Thursday, October 10, 2024

ವಿಶ್ವ ಬಾಡಿ ಬಿಲ್ಡಿಂಗ್‌: 4 ಚಿನ್ನ ಗೆದ್ದ ಮಂಗಳೂರಿನ ಶೋಧನ್‌ ರೈ

Sportsmail Desk:  ನ್ಯೂಜಿಲೆಂಡ್‌ನ ಅಕ್ಲೆಂಡ್‌ನಲ್ಲಿ ನಡೆದ INBA ನ್ಯಾಚುರಲ್‌ ಬಾಡಿಬಿಲ್ಡಿಂಗ್‌ ವಿಶ್ವ ಚಾಂಪಿಯನ್‌ಷಿಪ್‌-2024ರಲ್ಲಿ ಮಂಗಳೂರಿನ ಶೋಧನ್‌ ರೈ ನಾಲ್ಕು ಚಿನ್ನ ಹಾಗೂ 1 ಬೆಳ್ಳಿ ಪದಕಗಳೊಂದಿಗೆ ಸಮಗ್ರ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ (ಬೆಳ್ಳಿ) ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. Mangalorean Shodhan Rai won 4 Gold medals at INBA natural Bodybuilding world Championship Auckland New Zealand.

2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿರುವ 43 ವರ್ಷದ ಶೋಧನ್‌ ರೈ, 1997ರಿಂದಲೂ ಬಾಡಿ ಬಿಲ್ಡಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ 27 ವರ್ಷಗಳಿಂದ ಬಾಡಿ ಬಿಲ್ಡಿಂಗ್‌ನಲ್ಲಿ ಸ್ಪರ್ಧಿಸುತ್ತಿರುವ ಶೋಧನ್‌ ರೈ, 23 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಒಟ್ಟು 15 ಚಿನ್ನದ ಪದಕ ಹಾಗೂ 2 ಬೆಳ್ಳಿಯ ಪದಕಗಳನ್ನು ಗೆದ್ದಿರುತ್ತಾರೆ.

ಅಕ್ಲೆಂಡ್‌ನಲ್ಲಿ ಆಗಸ್ಟ್‌ 16, 17 ಮತ್ತು 18 ರಂದು ಈ ಚಾಂಪಿಯನ್‌ಷಿಪ್‌ ನಡೆದಿತ್ತು. ಶೋಧನ್‌ ರೈ ಈ ಸಾಧನೆಯ ಮೂಲಕ ನವೆಂಬರ್‌ ತಿಂಗಳಲ್ಲಿ ಅಮೆರಿಕದ ಲಾಸ್‌ ವೇಗಸ್‌ನಲ್ಲಿ ನಡೆಯಲಿರುವ ನ್ಯಾಚುರಲ್‌ ಒಲಂಪಿಯಾ 2024ರಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.

ತಂದೆಯಂತೆ ಮಗ: ಶೋಧನ್‌ ರೈ ಅವರ ತಂದೆ ಜಯಪ್ರಕಾಶ್‌ ಎನ್‌, ರೈ J N Rai ವಿಜಯ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದು ಈ ರಾಜ್ಯ ಕಂಡ ಶ್ರೇಷ್ಠ ದೇಹದಾರ್ಢ್ಯ ಪಟುಗಳಲ್ಲಿ ಒಬ್ಬರು. ಹಲವರಾರು ಪ್ರಶಶ್ತಿಗಳನ್ನು ಗೆದ್ದಿರುವ ಜೆ.ಎನ್‌. ಮಗ ಶೋಧನ್‌ಗೆ ಚಿಕ್ಕಂದಿನಲ್ಲೇ ಈ ಕ್ರೀಡೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದರು. ಇದರಿಂದಾಗಿ ಚಿಕ್ಕ ಪ್ರಾಯದಲ್ಲಿ ಶೋಧನ್‌ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಚಾಂಪಿಯನ್‌ ಎನಿಸಿದರು.

ಅರ್ಜುನ ಪ್ರಶಸ್ತಿ ಗೌರವ ಅಗತ್ಯ: ಬಾಡಿ ಬಿಲ್ಡಿಂಗ್‌ನಲ್ಲಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಗೆದ್ದು ಸಾಧನೆ ಮಾಡಿರುವ ವಿಶ್ವ ಚಾಂಪಿಯನ್‌ ಶೋಧನ್‌ ರೈಗೆ 2013ರಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಕೇಂದ್ರ ಸರಕಾರದಿಂದ ಮತ್ತು ರಾಜ್ಯ ಸರಕಾರದಿಂದ ಇದುವರೆಗೂ ಯಾವುದೇ ರೀತಿಯ ಗೌರವ ದಕ್ಕಲಿಲ್ಲ. ದೇಹದಾರ್ಢ್ಯ ಪಟುಗಳಿಗೆ ಅರ್ಜುನ ಮತ್ತು ಪದ್ಮ ಪ್ರಶಸ್ತಿ ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಶೋಧನ್‌ ರೈ ಅರ್ಜುನ ಅಥವಾ ಪದ್ಮಶ್ರೀ ಪ್ರಶಸ್ತಿಗೆ ಅರ್ಹರು. WADA ದಿಂದ ಸದಾ ಪರೀಕ್ಷೆಗೊಳಪಡುತ್ತಿರುವ International Bodybuilding Association ನಡೆಸುವ ಇಂಥ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿ ಸಾಧನೆ ಮಾಡಿ ಪದಕ ಗೆಲ್ಲುವುದು ಒಂದು ಐತಿಹಾಸಿಕ ಸಾಧನೆ.

“ಇದುವರೆಗೂ ದೇಶಕ್ಕಾಗಿ ಹಲವಾರು ಪದಕಗಳನ್ನು ಗೆದ್ದಿರುವೆ. ಬಾಡಿ ಬಿಲ್ಡಿಂಗ್‌ನಲ್ಲಿ ದೇಹದ ದೂಕವನ್ನು ಕಾಯ್ದುಕೊಳ್ಳುವುದು ಮುಖ್ಯ. ಇಷ್ಟು ಸಾಧನೆ ಮಾಡಿದರೂ ಸರಕಾರ ಈ ಕ್ರೀಡೆಗೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಅನೇಕ ಬಾಡಿಬಿಲ್ಡರ್‌ಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಕಳೆದ 27 ವರ್ಷಗಳಿಂದ ಈ ಕ್ರೀಡೆಯಲ್ಲಿ ತೋಡಗಿಸಿಕೊಂಡು ನಿರಂತರ ಸಾಧನೆ ಮಾಡುತ್ತಿರುವೆ ನನ್ನ ಸಾಧನೆಯನ್ನು ಈ ಬಾರಿಯಾದರೂ ಸರಕಾರ ಗುರುತಿಸುತ್ತದೆ ಎಂಬ ನಂಬಿಕೆ ಇದೆ,” ಎಂದು ಶೋಧನ್‌ ರೈ ಅವರು ಆಕ್ಲೆಂಡ್‌ನಿಂದ www.sportsmail.net ಗೆ ತಿಳಿಸಿದ್ದಾರೆ.

Related Articles