಮಾನದಂಡವನ್ನು ನಿರ್ಮಿಸಲಿವೆ,” ಎಂದು ಹೇಳಿದರು.

ಕಬಡ್ಡಿ ಅಭಿಮಾನಿಗಳು ಪಂದ್ಯ ವೀಕ್ಷಿಸಲು ತಮ್ಮ ಟಿಕೆಟ್‌ಗಳನ್ನು BookMyShow ಮೂಲಕ ಕಾಯ್ದಿರಿಸಿಕೊಳ್ಳಬಹುದು.

9ನೇ ಆವೃತ್ತಿಯ ವಿವೋ ಪ್ರೋ ಕಬಡ್ಡಿ ಲೀಗ್‌ ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ (Star Sports Network) ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ (Disney+ Hotstar)ನಲ್ಲಿ ನೇರ ಪ್ರಸಾರವಾಗಲಿದೆ.

ವಿವೋ ಪ್ರೋ ಕಬಡ್ಡಿ ಲೀಗ್‌ನ ಕ್ಷಣ ಕ್ಷಣದ ನೇರ ಮಾಹಿತಿಗಾಗಿ www.prokabaddi.com ಲಾಗ್‌ಆನ್‌ ಆಗಬಹುದು, ಅಥವಾ ಅಧಿಕೃತ ಪ್ರೋ ಕಬಡ್ಡಿ ಆಪ್‌ (Official ProKabaddi app) ನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಥವಾ ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ @prokabaddi ಫಾಲೋ ಮಾಡಬಹುದು.

Related Articles