Wednesday, July 24, 2024

ಸಾಗರದ ಹೃದಯದಲ್ಲಿ ಕ್ರಿಕೆಟ್‌ ʼಪಂಡಿತʼರ ಅಕಾಡೆಮಿ

Cricket was my reason for living: Harold Larwood

ಶಿಕ್ಷಣ ಮತ್ತು ಕ್ರಿಕೆಟ್‌ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್‌ ಅವರೊಂದಿಗೆ ಆಡಿ ಬಳಿಕ ವೃತ್ತಿ ಜೀವನದಲ್ಲಿ ಕೆನರಾ ಬ್ಯಾಂಕ್‌ ತಂಡವನ್ನು ಮುನ್ನಡೆಸಿ ತನ್ನ ಕ್ರಿಕೆಟ್‌ ಅನುಭವವನ್ನು ಮುಂದಿನ ಪೀಳಿಗೆಗೆ ನೀಡಲು ನಾಗೇಂದ್ರ ಪಂಡಿತ್‌ ಅವರು ಮಲೆನಾಡಿನ ಮಡಿಲಲ್ಲಿರುವ ಸಾಗರದಲ್ಲಿ ನಾಗೇಂದ್ರ ಪಂಡಿತ್‌ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಿ ಯುವ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಈ ಅಕಾಡೆಮಿ ಕ್ರಿಕೆಟ್‌ ಮಾತ್ರವಲ್ಲ ಬದುಕನ್ನೂ ಕಲಿಸುತ್ತದೆ. Nagendra Pandith Cricket Academy teaches Cricket and Life.

ನಾಗೇಂದ್ರ ಪಂಡಿತ್‌ ಅವರ ಚಿಕ್ಕಪ್ಪ ಸುಧಾಕರ್‌ ಪಂಡಿತ್‌ ಕಾಲೇಜಿನಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಅವರಿಂದ ಸ್ಫೂರ್ತಿ ಪಡೆದ ನಾಗೇಂದ್ರ ಅವರು ಚಿಕ್ಕಂದಿನಿಂದಲೂ ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುಧಾಕರ್‌ ಪಂಡಿತ್‌ ಅವರು ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭ ಉತ್ತಮ ಆಟಗಾರರಾಗಿದ್ದರು. ರಾಜ್ಯ ತಂಡದಲ್ಲಿ ಸಂಭಾವ್ಯರ ಪಟ್ಟಿಯಲ್ಲೂ ಇದ್ದಿದ್ದರು. ಆದರೆ ದುರಾದೃಷ್ಟವಶಾತ್‌ ಆಯ್ಕೆ ಪ್ರಕ್ರಿಯೆಯ ಒಂದು ದಿನ ಮುಂಚಿತವಾಗಿ ಅವರು ಅಪಘಾತದಲ್ಲಿ ಗಾಯಗೊಂಡ ಕಾರಣ ಮತ್ತೆ ಕ್ರಿಕೆಟ್‌ನಲ್ಲಿ ಹೆಚ್ಚು ಸಮಯ ಮುಂದುವರಿಯಲಿಲ್ಲ. ಕಾಲಿನ ಶಸ್ತ್ರ ಚಿಕಿತ್ಸೆ ನಡೆದು, ನಂತರ ರನ್ನರ್‌ ಮೂಲಕ ಕ್ರಿಕೆಟ್‌ ಮುಂದುವರಿಸಿದುರೂ ಯಶಸ್ಸು ಸಿಗಲಿಲ್ಲ. ಮೈಸೂರು ಪ್ಲೇವುಡ್‌ ಫ್ಯಾಕ್ಟರಿ ದಾಂಡೇಲಿಯಲ್ಲಿ ಕ್ರಿಕೆಟ್‌ ಆಟ ನೋಡಿ ಕೆಲಸ ದೊರೆಯಿತು. ನಂತರ ಸಾಗರಕ್ಕೆ ಬಂದು ಕ್ರಿಕೆಟ್‌ ಕ್ಲಬ್‌ ಆಫ್‌ ಸಾಗರವನ್ನು ಸೇರಿಕೊಂಡರು. ಇದು 1951ರಲ್ಲಿ ಸ್ಥಾಪನೆಯಾದ್ದು. ಇದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಇನ್‌ಸ್ಟಿಟ್ಯೂಷನಲ್‌ ಸದಸ್ಯತ್ವ ಹೊಂದಿರುವ ಕ್ಲಬ್‌ ಆಗಿತ್ತು. ಈಗಲೂ ಕ್ಲಬ್‌ ಕ್ರಮಾಂದಕಲ್ಲಿ 49ನೇ ಸಂಖ್ಯೆ ಹೊಂದಿದೆ.

ಸುಧಾಕರ್‌ ಪಂಡಿತ್‌ ಸ್ಫೂರ್ತಿ: ಕ್ರಿಕೆಟ್‌ ಕ್ಲಬ್‌ ಆಫ್‌ ಸಾಗರದಲ್ಲಿ ಸುಧಾಕರ್‌ ಪಂಡಿತ್‌ ಅವರ ಆಟ ಗಮನಿಸುತ್ತಿದ್ದ ನಾಗೇಂದ್ರಗೆ ಅವರಂತೆ ಸಾಧನೆ ಮಾಡಬೇಕೆಂಬುದು ಕನಸಾಗಿತ್ತು. ಶಿಬಿರಗಳಲ್ಲಿ ಪಾಲ್ಗೊಂಡರು. ಹಾಗಾಗಿ ಪ್ರತಿಯೊಂದು ಹಂತದಲ್ಲೂ ಉತ್ತಮ ಆಟ ಪ್ರದರ್ಶಿಸಿದರು. ರಾಜ್ಯ ಮಟ್ಟದ ಶಾಲಾ ಟೂರ್ನಿಗಳಲ್ಲಿ ಆಡುವ ಅವಕಾಶ ಸಿಕ್ಕಿತು. ಆಗ ರೋಜರ್‌ ಬಿನ್ನಿ ಆಟವನ್ನು ನೋಡಿ ಖುಷಿ ಪಡುತ್ತಿದ್ದೇವೆ. ಬಳಿಕ ಕಾಲೇಜು ಹಂತದ ಟೂರ್ನಿಗಳಲ್ಲಿ ಪಾಲ್ಗೊಂಡು ಮೈಸೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾದರು. ಆರಂಭಿಕ ಆಟಗಾರರಾಗಿರುವ ನಾಗೇಂದ್ರ ಅವರು ಅಂತರ್‌ ವಿವಿ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದರು. ಎರಡನೇ ಪಂದ್ಯದಲ್ಲೂ 80 ರನ್‌ ಗಳಿಸಿ ತಾನೊಬ್ಬ ಸಮರ್ಥ ಆಟಗಾರ ಎಂಬುದನ್ನು ಸಾಬೀತುಪಡಿಸಿದರು. ಇದರಿಂದಾಗಿ ದಕ್ಷಿಣ ವಲಯ ವಿಜಿ ಟ್ರೋಫಿಯಲ್ಲಿ ಆಡಲು ಆಯ್ಕೆಯಾದರು. ಅದು ಅಖಿಲ ಭಾರತ ಟೂರ್ನಿಯಾಗಿತ್ತು. ಕೃಷ್ಣಮಾಚಾರಿ ಶ್ರೀಕಾಂತ್‌ ದಕ್ಷಿಣ ವಲಯ ತಂಡದ ನಾಯಕರಾಗಿದ್ದರು. ಉನ್ನತ ಮಟ್ಟದ ಕ್ರಿಕೆಟ್‌ ಆಡುವಾಗ ಶಿಕ್ಷಣದಲ್ಲಿ ಮುಂದುವರಿಬೇಕೋ ಅಥವಾ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕೋ ಎಂಬ ಗೊಂದಲ ಕಾಡಿತು. ಬಿಕಾಂ ಪದವಿ ಮುಗಿಸಿ ನಂತರ ಕ್ರಿಕೆಟ್‌ನಲ್ಲಿ ಮುಂದುವರಿಬೇಕೆಂಬ ತೀರ್ಮಾನ ಕೈಗೊಂಡರು. ಇದರಿಂದಾಗಿ ದಕ್ಷಿಣ ವಲಯ ಕ್ರಿಕೆಟ್‌ ಅವರ ಕೊನೆಯ ಸ್ಪರ್ಧೆಯಾಯಿತು. ಬಿಕಾಂ ಪದವಿ ಮುಗಿದ ಬಳಿಕ ಸಿಂಡಿಕೇಟ್‌ ಹಾಗೂ ಕೆನರಾ ಬ್ಯಾಂಕಿನಿಂದ ಉದ್ಯೋಗಕ್ಕೆ ಅವಕಾಶ ಬಂತು. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ ಸೇರಿಕೊಂಡರು.

ಕೆನರಾ ಬ್ಯಾಂಕ್‌ ತಂಡದ ನಾಯಕ: ಕೆನರಾ ಬ್ಯಾಂಕ್‌ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಬ್ಯಾಂಕಿನ ಕ್ರಿಕೆಟ್‌ ತಂಡದಲ್ಲಿ ಆಡಿದವರು ರಣಜಿ ಹಾಗೂ ಭಾರತವನ್ನು ಪ್ರತಿನಿಧಿಸಿದ ಆಟಗಾರರಾಗಿರುತ್ತಾರೆ. ಆದರೆ ಹಳ್ಳಿಯಿಂದ ಬಂದ ಆಟಗಾರರ ಬಗ್ಗೆ ಅಲ್ಲಿ ಸ್ವಲ್ಪ ಮಟ್ಟಿನ ನಿರ್ಲಕ್ಷ್ಯ ಮನೆ ಮಾಡಿತ್ತು. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿಗೆ ಬಂದವರು ನಂತರ ಬೇರೆ ಬೇರೆ ಕಡೆಗೆ ಹೊರಟು ಹೋಗುತ್ತಿದ್ದರು. ಇಲ್ಲಿ ಯಾರೂ ಆಡಲು ನಿಲ್ಲುವುದಿಲ್ಲ ಎಂಬ ತಪ್ಪು ಅಭಿಪ್ರಾಯ ಮನೆ ಮಾಡಿತ್ತು. ಆದರೆ ನಾಗೇಂದ್ರ ಪಂಡಿತ್‌ ಆ ರೀತಿಯ ಕ್ರಿಕೆಟಿಗರಾಗಿರಲಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಮಿಂಚಿ 2-3 ವರ್ಷದಲ್ಲೇ ಆಲ್‌ ಇಂಡಿಯಾ ಕೆನರಾ ಬ್ಯಾಂಕಿನ ತಂಡದ ನಾಯಕರಾದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ ತಂಡ ರಾಷ್ಟ್ರ ಮಟ್ಟದಲ್ಲಿ ಮಿಂಚಿತ್ತು. ಆಗ ಕೆನರಾ ಬ್ಯಾಂಕಿನ ಜಿ.ಎಂ. ಆಗಿ ಗಣೇಶ್‌ ರಾವ್‌ ಎಂಬುವರು ಕಾರ್ಯನಿರ್ವಹಿಸುತ್ತಿದ್ದರು. ಉತ್ತಮ ರೀತಿಯಲ್ಲಿ ತಂಡಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ನಾಗೇಂದ್ರ ಅವರು ಈ ಸಂದರ್ಭದಲ್ಲಿ ತಂಡದ ನಾಯಕರಾಗಿದ್ದರು. ಸುನಿಲ್‌ ಜೋಶಿ ಮತ್ತು ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಪ್ರಮುಖ ಆಟಗಾರರು ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ ತಂಡದಲ್ಲಿದ್ದರು.

1983ರಲ್ಲಿ ನಾಗೇಂದ್ರ ಅವರು ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಉತ್ತಮ ರೀತಿಯಲ್ಲಿ ತಂಡವನ್ನು ಕಟ್ಟಿದ ಪರಿಣಾಮ ಕೆನರಾ ಬ್ಯಾಂಕ್‌ ಕರ್ನಾಟಕದಲ್ಲಿ ಒಂದು ಉತ್ತಮ ತಂಡವಾಗಿ ಬೆಳೆದು ನಿಂತಿತು. 1991ರ ವರೆಗೂ ನಾಗೇಂದ್ರ ಅವರು ಕೆನರಾ ಬ್ಯಾಂಕ್‌ ಪರ ಆಡಿದರು. ಆ ನಂತರ ಬ್ಯಾಂಕಿಂಗ್‌ ವೃತ್ತಿಯ ಕಡೆಗೆ ಹೆಚ್ಚಿನ ಗಮನ ಹರಿಸಿದರು. ಶಿವಮೊಗ್ಗ ಮತ್ತು ದೆಹಲಿ ಶಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ದೆಹಲಿಯಿಂದ ಮುಂಬಯಿ, ಮುಂಬಯಿಂದ ಬೆಂಗಳೂರು ಮತ್ತೆ ಪುನಃ ಮುಂಬಯಿ ಹೀಗೆ ವಿವಿಧೆಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕ್ರಿಕೆಟ್‌ನಿಂದ ದೂರ ಉಳಿಯಲಿಲ್ಲ. ಅಭ್ಯಾಸ ಮಾಡುತ್ತ ಅವಕಾಶ ಸಿಕ್ಕಾಗ ಆಡುತ್ತ ತಮ್ಮಲ್ಲಿರುವ ಪ್ರತಿಭೆಯನ್ನು ಜೀವಂತವಾಗಿರಿಸಿಕೊಂಡಿದ್ದರು. ದುಬೈನಲ್ಲಿ ಕೆಲಸ ಮಾಡಿದ ನಂತರ ಕೆನರಾ ಬ್ಯಾಂಕ್‌ ನಾಗೇಂದ್ರ ಅವರನ್ನು ಪಂಜಾಬ್‌ಗೆ ವರ್ಗಾವಣೆ ಮಾಡಿತು. ಹಳ್ಳಿಯಲ್ಲಿ ಕೆಲ ತಿಂಗಳ ಕಾಲ ಕೆಲಸ ಮಾಡಿ ನಂತರ ವಿ.ಆರ್‌.ಎಸ್‌ ಪಡೆದು ಬ್ಯಾಂಕ್‌ ಉದ್ಯೋಗದಿಂದ ಹೊರ ಬಂದರು. ಆದರೆ ಎಲ್ಲಿಯೂ ಕ್ರಿಕೆಟ್‌ನಿಂದ ದೂರವಾಗಲಿಲ್ಲ. 2006ರಲ್ಲಿ ಮತ್ತೆ ದುಬೈಗೆ ಹೋಗಿ ಬಿ,ಆರ್‌. ಶೆಟ್ಟಿಯವರ ಕಂಪೆನಿಯಲ್ಲಿ 2020ರ ತನಕ ದುಡಿದು ಮತ್ತೆ ಸಾಗರಕ್ಕೆ ಹಿಂದಿರುಗಿದರು.

ಅಕಾಡೆಮಿಗೆ ಸಾಗರದ ಸ್ಥಳೀಯರ ಆಶಯ: 2020ರಲ್ಲಿ ಅಬುದಾಬಿಯಿಂದ ಸಾಗರಕ್ಕೆ ಬರುವ ಮೊದಲು 2018ರಲ್ಲಿ ನಾಗೇಂದ್ರ ಅವರು ರಜೆಯಲ್ಲಿ ತಾಯ್ನಾಡಿಗೆ ಬಂದಿದ್ದರು. ಸ್ಥಳೀಯರು ಇಲ್ಲಿನ ಯುವಕರಿಗಾಗಿ ಕ್ರಿಕೆಟ್‌ ತರಬೇತಿಗಾಗಿ ಏನಾದರೂ ವ್ಯವಸ್ಥೆ ಮಾಡಿರೆಂದು ವಿನಂತಿಸಿಕೊಂಡಿದ್ದರು. ಇಲ್ಲಿನ ಯುವಕರಿಗಾಗಿ ಏನಾದರೂ ನೆರವು ನೀಡಬೇಕು, ಇಲ್ಲಿಯ ಮಕ್ಕಳು ಕೂಡ ಬೆಂಗಳೂರಿಗೆ ಹೋಗಿ ಉನ್ನತ ಮಟ್ಟದ ಕ್ರಿಕೆಟ್‌‌ ಆಡಬೇಕೆಂದು ನಾಗೇಂದ್ರ ಹಂಬಲಿಸಿದ್ದರು. ಅದಕ್ಕಾಗಿ ಅಮ್ಮನ ಹೆಸರಿನಲ್ಲಿದ್ದ ಖಾಲಿ ಸೈಟ್‌ನಲ್ಲಿ ಅಕಾಡೆಮಿ ಮಾಡಬೇಂದು ಬಯಸಿದರು. 2018ರ ಡಿಸೆಂಬರ್‌ನಲ್ಲಿ ಸಾಗರದ ಹೃದಯ ಭಾಗದಲ್ಲಿ ಆರಂಭಗೊಂಡ ಯೋಜನೆ 2020 ಜನವರಿಯಲ್ಲಿ ಪೂರ್ಣಗೊಂಡಿತು. 2020 ಫೆಬ್ರವರಿ 29ರಲ್ಲಿ ಅವಧೂತ ದತ್ತಪೀಠ ಮೈಸೂರಿನ ಪರಮಪೂಜ್ಯರಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕ್ರಿಕೆಟ್‌ ಆಡುವ ಮೂಲಕ ಉದ್ಘಾಟಿಸಿದರು.

ಅಕಾಡೆಮಿಯಲ್ಲಿರುವ ಸೌಲಭ್ಯಗಳು: ಸಾಗರದಲ್ಲಿರುವ ನಾಗೇಂದ್ರ ಪಂಡಿತ್‌ ಕ್ರಿಕೆಟ್‌‌ ಅಕಾಡೆಮಿಯನ್ನು ಕಂಡಾಗ ಈ ರೀತಿಯಲ್ಲಿಯೂ ಅಕಾಡೆಮಿ ಸ್ಥಾಪಿಸಬಹುದೇ ಎಂದು ಅಚ್ಚರಿಯಾಗುತ್ತದೆ. ಎರಡು ಪಿಚ್‌ಗಳಿರುವ ಎರಡು ಒಳಾಂಗಣ ಕ್ರೀಡಾಂಗಣ. ತರಬೇತಿ ಪಡೆಯುತ್ತಿರುವ ಮಕ್ಕಳ ಮನೆಯವರಿಗೆ ನೋಡಲು ಅನುಕೂಲವಾಗುವಂತೆ ಗ್ಯಾಲರಿ. ಉತ್ತಮ ಗುಣ ಮಟ್ಟದ ಕಿಟ್‌ ಸೌಲಭ್ಯಗಳು. ಎಲ್ಲರಿಗೂ ಅವರವ ಹೆಸರಿನ ಜರ್ಸಿ. ಕೆಎಸ್‌ಸಿಎಯಿಂದ ಮಾನ್ಯತೆ ಪಡೆದ ಚೆಂಡುಗಳು. ಕ್ರಿಕೆಟ್‌ ಜೊತೆಯಲ್ಲಿ ಫಿಟ್ನೆಸ್‌ ತರಬೇತುದಾರರು. ನೆಲಮಹಡಿಯಲ್ಲಿ ಕ್ರಿಕೆಟ್‌ ಅಕಾಡೆಮಿಯಾದರೆ ಎರಡು ಮಹಡಿಗಳಲ್ಲಿ ನಾಗೇಂದ್ರ ಅವರ ಕುಟುಂಬಕ್ಕೆ ವಾಸ್ತವ್ಯದ ಮನೆ.

ಇಬ್ಬರು ಮಕ್ಕಳಿಂದ ಆರಂಭವಾದ ಅಕಾಡೆಮಿ: ಸಾಗರದಲ್ಲಿ ಕ್ರಿಕೆಟ್‌ ಬೆಂಗಳೂರಿನಷ್ಟು ಅಭಿವೃದ್ಧಿಹೊಂದಿಲ್ಲ. ಆದರೆ ಉತ್ತಮ ಯುವ ಆಟಗಾರರಿಂದ ತುಂಬಿದೆ. ನಾಗೇಂದ್ರ ಅವರು ಅಕಾಡೆಮಿ ಸ್ಥಾಪಿಸಿದ ಮೊದಲ ದಿನ ದಾಖಲಾದದ್ದು ಇಬ್ಬರು ಆಟಗಾರರು. ಆದರೆ ಇಂದು 80ಕ್ಕೂ ಹೆಚ್ಚು ಯುವ ಆಟಗಾರರು ತರಬೇತಿ ಪಡೆಯುತ್ತಿದ್ದಾರೆ. ಮೊದಲ ದಿನದಿಂದ ಇಂದಿನವರೆಗೂ ತರಬೇತಿ ಪಡೆದ ಆಟಗಾರರ ವಿವರಗಳನ್ನು ನಾಗೇಂದ್ರ ಅವರು ದಾಖಲು ಮಾಡಿರುತ್ತಾರೆ. ಅಲ್ಲಿರುವ ಕಡತಗಳು ಪ್ರತಿಯೊಬ್ಬ ಆಟಗಾರನ ಗುಣ ಮಟ್ಟ ಮತ್ತು ಸಾಧನೆಗಳನ್ನು ಹೇಳುತ್ತಿವೆ. ಅಮೃತ್‌ ಸಾಗರ್‌ ಅಕಾಡೆಮಿಗೆ ಸೇರಿಕೊಂಡ ಮೊದಲ ಕ್ರಿಕೆಟಿಗ, ಈಗ ಬೆಂಗಳೂರಿನಲ್ಲಿ ನೆಲೆಸಿರುತ್ತಾನೆ. ನೋದಾಯಿತ ಆಟಗಾರರಲ್ಲದೆ ಅಲ್ಪ ಅವಧಿಗೆ ಬಂದು ಸೇರಿದ ಆಟಗಾರರೂ ಇದ್ದಾರೆ. ಆಟಗಾರರಿಗೆ ಕ್ರಿಕೆಟ್‌ನ ಮೂಲ ತಂತ್ರಗಳನ್ನು ಚೆನ್ನಾಗಿ ತಿಳಿಸಿದರೆ, ಟೆಕ್ನಿಕ್‌ಗಳನ್ನು ಹೇಳಿಕೊಟ್ಟರೆ ಅದೇ ಅವರ ಆಸ್ತಿ. “ನಮ್ಮ ಹುಡುಗರು ಬೇರೆ ಜಿಲ್ಲೆಗಳಿಗೆ ಹೋಗಿ ಆಡುತ್ತಿದ್ದರೆ “ನೀನು ಸಾಗರದ ನಾಗೇಂದ್ರ ಪಂಡಿತ್‌ ಅಕಾಡೆಮಿಯಲ್ಲಿ ತರಬೇತಿ ಪಡೆದದ್ದಾ?” ಎಂದು ಗುರುತಿಸುವಷ್ಟರಮಟ್ಟಿಗೆ ನಾವು ಇಲ್ಲಿ ಕ್ರಿಕೆಟ್‌ನ ಮೂಲ ಟೆಕ್ನಿಕ್‌ಗಳನ್ನು ಹೇಳಿಕೊಡುತ್ತೇವೆ,” ಎನ್ನುತ್ತಾರೆ ನಾಗೇಂದ್ರ ಪಂಡಿತ್‌.

“ಮಕ್ಕಳು ಕ್ರಿಕೆಟ್‌ ಕಲಿಯುವುದಕ್ಕೆ ಮೊದಲು ಅವರು ಉತ್ತಮ ರೀತಿಯಲ್ಲಿ ವರ್ತಿಸುವಂತೆ ಮಾಡಬೇಕು. ಅವರು ಗುರು ಹಿರಿಯರಿಗೆ ಯಾವ ರೀತಿಯಲ್ಲಿ ಗೌರವ ನೀಡಬೇಕು. ಸಾಧನೆ ಎಷ್ಟೇ ಉತ್ತಮವಾಗಿದ್ದರೂ ಕೆಲವೊಮ್ಮೆ ನಮ್ಮ ವರ್ತನೆಯಿಂದ ನಾವು ಟೀಕೆಗೆ ಗುರಿಯಾಗಿ ದೂರವಾಗುತ್ತೇವೆ. ನಮ್ಮ ಅಕಾಡೆಮಿಯಲ್ಲಿ ಬೆಳೆದ ಮಕ್ಕಳು ಹಾಗಾಗಬಾರದು ಎಂಬ ಕಾಳಜಿ ನಮ್ಮದು. ಮನೆಯವರ ಒತ್ತಾಸೆಗೆ ಬರುವವರಿಗೆ ಅವಕಾಶ ಇರುವುದಿಲ್ಲ. ನೈಜ ಆಸಕ್ತಿ ಇರುವವರಿಗೆ, ಕ್ರಿಕೆಟ್‌ನಲ್ಲಿ ಮುಂದುವರಿಯುವವರಿಗೆ ಇಲ್ಲಿ ಅವಕಾಶ. ಅಕಾಡೆಮಿಗೆ ಬಂದ ಕೂಡಲೇ ನೋಂದಾವಣೆ ಮಾಡುವುದಿಲ್ಲ. ಒಂದು ತಿಂಗಳ ಕಾಲ ನಿರಂತರವಾಗಿ ಬಂದು, ಉತ್ತಮ ರೀತಿಯಲ್ಲಿ ವರ್ತಿಸಿದರೆ ಆ ಬಳಿಕ ದಾಖಲಾತಿ ಮಾಡಿಕೊಳ್ಳಲಾಗುವುದು. ಇದು ಹಣ ಮಾಡುವ ಅಕಾಡೆಮಿಯಲ್ಲ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ತರಬೇತಿ ಸಿಗಲಿ ಎಂಬುದೇ ನನ್ನ ಉದ್ದೇಶ,” ಎನ್ನುತ್ತಾರೆ ಪಂಡಿತ್‌.

ಪ್ಲಾಸ್ಟಿಕ್‌ ಬಾಲ್‌ ಬಳಕೆ ಇಲ್ಲ: ಅನೇಕ ಅಕಾಡೆಮಿಗಳಲ್ಲಿ ಪ್ಲಾಸ್ಟಿಕ್‌ ಬಾಲ್‌ಗಳನ್ನು ಬಳಸುತ್ತಾರೆ. ಆದರೆ ನಾಗೇಂದ್ರ ಪಂಡಿತ್‌ ಅಕಾಡೆಮಿಯಲ್ಲಿ ಪ್ಲಾಸ್ಟಿಕ್‌ ಬಾಲ್‌ಗಳನ್ನು ಬಳಸುವುದಿಲ್ಲ. ಕೆಎಸ್‌ಸಿಎ ಮಾನ್ಯತೆ ಪಡೆದ, ಅಲ್ಲಿ ಬಳಸುವ ಬಾಲ್‌ಗಳನ್ನೇ ಖರೀದಿ ಮಾಡಿ ಬಳಸಲಾಗುತ್ತಿರುವುದು ವಿಶೇಷ.

ಅಕಾಡೆಮಿಗೆ ಕೀರ್ತಿ ತಂದವರು: ನಾಗೇಂದ್ರ ಪಂಡಿತ್‌ ಅಕಾಡೆಮಿ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದೆ. ಅವರೆಲ್ಲ ವಿವಿಧ ಹಂತದಲ್ಲಿ ಆಡುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ತರಬೇತಿ ಪಡೆದ ತನ್ಮಯ ಮಂಜುನಾಥ್‌ 50 ಓವರುಗಳ ಪಂದ್ಯದಲ್ಲಿ 407 ರನ್‌ ಗಳಿಸಿ ದಾಖಲೆ ಬರೆಯುವ ಮೂಲಕ ಸಾಗರ ಕ್ರಿಕೆಟ್‌ ಕ್ಲಬ್‌ಗೆ ಮತ್ತು ನಾಗೇಂದ್ರ ಪಂಡಿತ್‌ ಕ್ರಿಕೆಟ್‌ ಅಕಾಡೆಮಿಗೆ ಕೀರ್ತಿ ತಂದಿದ್ದಾರೆ. ತನ್ಮಯ್‌ 16 ವರ್ಷ ವಯೋಮಿತಿಯ ಕೆಎಸ್‌ಸಿಎ ಪಂದ್ಯದಲ್ಲಿ 165 ಎಸೆಗಳನ್ನೆದುರಿಸಿ 24 ಸಿಕ್ಸರ್‌ ಹಾಗೂ 48 ಬೌಂಡರಿಗಳನ್ನು ಸಿಡಿಸಿ ದಾಖಲೆ ಬರೆದಿದ್ದರು. ಈಗ U19ಗಾಗಿ ತರಬೇತಿ ಪಡೆಯುತ್ತಿರುವ ತನ್ಮಯ್‌ ಅವರಿಗೆ ಇಲ್ಲಿ ತರಬೇತಿ ನೀಡಿದರೂ ಹೆಚ್ಚಿನ ತರಬೇತಿಗಾಗಿ ಕೆಲವೊಮ್ಮೆ ಹುಬ್ಬಳ್ಳಿಗೆ ಕಳುಹಿಸಲಾಗುತ್ತದೆ. ಕರ್ನಾಟಕದ ಶ್ರೇಷ್ಠ ಆಟಗಾರ ಸೋಮಶೇಖರ್‌ ಶಿರಗುಪ್ಪಿ ಅವರು ತಮ್ಮ ಅಕಾಡೆಮಿಯಲ್ಲಿ ನೆರವು ನೀಡುತ್ತಾರೆ. ಮತ್ತು ರೋಹಿತ್‌ ಶರ್ಮಾ ಕ್ರಿಕೆಟ್‌ ಅಕಾಡೆಮಿಯನ್ನು ನಡೆಸುತ್ತಿರುವ ದಯಾನಂದ ಶೆಟ್ಟಿ ಅವರಲ್ಲಿಯೂ ತನ್ಮಯ್‌ ತರಬೇತಿ ಪಡೆಯುತ್ತಾರೆ. ಶ್ರೇಯಾಂಕ್‌ ಸಾಗರ್‌ ಕೂಡ U19 ಸಂಭಾವ್ಯರ ಪಟ್ಟಿಯಲ್ಲಿದ್ದಾನೆ. ಮಿತೇಶ್‌ ಕುಮಾರ್‌ ರಾಜ್ಯ U19 ಆಡಿದ ಆಟಗಾರ, ರೆಯಾನ್‌ ಇಬ್ರಾಹಿಂ ರಾಜ್ಯದ 16ವರ್ಷ ವಯೋಮಿತಿಯ ತಂಡದ ಆಟಗಾರರಾಗಿದ್ದರು. ತನ್ಮಯ್‌ ರಾಜ್ಯದ 16 ವರ್ಷ ವಯೋಮಿತಿ ತಂಡದ ಆಟಗಾರ, ಅಂಶು ಎ ಮತ್ತು ಅಜಿತ್‌ ಎಂಸಿ ರಾಜ್ಯದ 16ವರ್ಷ ವಯೋಮಿತಿಯ ಸಂಭಾವ್ಯ ಆಟಗಾರರು, ಆರ್ಯನ್‌ ಎಂ,ಕೆ. ರಾಜ್ಯದ 14 ವರ್ಷ ವಯೋಮಿತಿಯ ಸಂಭಾವ್ಯ ಆಟಗಾರರು.ಹೀಗೆ ಹಲವು ಯುವ ಪ್ರತಿಭಾವಂತ ಆಟಗಾರರಿಗೆ ಅಕಾಡೆಮಿ ತರಬೇತಿ ನೀಡಿದೆ.

ಫಿಟ್ನಸೆ ಕೋಚ್‌: ನಾಗೇಂದ್ರ ಪಂಡಿತ್‌ ಕ್ರಿಕೆಟ್‌ ಅಕಾಡೆಮಿ ಈಗ ಮತ್ತಷ್ಟು ವೃತ್ತಿಪರವಾಗಿ ಬೆಳೆಯುತ್ತಿದೆ. ಯುವ ಕ್ರಿಕೆಟಿಗರ ಫಿಟ್ನೆಸ್‌ ಕಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆಟದ ಜೊತೆಯಲ್ಲಿ ಫಿಟ್ನೆಸ್‌ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ. ಹಾಗಾಗಿ ಪ್ರಧಾನ ಕೋಚ್‌ ನಾಗೇಂದ್ರ ಅವರು ಅಕಾಡೆಮಿಯಲ್ಲಿ ಒಬ್ಬ ಫಿಟ್ನೆಸ್‌ ಕೋಚನ್ನು ನೇಮಿಸಿದ್ದಾರೆ. ಅನುಭವಿ ಫಿಟ್ನೆಸ್‌ ಕೋಚ್‌ ಮುಬಾರಕ್‌ ಅವರು ಯುವ ಆಟಗಾರರಿಗೆ ಫಿಟ್ನೆಸ್‌ ತರಬೇತಿ ನೀಡುತ್ತಿದ್ದಾರೆ. ಮಿತೇಶ್‌ ಕುಮಾರ್‌, ಶ್ರೇಯಾಂಕ್‌ ಸಾಗರ್‌ ಮತ್ತು ಕೋಚ್‌ ಶಶಾಂಕ್‌ ಅವರು ಅಕಾಡೆಮಿಯಲ್ಲಿನ ಆಟಗಾರರಿಗಾಗಿ ಶ್ರಮಿಸುತ್ತಿದ್ದಾರೆ. ನಾಗೇಂದ್ರ ಪಂಡಿತ್‌ ಅಕಾಡೆಮಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದ್ದರೂ ವಿದೇಶದಿಂದಲೂ ಯುವ ಆಟಗಾರರು ರಜಾ ಕಾಲದಲ್ಲಿ ಬಂದು ತರಬೇತಿ ಪಡೆಯುತ್ತಿರುವುದು ವಿಶೇಷ.

ಹೆಚ್ಚಿನ ತರಬೇತಿಗಾಗಿ ಆಟಗಾರರಿಗೆ ಪ್ರಾಯೋಜಕತ್ವ:  ಕೆಲವು ಅಕಾಡೆಮಿಗಳಲ್ಲಿ ಮಕ್ಕಳು ಸೇರ್ಪಡೆಯಾದರೆ ಸಾಕು. ತಮ್ಮ ಅಕಾಡೆಮಿಯಲ್ಲಿ ಏನು ಸೌಲಭ್ಯ ಇದೆಯೋ ಅದರಲ್ಲೇ ಮುಂದುವರಿಸುತ್ತಾರೆ. ನಾಗೇಂದ್ರ ಅವರು ಹಾಗಲ್ಲ. ಯುವ ಆಟಗಾರರಿಗೆ ಇನ್ನೂ ಹೆಚ್ಚಿನ ತರಬೇತಿ ಬೇಕೆಂದಿನಿಸಿದಾಗ ಅವರನ್ನು ಉನ್ನತ ತರಬೇತಿಗಾಗಿ ಬೇರೆ ಅಕಾಡೆಮಿಗೆ ಕಳುಹಿಸುತ್ತಾರೆ. ಅಲ್ಲಿ ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗುತ್ತದೆ. ಹೆತ್ತವರಲ್ಲಿ ಅಂಥ ಸಾಮರ್ಥ್ಯ ಇಲ್ಲದಿದ್ದಾಗ ಪ್ರಾಯೋಜಕರನ್ನು ಹುಡುಕಿ ಉನ್ನತ ತರಬೇತಿ ಪಡೆಯಲು ನೆರವಾಗುತ್ತಾರೆ.

ವ್ಯಕ್ತಿತ್ವ ವಿಕಸನ: ನಾಗೇಂದ್ರ ಪಂಡಿತ್‌ ಕ್ರಿಕೆಟ್‌ ಅಕಾಡೆಮಿ ಮಕ್ಕಳಿಗೆ ಕೇವಲ ಕ್ರಿಕೆಟ್‌ ಹೇಳಿಕೊಟ್ಟು ಮನೆಗೆ ಕಳುಹಿಸುವುದಿಲ್ಲ. ಒಬ್ಬ ವ್ಯಕ್ತಿ ಉತ್ತಮ ಕ್ರಿಕೆಟಿಗನಾಗುವುದರ ಜೊತೆಯಲ್ಲಿ ಉತ್ತಮ ವ್ಯಕ್ತಿಯಾಗಿಯೂ ರೂಪುಗೊಳ್ಳಬೇಕು ಎನ್ನುತ್ತಾರೆ ನಾಗೇಂದ್ರ ಪಂಡಿತ್‌. ಈ ಕಾರಣಕ್ಕಾಗಿ ಮಕ್ಕಳು ಮುಕ್ತವಾಗಿ ಮಾತನಾಡಬೇಕು. ಬದುಕಿನ ಆದರ್ಶಗಳನ್ನು ಚಿಕ್ಕಂದಿನಲ್ಲಿಯೇ ಮೈಗೂಡಿಸಿಕೊಳ್ಳಬೇಕು. ಹಿರಿಯರನ್ನು ಗೌರವಿಸುವ ರೀತಿ, ಹಿರಿಯ ಆಟಗಾರರಿಗೆ ಗೌರವ ನೀಡುವುದು, ಸಮಯ ಪ್ರಜ್ಞೆ, ಆಟದ ಜೊತೆಯಲ್ಲಿ ಓದಿನ ಕಡೆಗೆ ಗಮನಹರಿಸುವುದು ಮೊದಲಾದ ಸಂಗತಿಗಳ ಕಡೆಗೆ ಇಲ್ಲಿ ಗಮನ ಹರಿಸಲಾಗುತ್ತದೆ. ಈ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಮಕ್ಕಳು ಚೂಯಿಂಗ್‌ ಗಮ್‌ ಬಳಸುವಂತಿಲ್ಲ. ಮೊಬೈಲ್‌ ಬಳಕೆ ಇಲ್ಲ. ಸಮಸ್ಯೆಗಳು, ಸಂಶಯಗಳನ್ನು ಬರೆದಿಟ್ಟುಕೊಳ್ಳಬೇಕು, ಮರುದಿನ ಬಂದು ಆ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು.

“ಸಾಗರದಲ್ಲಿ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸಿರುವ ಬಗ್ಗೆ ತೃಪ್ತಿಇದೆ. 85 ವರ್ಷ ಪ್ರಾಯದ ಅಮ್ಮ ಶಾರದಾ ಕೆ. ಪಂಡಿತ್‌ ಇಲ್ಲೇ ಇದ್ದು ನೋಡಿಕೊಳ್ಳುತ್ತಿದ್ದೇನೆ. ಪತ್ನಿ ಸವಿತಾ ಪಂಡಿತ್‌ ಹಾಗೂ ಇಬ್ಬರು ಹೆಣ್ಣು ಮಕ್ಕಳ ಪ್ರೋತ್ಸಾಹವಿದೆ. ಹಿರಿಯ ಮಗಳು ಸ್ವಾತಿ ಸ್ಕಿನ್‌ ಕೇರ್‌ & ಡಯಟೀಷಿಯನ್‌. ಇವಳ ಪತಿ ಸಂದೀಪ್‌ ಪೈ ಟಿಸಿಎಸ್‌ನಲ್ಲಿ ಎಂಜಿನಿಯರ್‌. ಕಿರಿಯ ಮಗಳು ಸಾದ್ವಿ ಡೆಂಟಿಸ್ಟ್‌. ಊರುವರು ಗೌರವ ನೀಡುತ್ತಿದ್ದಾರೆ. ನಾಳೆಯ ದಿನ ಇಲ್ಲಿ ಕಲಿತ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಉನ್ನತ ಸ್ಥಾನ ತಲುಪಿದೆ ಅದೇ ಸಂಭ್ರಮ, ನೆಮ್ಮದಿ,” ಎನ್ನುತ್ತಾರೆ ನಾಗೇಂದ್ರ ಪಂಡಿತ್‌.

Related Articles