Saturday, October 12, 2024

ವಿಶ್ವ ಶೂಟಿಂಗ್‌ಗೆ ಕರ್ನಾಟಕದ ಶಾಲಾ ಬಾಲಕಿ ತಿಲೋತ್ತಮ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಅಕ್ಟೋಬರ್‌ 15 ರಿಂದ 23 ರವರೆಗೆ ಕೈರೋದಲ್ಲಿ ನಡೆಯಲಿರುವ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ 14 ವರ್ಷದ ಬಾಲಕಿ ತಿಲೋತ್ತಮ ಸೇನ್‌ (Tilottama Sujit Sen) ಆಯ್ಕೆಯಾಗಿದ್ದಾರೆ.

ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ತಿಲೋತ್ತಮ ಈಗ ವಿಶ್ವದಲ್ಲಿ ರ‍್ಯಾಂಕಿನಲ್ಲಿ 42ನೇ ಸ್ಥಾನ ಹೊಂದಿರುವುದು ವಿಶೇಷ. ರಾಷ್ಟ್ರೀಯ ಮಟ್ಟದ ಸೀನಿಯರ್‌ ವಿಭಾಗದಲ್ಲಿ 6ನೇ ರಾಂಕ್‌ ಮತ್ತು ಜೂನಿಯರ್‌ ಮತ್ತು ಯೂಥ್‌ ವಿಭಾಗದಲ್ಲಿ 2ನೇ ರ‍್ಯಾಂಕ್‌ ಹೊಂದಿರುತ್ತಾರೆ. ಭಾರತ ಹಿರಿಯರ ತಂಡದಲ್ಲಿರುವ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ತಿಲೋತ್ತಮ ಪಾತ್ರರಾಗಿದ್ದಾರೆ.

ಬೆಂಗಳೂರಿನ ಬ್ಲೂ ಬೆಲ್‌ ಹೈಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಿಲೋತ್ತಮ 10ಮೀ ಏರ್‌ ರೈಫಲ್‌ ರೈಫಲ್‌ ವಿಭಾಗದಲ್ಲಿ ಪಳಗಿರುತ್ತಾರೆ.

ಕಳೆದ ವರ್ಷ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ತಿಲೋತ್ತಮ ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಈ ವರ್ಷದ ಆರಂಭದಲ್ಲಿ ಜರ್ಮನಿಯಲ್ಲಿ ನಡೆದ  ಜೂನಿಯರ್‌ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಿಲೋತ್ತಮ, ಇದೇ ತಿಂಗಳ 28ರಿಂದ ಗುಜರಾತ್‌ನಲ್ಲಿ ನಡೆಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಬಳಿಕ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸರಕಾರದ ನೆರವಿಗೆ ಮನವಿ:

ತಿಲೋತ್ತಮ ಅವರ ತಂದೆ ಸುಜಿತ್‌ ಸೇನ್‌, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ನಾಗಲ್ಯಾಂಡ್‌ನವರಾದ ಸುಜಿತ್‌ ಸೇನ್‌ ಕಳೆದ 18 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. “ತಿಲೋತ್ತಮ ಕಳೆದ ನಾಲ್ಕು ವರ್ಷಗಳಿಂದ ಶೂಟಿಂಗ್‌ನಲ್ಲಿ ತೊಡಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ತರಬೇತಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಆರಿಗೆ, ಹೊಟೇಲ್‌ ಸೇರಿದಂತೆ ಸಾಕಷ್ಟು ಹಣ ವ್ಯಯವಾಗುತ್ತದೆ. ಇದಕ್ಕಾಗಿ ಕ್ರೀಡಾ ಇಲಾಖೆಯಿಂದ ನೆರವು ನೀಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತದ್ದೇನೆ,” ಎಂದು ಸುಜಿತ್‌ ಸೇನ್‌ ಹೇಳಿದ್ದಾರೆ.

ಲಾಕ್‌ಡೌನ್‌ನಲ್ಲಿ ಅರಳಿದ ಶೂಟಿಂಗ್‌ ತಾರೆ!!!:

ಕೊರೋನಾ ಮಹಾಮಾರಿ ಜಗತ್ತನ್ನೇ ಆವರಿಸಿದಾಗ ಪ್ರತಿಯೊಂದು ಶಿಕ್ಷಣ ಆನ್‌ಲೈನ್‌ಗೆ ಸೀಮಿತವಾಗಿತ್ತು. ತಿಲೋತ್ತಮ ಮನೆಯಲ್ಲೇ ಶೂಟಿಂಗ್‌ ಕಲಿಯಲು ಆಸಕ್ತಿ ತೋರಿದಳು. ಸುಜಿತ್‌ ಅದಕ್ಕೆ ಪ್ರೋತ್ಸಾಹ ನೀಡಿದರು. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಶೂಟಿಂಗ್‌ ಎರಡು ವರ್ಷಗಳಲ್ಲಿ ದೇಶದ ಅತ್ಯಂತ ಕಿರಿಯ ವೃತ್ತಿಪರ ಶೂಟಿಂಗ್‌ ತಾರೆಯನ್ನು ನಿರ್ಮಿಸಿತು. ಅದೂ ಕನ್ನಡದ ನೆಲದಲ್ಲಿ ಎಂಬುದು ಹೆಮ್ಮೆಯ ಸಂಗತಿ.

“ನಾನು 18 ವರ್ಷಗಳಿಂದ ಕರ್ನಾಟದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ. ನನ್ನ ಮಗಳು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ. ಹಿರಿಯರ ತಂಡದಲ್ಲಿರುವ ಅತ್ಯಂತ ಕಿರಿಯ ಶೂಟರ್‌. ಕುಟುಂಬದಲ್ಲಿ ಒಬ್ಬನೇ ದುಡಿಯುತ್ತಿರುವುದರಿಂದ ಮಗಳ ಕ್ರೀಡಾ ವೆಚ್ಚವನ್ನು ಭರಿಸಲು ಕಷ್ಟವಾಗುತ್ತಿದೆ. ಇದಕ್ಕಾಗಿ ಪ್ರಾಯೋಜಕರ ಮೊರೆಯಾಚಿಸುತ್ತಿದ್ದೇನೆ,” ಎಂದು ಸಜಿತ್‌ ಹೇಳಿದ್ದಾರೆ.

“2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಗುರಿ,” ಎಂದು ತಿಲೋತ್ತಮ ಅತ್ಯಂತ ಆತ್ಮವಿಶ್ವಾಸದಲ್ಲಿ ಹೇಳಿದ್ದಾಳೆ,

Related Articles