Saturday, October 12, 2024

ಕ್ರೀಡಾ ಯಶಸ್ಸಿಗೆ ಹೊಸ ಜೀವ ತುಂಬುವ ಶಿವರುದ್ರಯ್ಯ ಸ್ವಾಮಿ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕರ್ನಾಟಕದಲ್ಲಿ ಅನೇಕ ಕ್ರೀಡಾ ಸಂಸ್ಥೆ ಮತ್ತು ಅಕಾಡೆಮಿಗಳಿವೆ. ಪ್ರತಿಯೊಂದರ ಉದ್ದೇಶ ಪದಕ ಗೆಲ್ಲುವುದೇ ಆಗಿರುತ್ತದೆ. ಆದರೆ ಆ ಉದ್ದೇಶವನ್ನು ಈಡೇರಿಸುವಲ್ಲಿ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂಬುದು ಮುಖ್ಯ. ಬರೇ ಗುರಿಯೊಂದಿದ್ದರೆ ಸಾಲದು, ಆ ಗುರಿಯನ್ನು ತಲುಪಲು ಸಾಕಷ್ಟು ಯೋಜನೆಗಳು, ಪ್ರಯತ್ನ, ನಿರಂತರ ಶ್ರಮ ಅಗತ್ಯವಿರುತ್ತದೆ. ಹೀಗೆ ಕರ್ನಾಟದಕಲ್ಲಿ ಕ್ರೀಡೆಗಳಿಗೆ ಹೊಸ ರೂಪು ನೀಡಬೇಕು, ಕ್ರೀಡಾಪಟುಗಳ ಬದುಕು ಬರೇ ಕ್ರೀಡಾಕೂಟಕಗಳಿಗೆ ಮೀಸಲಾಗಿದರೆ ಆ ನಂತರವೂ ಅವರಿಗೆ ನೆರವು ನೀಡಬೇಕೆಂಬ ಉದ್ದೇಶದಿಂದ ಹುಟ್ಟಿದ ಸಂಸ್ಥೆಯೇ ಕರ್ನಾಟಕ ಅಥ್ಲೆಟಿಕ್ಸ್‌ ಮತ್ತು ಸ್ಪೋರ್ಟ್ಸ್‌ ಅಕಾಡೆಮಿ. ಇದಕ್ಕೆ ಆಧಾರವಾಗಿ ನಿಂತವರು ಕ್ರೀಡಾ ಪ್ರೋತ್ಸಾಹಕ, ಉತ್ತಮ ಸಂಘಟಕ, ಆದಾಯ ತೆರಿಗೆ ಇಲಾಖೆಯ ಮಾಜಿ ಅಧಿಕಾರಿ ಶಿವರುದ್ರಯ್ಯ ಸ್ವಾಮಿ.

ಕ್ರೀಡಾಪಟುಗಳನ್ನೇ ಸೇರಿಸಿಕೊಂಡು ಹುಟ್ಟು ಹಾಕಿದ ಈ ಸಂಸ್ಥೆಯ ಉದ್ದೇಶ ನಿಜವಾಗಿಯೂ ಕ್ರೀಡಾಭಿವೃದ್ಧಿಗೆ ಪೂರಕವಾಗಿದೆ. 2003ರಲ್ಲಿ ಪುಣೆಯಲ್ಲಿ ನಡೆಯಬೇಕಾಗಿದ್ದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಕ್ರೀಡಾಕೂಟವನ್ನು ಕೇವಲ 20 ದಿನಗಳ ಅವಧಿಯಲ್ಲಿ ನಡೆಸಿ ಯಶಸ್ಸು ಕಾಣಿಸುವಲ್ಲಿ ಶಿವರುದ್ರಯ್ಯನವರ ಶ್ರಮ ಸ್ತುತ್ಯರ್ಹ.

ಮೊದಲ ಬಾರಿಗೆ ನಗದು ಬಹುಮಾನ: 2003ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ಬೃಹತ್‌ ಬಹುಮಾನವನ್ನು ನೀಡಲಾಯಿತು. ಚಿನ್ನ ಗೆದ್ದವರಿಗೆ 10,000 ರೂ. ನಗದು, ಬೆಳ್ಳಿ ಗೆದ್ದವರಿಗೆ 7,000 ರೂ. ನಗದು ಮತ್ತು ಕಂಚಿನ ಪದಕ ಗೆದ್ದವರಿಗೆ 5,000 ರೂ. ನಗದು ಬಹುಮಾನ ನೀಡಿರುವುದು ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ಮೊದಲು ಮತ್ತು ಕೊನೆ. ಇದರಲ್ಲಿ ಶಿವರುದ್ರಯ್ಯ ಸ್ವಾಮಿ ಅವರ ಪಾತ್ರ ಪ್ರಮುಖವಾದುದು. ಹೀಗೆ ಕ್ರೀಡಾಕೂಟಗಳಿಗೆ ನೆರವು ನೀಡುತ್ತಿದ್ದ ಶಿವರುದ್ರಯ್ಯನವರು ಇತ್ತೀಚಿಗೆ ತಮ್ಮದೇ ಅಧ್ಯಕ್ಷತೆಯಲ್ಲಿ ಹೊಸ ಯೋಜನೆ ಮತ್ತು ಹೊಸ ಯೋಚನೆಗಳನ್ನು ರೂಪಿಸಿಕೊಂಡು ಕರ್ನಾಟಕ ಅಥ್ಲೆಟಿಕ್ಸ್‌ ಮತ್ತು ಸ್ಪೋರ್ಟ್ಸ್‌ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದು ಅಕಾಡೆಮಿಯಾಗಿಯೂ ಕಾರ್ಯನಿರ್ವಹಿಸಲಿದೆ.

ಯೋಜನೆಗಳೇನು?: ಒಂದು ಸಂಸ್ಥೆ ಅಥವಾ ಅಕಾಡೆಮಿ ಹುಟ್ಟಿಕೊಳ್ಳಬೇಕಾದರೆ ಅಲ್ಲಿ ಹೊಸ ಉದ್ದೇಶಗಳಿರುವುದು ಸಹಜ. ಕರ್ನಾಟಕ ಅಥ್ಲೆಟಿಕ್ಸ್‌ ಮತ್ತು ಸ್ಪೋರ್ಟ್ಸ್‌ ಅ ತನ್ನದೇ ಆದ ಉತ್ತಮ ಯೋಜನೆಗಳನ್ನು ರೂಪಿಸಿಕೊಂಡಿದೆ.

ಸಿಎಸ್‌ಆರ್‌ ಫಂಡ್‌ ಬಳಕೆ: ಕಾರ್ಪೋರೇಟ್‌ ವಲಯದಲ್ಲಿ ಕಾರ್ಪೋರೇಟ್‌ ಸಾಮಾಜಿಕ ಜವಾಬ್ದಾರಿಗಾಗಿ ಹಣ ಮೀಸಲಿಡುತ್ತಾರೆ. ಈ ಸಿಎಸ್‌ಆರ್‌ ನಿಧಿಯನ್ನು ಕ್ರೀಡೆಗೆ ವಿನಿಯೋಗಿಸುವಂತೆ ಕೋರಿಕೆ ಸಲ್ಲಿಸುವುದು. ಒಂದೊಂದು ಸಂಸ್ಥೆಯು ಒಂದು ಕ್ರೀಡೆ ಆಯೋಜನೆಯ ಜವಾಬ್ದಾರಿಯನ್ನು ಹೊತ್ತರೆ ಕ್ರೀಡಾಕೂಟ ಯಶಸ್ವಿಯಾಗುತ್ತದೆ.

ಸಿನಿಮಾ ತಾರೆಯರನ್ನು ಒಂದೊಂದು ಕ್ರೀಡೆಯ ರಾಯಭಾರಿಗಳನ್ನಾಗಿ ಮಾಡುವುದು. ಪ್ರತಿಯೊಬ್ಬರೂ ಆ ಕ್ರೀಡೆಯ ಯಶಸ್ಸಿಗೆ ತಮ್ಮ ನೆರವನ್ನು ನೀಡುವುದು.

ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ಕ್ರೀಡಾಕೂಟವನ್ನು ಆಯೋಜಿಸುವುದು. ಉದಾಹರಣೆಗೆ ಸೈಕ್ಲಿಸ್ಟ್‌ಗಳು ಹೆಚ್ಚಿರುವ ಬಾಗಲಕೋಟೆಯಲ್ಲಿ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸುವುದು, ಮಂಡ್ಯದಲ್ಲಿ ಕಬಡ್ಡಿ, ವಾಣಿವಿಲಾಸದಲ್ಲಿ ಜಲಕ್ರೀಡೆ ಹೀಗೆ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಕ್ರೀಡೆಗೆ ಸ್ಪರ್ಧೆಗಳನ್ನು ಆಯೋಜಿಸುವುದು. ಇದರಿಂದ ಪ್ರತಿಯೊಂದು ಜಿಲ್ಲೆಯನ್ನೂ ಕ್ರೀಡಾಚಟುವಟಿಕೆಯಿಂದ ಕೂಡಿರುವಂತೆ ಮಾಡಬಹುದು.

ಬೆಂಗಳೂರಿನಲ್ಲಿ ಯಾವ ರೀತಿಯಲ್ಲಿ ಸೌಲಭ್ಯಗಳಿವೆಯೋ ಅವೆಲ್ಲವೂ ಜಿಲ್ಲಾ ಕೇಂದ್ರಗಳಲ್ಲಿ ಸಿಗುವಂತಾಗಬೇಕು. ಅಲ್ಲಿಯೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳು ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಲಿದೆ ಎಂದು ಶಿವರುದ್ರಯ್ಯ ಸ್ವಾಮಿ ತಿಳಿಸಿದರು.

ಶಾಸಕರ ಜವಾಬ್ದಾರಿ:

ಕ್ರೀಡೆಗಳಲ್ಲಿ ಯುವ ಜನರು ಪಾಲ್ಗೊಳ್ಳುವುದೇ ಹೆಚ್ಚು. ರಾಜಕಾರಣಿಗಳು ಸರಕಾರದ ನೆರವಿನ ಕಡೆಗೆ ಗಮನ ಹರಿಸದೆ ತಮ್ಮಿಂದಾದ ನೆರವನ್ನು ಕ್ರೀಡೆಗೆ ನೀಡಬೇಕು. ಯಾರಾದರೂ ಕ್ರೀಡಾಕೂಟಕ್ಕೆ ನೆರವು ಕೇಳಲು ಬಂದರೆ ಅವರಿಗೆ 10-20 ಸಾವಿರ ನೀಡಿ ಕಳುಹಿಸಿಕೊಡುವ ಬದಲು ಒಂದು ಕ್ರೀಡೆಯನ್ನು ಆಯೋಜಸುವ ನೆರವು ನೀಡಬೇಕು. ಒಲಿಂಪಿಕ್ಸ್‌ನಲ್ಲಿರುವ ಕ್ರೀಡೆಗಳು ರಾಜ್ಯದಲ್ಲಿಯೂ ಇದೆ. ಈ ಒಂದೊಂದು ಕ್ರೀಡೆಗಳ ಜವಾಬ್ದಾರಿಯನ್ನು ಒಬ್ಬೊಬ್ಬ ಶಾಸಕರು ವಹಿಸಿಕೊಂಡರೆ ರಾಜ್ಯದ ಕ್ರೀಡಾಪಟುಗಳು ಪ್ರಾಯೋಜಕರನ್ನು ಹುಡುಕುವ ಅಥವಾ ಕ್ರೀಡಾಕೂಟಗಳಿಗೆ ದೇಣಿಗೆ ಸಂಗ್ರಹಿಸುವ ಕೆಲಸಗಳಿಗೆ ಮುಕ್ತಿ ಸಿಗುತ್ತದೆ. ಕ್ರೀಡಾ ಇಲಾಖೆಯ ಭಾರವೂ ಕಡಿಮೆಯಾಗುತ್ತದೆ.

ಶಿವರುದ್ರಯ್ಯ ಸ್ವಾಮಿ ಅಧ್ಯಕ್ಷರಾಗಿರುವ ಈ ಸಂಸ್ಥೆಯಲ್ಲಿ ಉಡುಪಿಯಲ್ಲಿ ಹೆಚ್ಚುವರಿ ಎಸ್ಪಿ ಆಗಿರುವ ಸಿದ್ದಲಿಂಗಪ್ಪ ಅವರು ನಿರ್ದೇಶಕರಾಗಿರುತ್ತಾರೆ. ರಾಷ್ಟ್ರೀಯ ಕ್ರೀಡಾಪಟು ಗಣೇಶ್‌ ಶಾನ್ಕಟ್‌ ಅವರು ಕಾರ್ಯದರ್ಶಿಯಾಗಿರುತ್ತಾರೆ.

ಕ್ರೀಡಾಕೂಟಗಳಿಗೆ ನೆರವು: ಕರ್ನಾಟಕ ಅಥ್ಲೆಟಿಕ್ಸ್‌ ಮತ್ತು ಸ್ಪೋರ್ಟ್ಸ್‌ ಅಕಾಡೆಮಿಯ ಅಧ್ಯಕ್ಷರಾಗಿರುವ ಶಿವರುದ್ರಯ್ಯ ಸ್ವಾಮಿ ಅವರು ತಮ್ಮ ಸಂಸ್ಥೆಯ ಮೂಲಕ ಈಗಾಗಲೇ ಹಲವು ಕ್ರೀಡಾಕೂಟಗಳಿಗೆ ನೆರವು ನೀಡಿರುತ್ತಾರೆ. ಜಾವೆಲಿನ್‌ ಪಟುಗಳಿಗಾಗಿಯೇ ನಡೆದ ಚಾಂಪಿಯನ್‌ಷಿಪ್‌ ಯಶಸ್ಸಿನಲ್ಲಿ ಶಿವರುದ್ರಯ್ಯನವರ ಪಾತ್ರ ಪ್ರಮುಖವಾಗಿತ್ತು. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಕ್ರೀಡಾಕೂಟಕ್ಕೂ ಪ್ರೋತ್ಸಾಹ ನೀಡಿದ್ದಾರೆ. ಸದ್ಯದಲ್ಲಿ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಸಲು ನಿರ್ಧರಿಸಿದ್ದಾರೆ.

ಕರ್ನಾಟಕ ಮಾದರಿಯಾಗಲಿ: “ನಮ್ಮ ಯೋಜನೆಗಳಿಗೆ ಕಾರ್ಪೊರೇಟ್‌ ವಲಯ, ಸಕರಾರ  ಮತ್ತು ಜನಪ್ರತಿನಿಧಿಗಳು ಪ್ರೋತ್ಸಾಹ ನೀಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯ ಎಂದೆನಿಸುವುದು ಸ್ಪಷ್ಟ” ಎಂದು ಅತ್ಯಂತ ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಶಿವರುದ್ರಯ್ಯ ಸ್ವಾಮಿ.

ಸಂಸ್ಥೆಗಳಲ್ಲಿ ಪಾರದರ್ಶಕತೆ ಅಗತ್ಯ: “ಸಾರ್ವಜನಿಕ ವಲಯದ ಹಣವನ್ನು ಉಪಯೋಗಿಸಿದ ನಂತರ ಅವರಿಗೆ ಲೆಕ್ಕ ತೋರಿಸುವ ಕಾರ್ಯವನ್ನು ಸಂಸ್ಥೆಗಳು ಮರೆಯಬಾರದು. ಕ್ರೀಡೆಯ ಹೆಸರಿನಲ್ಲಿ ಪಡೆದ ಹಣವನ್ನು ಕ್ರೀಡಾಭಿವೃದ್ಧಿಗಳಿಗೇ ಬಳಸಬೇಕು. ಹಾಗಾದಲ್ಲಿ ಮಾತ್ರ ಕ್ರೀಡಾ ಪ್ರೋತ್ಸಾಹಕರು ಮುಂದಿನ ಕ್ರೀಡಾಕೂಟಗಳಿಗೆ ನೆರವು ನೀಡುತ್ತಾರೆ,” ಎನ್ನುತ್ತಾರೆ ಶಿವರುದ್ರಯ್ಯ ಸ್ವಾಮಿ.

Related Articles