Sunday, September 8, 2024

ಶೂಟಿಂಗ್‌ನಲ್ಲಿ ಕರ್ನಾಟಕದ ತಿಲೋತ್ತಮಗೆ ಬೆಳ್ಳಿ ಪದಕ

ಅಹಮದಾಬಾದ್‌:

ಉತ್ತಮ ಪೈಪೋಟಿಯಿಂದ ಕೂಡಿದ ಫೈನಲ್‌ ಸುತ್ತಿನಲ್ಲಿ ಗುಜರಾತಿನ ಎಲಾವಿನಿಲ್‌ ವಲಾವಿರನ್‌ ವಿರುದ್ಧ 16-10 ಅಂತರದಲ್ಲಿ ಸೋಲನುಭವಿಸಿದ ಕರ್ನಾಟಕದ ತಿಲೋತ್ತಮ ಸೇನ್‌ 36ನೇ ರಾಷ್ಟ್ರೀಯ ಕ್ರೀಡಾಕೂಟದ ವನಿತೆಯರ 10ಮೀ ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು  ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ 633.6 ಅಂಕಗಳನ್ನು ಗಳಿಸಿ ರಾಷ್ಟ್ರೀಯ ದಾಖಲೆ ಬರೆದಿದ್ದ ತಿಲೋತ್ತಮ ಶುಕ್ರವಾರ ನಡೆದ ಫೈನಲ್‌ನಲ್ಲಿ 6 ಅಂಕಗಳ ಅಂತರದಲ್ಲಿ ಹಿನ್ನಡೆ ಕಂಡು ಚಿನ್ನದ ಪದಕದಿಂದ ವಂಚಿತರಾದರು.

ಬೆಂಗಳೂರಿನ ಬ್ಲೂ ಬೆಲ್‌ ಹೈಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಿಲೋತ್ತಮ 10ಮೀ ಏರ್‌ ರೈಫಲ್‌ ರೈಫಲ್‌ ವಿಭಾಗದಲ್ಲಿ ಪಳಗಿರುತ್ತಾರೆ.

ಕಳೆದ ವರ್ಷ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ತಿಲೋತ್ತಮ ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಈ ವರ್ಷದ ಆರಂಭದಲ್ಲಿ ಜರ್ಮನಿಯಲ್ಲಿ ನಡೆದ  ಜೂನಿಯರ್‌ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಿಲೋತ್ತಮ, ಭಾರತದ ಬರವನಸೆಯ ಶೂಟರ್‌ ಎನಿಸಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಬಳಿಕ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಗಗನ್‌ ನಾರಂಗ್‌ ಮೆಚ್ಚುಗೆ: ಶೂಟಿಂಗ್‌ ಸ್ಪರ್ಧೆಯ ಮೊದಲ ದಿನದಲ್ಲಿ ಮಾಜಿ ಒಲಂಪಿಯನ್ನರು ಕ್ರೀಡಾಕೂಟಕ್ಕೆ ಆಗಮಿಸಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಮಾತುಗಳನ್ನಾಗಿ ಪ್ರೋತ್ಸಾಹಿಸಿದರು. ಶೂಟರ್‌ ಗಗನ್‌ ನಾರಂಗ್‌ (Gagan Narang) ಕರ್ನಾಟಕದ ಶೂಟರ್‌ ತಿಲೋತ್ತಮ ಅವರ ಸಾಧನೆಯನ್ನು ಕಣ್ಣಾರೆ ಕಂಡು ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು. “ಭಾರತ ತಂಡದಲ್ಲಿರುವ ಅತ್ಯಂತ ಕಿರಿಯ ಶೂಟರ್‌ ತಿಲೋತ್ತಮ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ,” ಎಂದು ಹೇಳಿದರು.

Related Articles