Thursday, March 28, 2024

ರಾಷ್ಟ್ರೀಯ ಕ್ರೀಡಾಕೂಟ: ನೆಟ್‌ಬಾಲ್‌ನಲ್ಲಿ ಕರ್ನಾಟಕಕ್ಕೆ ಕಂಚಿನ ಪದಕ

ಅಹಮದಾಬಾದ್‌:

ಬಿಹಾರ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಮಬಲ ಸಾಧಿಸಿ ಕರ್ನಾಟಕ ವನಿತೆಯರ ನೆಟ್‌ಬಾಲ್‌ ತಂಡ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ.

ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಇತ್ತಂಡಗಳು 57-57 ಅಂಕಗಳಿಂದ ಸಮಬಲ ಸಾಧಿಸಿದವು. ಅಂತಿಮವಾಗಿ ಸಮಯದ ಅಭಾವದಿಂದ ತಾಂತ್ರಿಕ ಸಮಿತಿ ಹಾಗೂ ಸ್ಪರ್ಧೆಯ ಮ್ಯಾನೇಜರ್‌ ಇತ್ತಂಡಗಳಿಗೂ ಕಂಚಿನ ಪದಕ ನೀಡುವ ತೀರ್ಮಾನ ಕೈಗೊಂಡರು.

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಕರ್ನಾಟಕದ ಪರ ಗಗನ ಕೆಎಸ್‌ ಹಾಗೂ ನಂದಿನಿ ಎಲ್‌ಜಿ ಉತ್ತಮ ಆಟ ಪ್ರದರ್ಶಿಸಿದರೂ ಬಿಹಾರ ಮೇಲುಗೈ ಸಾಧಿಸಿತು. ಈ ಹಂತದಲ್ಲಿ ಕರ್ನಾಟಕ 8 ಅಂಕಗಳನ್ನು ಗಳಿಸಿದರೆ ಬಿಹಾರ 12 ಅಂಕಗಳೊಂದಿಗೆ ಮೇಲುಗೈಸಾಧಿಸಿತು, ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಕರ್ನಾಟಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ 16 ಅಂಕಗಳನ್ನು ಕಲೆಹಾಕಿತು. ಮೇಘನಾ ಮತ್ತು ನಂದಿನಿ ತಂಡದ ಪರ ಉತ್ತಮ ಪ್ರದರ್ಶನ ತೋರಿದರು,

ಮೂರನೇ ಕ್ವಾರ್ಟರ್‌ನಲ್ಲಿ ರಂಜಿತಾ ಹಾಗೂ ಮೇಘನಾ ಉತ್ತಮ ಪ್ರದರ್ಶನ ತೋರಿದರೂ ಬಿಹಾರ ಮುನ್ನಡೆ ಕಂಡಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಕರ್ನಾಟಕ ಹಾಗೂ ಬಿಹಾರ ಸಮಬಲ ಸಾಧಿಸಿದವು. 13-13 ಅಂಕಗಳು ಪಂದ್ಯವನ್ನು ಸಮಬಲಗೊಳಿಸಿದವು. ಹೆಚ್ಚುವರಿ ಸಮಯದಲ್ಲೂ ಇತ್ತಂಡಗಳು 10-10 ಅಂಕಗಳಿಂದ ಸಮಬ ಕಂಡವು. ಅಂತಿಮವಾಗಿ ಇತ್ತಂಡಗಳಿಗೆ ಕಂಚಿನ ಪದಕವನ್ನು ಹಂಚಲಾಯಿತು.

ಕರ್ನಾಟಕದ ವನಿತೆಯ ಸಾಧನೆಗೆ ಕರ್ನಾಟಕ ಅಮೆಚೂರ್‌ ನೆಟ್‌ಬಾಲ್‌ ಸಂಸ್ಥೆಯ ಕಾರ್ಯದರ್ಶಿ, ಡಾ. ಗಿರೀಶ್‌ ಸಿ ಅಭಿನಂದನೆ ಸಲ್ಲಿಸಿದ್ದಾರೆ.

Related Articles