Saturday, October 12, 2024

ಬೈಕ್‌ನಲ್ಲಿ 17,982 ಅಡಿ ಎತ್ತರದ ಖಾರ್ದುಂಗ್ಲಾ ಪಾಸ್‌ ತಲುಪಿದ ಕುಂದಾಪುರದ ವಿಲ್ಮಾ ಕ್ರಾಸ್ಟೋ ಕರ್ವಾಲೋ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕರ್ನಾಟಕ ವಾಲಿಬಾಲ್‌ ತಂಡದ ಮಾಜಿ ಆಟಗಾರ್ತಿ, ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನ ಹಳೆ ವಿದ್ಯಾರ್ಥಿ, ಬೆಂಗಳೂರಿನ ಪ್ರಸಿದ್ಧ ಕಾರ್ಪೊರೇಟ್‌ ಟ್ರೈನರ್‌ 54 ವರ್ಷದ ವಿಲ್ಮಾ ಕ್ರಾಸ್ಟೋ ಕರ್ವಾಲೋ ಬೈಕ್‌ನಲ್ಲಿ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ, ಸಮುದ್ರ ಮಟ್ಟದಿಂದ 17,982 ಅಡಿ ಎತ್ತದಲ್ಲಿರುವ ಖಾರ್ದುಂಗ್ಲಾ ಪಾಸ್‌ ತಲುಪಿ ಸಾಧನೆ ಮಾಡಿದ್ದಾರೆ.

54 ವರ್ಷದ ಮಹಿಳೆಯೊಬ್ಬರು ಬೈಕ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ. ಇದುವರೆಗೂ 51 ಮತ್ತು 53 ವರ್ಷ ಮಹಿಳೆಯರು ಈ ಸಾಧನೆ ಮಾಡಿರುವುದನ್ನು ವರದಿಗಳು ಹೇಳುತ್ತಿವೆ. ಆದರೆ ವಿಲ್ಮಾ ಅವರು ಬೈಕ್‌ನಲ್ಲಿ ಖಾರ್‌ದುಂಗ್ಲಾ ತಲುಪಿದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು ತಲುಪಿದ ನಂತರ sportsmail ಜೊತೆ ಮಾತನಾಡಿದ ವಿಲ್ಮಾ ಕ್ರಾಸ್ಟೋ ತಮ್ಮ ಸಾಹಸ ಬದುಕಿನ ಬಗ್ಗೆ ಮಾತನಾಡಿದ್ದಾರೆ.

ಎರಡನೇ ಪ್ರಯತ್ನದಲ್ಲಿ ಯಶಸ್ಸು: ವಿಲ್ಮಾ ಅವರು ಕಳೆದ ವರ್ಷ ಕೂಡ ಈ ಸಾಹಸ ಯಾತ್ರೆಯಲ್ಲಿ ಯಶಸ್ಸು ಕಾಣುವ ಪ್ರಯತ್ನ. ಆದರೆ ಬೈಕ್‌ನಲ್ಲಿ ಎಡವಿದ ಕಾರಣ ಯಾನವನ್ನು ಅರ್ಧದಲ್ಲೇ ನಿಲ್ಲಿಸಿ ಹಿಂದಿರುಗಿದ್ದರು, “ಕಳೆದ ವರ್ಷ ಪ್ರಯತ್ನ ಮಾಡಿದ್ದೆ. ಆದರೆ ಬೈಕ್‌ನಿಂದ ಬಿದ್ದ ಕಾರಣ ಪ್ರಯಾಣವನ್ನು ಮುಂದುವರಿಸಲಿಲ್ಲ. ಚಿಕ್ಕ ವಯಸ್ಸಾಗಿದ್ದರೆ ಬೇಗನೇ ಚೇತರಿಸಿಕೊಳ್ಳಬಹುದು, ಆದರೆ 50 ಮೀರಿದ ಕಾರಣ ಎಚ್ಚರಿಕೆ ಅಗತ್ಯ. ಈ ಬಾರಿ ಮಗಳೊಂದಿಗೆ ಪ್ರಯಾಣ ಬೆಳೆಸಿದೆ. ಮಗ ಮತ್ತು ಮಗಳು ನನ್ನ ಯಶಸ್ಸಿನ ಹಾದಿಯಲ್ಲಿ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ,” ಎಂದರು.

ಕುಂದಾಪುರದಲ್ಲಿ ರಾಜಕೀಯವಾಗಿ ಪ್ರಭಾವಿಗಳಾಗಿದ್ದ ದಿ. ಎಡ್ವಿನ್‌ ಕ್ರಾಸ್ಟೋ ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೋ ಅವರ ಪುತ್ರಿಯಾಗಿರುವ ವಿಲ್ಮಾ ಅವರ ಪುತ್ರಿ ಚರಿಶ್‌ ಕರ್ವಾಲೋ ತಾಯಿಯ ಸಾಧನೆಗೆ ನೆರವಾಗಿದ್ದಾರೆ. ಮಗ ನೀಥನ್‌ ಕರ್ವಾಲೋ ಎಂಜಿನಿಯರ್‌ ಆಗಿದ್ದಾರೆ.

ಸ್ಫೂರ್ತಿಯಾದ ಗುಲ್‌ ಪನಾಗ್‌: ಬಾಲಿವುಡ್‌ ನಟಿ ಗುಲ್‌ ಪನಾಗ್‌ ಅವರ ಸಾಹಸ ವಿಲ್ಮಾ ಅವರನ್ನು ಖಾರ್‌ದುಂಗ್ಲಾ ಸಾಹಸಕ್ಕೆ ಕೈಹಾಕುವಂತೆ ಮಾಡಿತು. “ಗುಲ್‌ಪನಾಗ್‌ 32ನೇ ವಯಸ್ಸಿನಲ್ಲಿ ರೋಥನ್‌ ಪಾಸ್‌ ತಲುಪಿರುವುದು ಸುದ್ದಿಯಾಗಿತ್ತು. ಆ ನಂತರವೂ ಅವರು ಹಲವಾರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನ ಸೆಳೆದರು. ನನಗಿಂತ ಕಡಿಮೆ ವಯಸ್ಸಿನವರು ಅದ್ಭುತ ಸಾಧನೆ ಮಾಡುತ್ತಿರುವಾಗ ನಾನೇಕೆ ಮಾಡಬಾರದು ಎಂದು ಯೋಚಿಸಿದೆ. ಅದೇ ರೀತಿ ಬಹಳ ಸಮಯ ಆ ಬಗ್ಗೆ ಅಧ್ಯಯನ ನಡೆಸಿದೆ. ಅದೇ ರೀತಿ ಕಾರ್ಯಪ್ರವೃತ್ತಳಾದೆ,” ಎಂದು ವಿಲ್ಮಾ ಕ್ರಾಸ್ಟೋ ಹೇಳಿದರು.

ಮಗನಿಗೆ ಬೈಕ್‌ ಖರೀದಿಸಲು ಹೋದಾಗ: ಮಗ ನೀಥನ್‌ಗೆ ಬೈಕ್‌ ಖರೀದಿಸಲು ಹೋದಾಗ ಅಲ್ಲಿ ಟೆಸ್ಟ್‌ ರೈಡ್‌ ಮಾಡಬೇಕಾಗಿತ್ತು. ನೀಥನ್‌ಗೆ ಇನ್ನೂ ಡ್ರೈವಿಂಗ್‌ ಲೈಸನ್ಸ್‌ ಮಾಡಿಸದ ಕಾರಣ ಬಜಾಜ್‌ ಶೋ ರೂಮ್‌ನಲ್ಲಿ ಟೆಸ್ಟ್‌ ರೈಡ್‌ ಮಾಡಲು ಅವಕಾಶ ನೀಡಲಿಲ್ಲ. ಆಗ ವಿಲ್ಮಾ ಅವರೇ ಬೈಕ್‌ ಚಲಾಯಿಸಿದರು. ಅದುವರೆಗೂ ಮನೆಯಲ್ಲಿದ್ದ ಯಜಡಿ ಬೈಕನ್ನು ಕಾಲೇಜು ದಿನಗಳಲ್ಲಿ ಚಲಾಯಿಸುತ್ತಿದ್ದರು. ಈಗ ಅವರೇ ಕುದ್ದಾಗಿ ಬೈಕ್‌ ಸ್ಟಾರ್ಟ್‌ ಮಾಡಿದ್ದು, ಹೊಸ ಆತ್ಮವಿಶ್ವಾಸ ಮೂಡಿಸಿತು. ಮತ್ತೆ ಹಿಂತಿರುಗಿ ನೋಡದೆ 500ಸಿಸಿ ಬುಲೆಟ್‌ ನಲ್ಲಿ ಸವಾರಿ ಮಾಡುವವರೆಗೂ ಬೈಕ್‌ ರೈಡಿಂಗ್‌ನಲ್ಲಿ ಪಳಗಿದರು. ತಾಯಿಯಂತೆ ಮಗಳು ಚರೀಶ್‌ ಕರ್ವಾಲೋ ಕೂಡ ಬೈಕ್‌ ರೈಡರ್‌.

7 ದಿನ, 6 ರಾತ್ರಿ: ವಿಲ್ಮಾ ಅವರು ಒಟ್ಟು 900 ಕಿಮೀ ಪ್ರಯಾಣ ಮಾಡಿರುತ್ತಾರೆ. ಆದರೆ ಸಮುದ್ರಮಟ್ಟದಿಂದ 17,982 ಅಡಿ ಎತ್ತದರ ತಲುಪಿದ್ದು ವಿಶೇಷ, ಅಲ್ಲಿ ಕೇವಲ 15 ನಿಮಿಷಗಳ ಕಾಲ ನಿಲ್ಲಲು ಅವಕಾಶ ನೀಡುತ್ತಾರೆ. ಗಡಿ ಭದ್ರತಾ ಪಡೆಯವರು ಹೆಚ್ಚು ಕಾಲ ನಿಲ್ಲಲು ಬಿಡುವುದಿಲ್ಲ. ಉಳಿದಂತೆ ಆಫ್‌ ರೋಡ್‌ ವಾಹನಗಳಲ್ಲಿ ಬರುವವರೂ ಇರುತ್ತಾರೆ. “ಖಾರ್‌ದುಂಗ್ಲಾ ತುದಿಯಲ್ಲಿ ಉಸಿರಾಟಕ್ಕೆ ತೊಂದರೆಯಾಗುತ್ತಿತ್ತು. ಇದರಿಂದಾಗಿ ಅಲ್ಲಿ ಹೆಚ್ಚು ಕಾಲ ನಿಲ್ಲಲು ಅವಕಾಶ ಕೊಡುತ್ತಿರಲಿಲ್ಲ,” ಎಂದು ವಿಲ್ಮಾ ಕ್ರಾಸ್ಟೋ ಹೇಳಿದರು.

ವಾಲಿಬಾಲ್‌ ಅಂಗಣದಿಂದ ಕಾರ್ಪೊರೇಟ್‌ ಅಂಗಳಕ್ಕೆ:  ಕುಂದಾಪುರದ ಭಮಡಾರ್ಕಾರ್ಸ್‌ ಕಾಲೇಜಿನಲ್ಲಿ ಓದುತ್ತಿರುವಾಗ ವಿಲ್ಮಾ ಅವರು ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಇದರಿಂದಾಗಿ ಫಿಟ್ನೆಸ್‌ ಬಗ್ಗೆ ಅಪಾರ ಅರಿವಿತ್ತು. ಬೆಂಗಳೂರು ತಲುಪಿದ ನಂತರ ಫಿಟ್ನೆಸ್‌ ಕ್ಷೇತ್ರವನ್ನೇ ವೃತ್ತಿಯಾಗಿಸಿಕೊಂಡರು. “ವಾಲಿಬಾಲ್‌ ಆಟಗಾರ್ತಿಯಾದ ಕಾರಣ ಬೆಂಗಳೂರಿಗೆ ಹೋದ ನಂತರ ಕಾರ್ಪೊರೇಟ್‌ ಟ್ರೈನರ್‌ ಆಗಿ ಕೆಲಸ ಮಾಡಿದೆ. 17 ವರ್ಷಗಳ ಕಾಲ ಬೆಂಗಳೂರಿನ ಅನೇಕ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸಹಸ್ರಾರು ಉದ್ಯೋಗಿಗಳಿಗೆ ಕಾರ್ಪೊರೇಟ್‌ ಬದುಕು ಮತ್ತು ಫಿಟ್ನೆಸ್‌ ಬಗ್ಗೆ ತರಬೇತಿ ನೀಡಿದೆ. 2016ರಲ್ಲಿ ವೆಚ್ಚ ನಿಯಂತ್ರಣದ ಕಾರಣ ನೀಡಿ ಕೆಲವು ಕಂಪೆನಿಗಳು ಗುತ್ತಿಗೆಯನ್ನು ನಿರಾಕರಿಸಿದವು. ಇದರಿಂದಾಗಿ ಫ್ರೀಲಾನ್ಸ್‌ರ್‌ ಆಗಿ ಶಾಲಾ ಕಾಲೇಜು, ಸಿಎ ವಿದ್ಯಾರ್ಥಿಗಳು ಹಾಗೂ ಕಾರ್ಪೊರೇಟ್‌ ವಲಯ ಸೇರಿದ ಹೊಸ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿರುವೆ, ಇದೆಲ್ಲ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸಾಧ್ಯವಾಯಿತು,” ಎನ್ನುತ್ತಾರೆ ವಿಲ್ಮಾ.

ವಿಲ್ಮಾ ಅವರ ಪತಿ ಲೆಸ್ಲಿ ಕರ್ವಾಲೋ ಸಿನಿಮಾ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಾಹಸ ಪ್ರವೃತ್ತಿ ಹೆಣ್ಣುಮಕ್ಕಳಿಗೆ ಅಗತ್ಯ: ಬದುಕಿನಲ್ಲಿ ಇಳಿ ವಯಸ್ಸು ತಲುಪಿದ ನಂತರ ಬದುಕಿನಲ್ಲಿ ಏನೂ ಸಾಧನೆ ಮಾಡಲಾಗಲಿಲ್ಲ, ನಮ್ಮ ಬದುಕು ಬರೇ ಮನೆ, ಮಕ್ಕಳು ಇದಕ್ಕೇ ಮೀಸಲಾಯಿತು ಎಂಬ ನೋವು ಅನೇಕ ಮಹಿಳೆಯರನ್ನು ಕಾಡುವುದಿದೆ, ಪುರುಷರು ಕೂಡ ಇದರಿಂದ ಹೊರತಾಗಿಲ್ಲ. “ಒಂದು ವೇಳೆ ಕಾರ್ಪೊರೇಟ್‌ ಟ್ರೈನರ್‌ ಆಗದೇ ಇರುತ್ತಿದ್ದರೆ ನಾಗರಿಕ ಸೇವೆಯಲ್ಲಿ ತೊಡಗಿಕೊಳ್ಳುವ ಗುರಿ ಹೊಂದಿದ್ದೆ. ಆದರೆ ಈ ಕೆಲಸ ಹೆಚ್ಚು ಖುಷಿ ಕೊಟ್ಟಿತು ಮುಂದುವರೆದೆ. ಈಜಿನಲ್ಲಿ ಪಳಗಿರದಿದ್ದರೂ,  ಧೈರ್ಯ ಮಾಡಿ ಸ್ಕ್ಯೂಬಾ ಡೈವಿಂಗ್‌ನಲ್ಲಿ ತೊಡಗಿಕೊಂಡೆ. ಮನೆ ಕೆಲಸ, ಮಕ್ಕಳು, ದುಡಿಮೆ ಇವುಗಳಲ್ಲೇ ಕಾಲ ಕಳೆದ ನಾವು ವಯಸ್ಸಾದ ನಂತರ ಬದುಕು ಹೀಗೆಯೇ ಸವೆದು ಹೋಯಿತು ಎಂಬ ಕೊರಗು ನಮ್ಮನ್ನು ಕಾಡಬಾರದು, ಈ ಕಾರಣಕ್ಕಾಗಿ ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಂಡೆ,” ಎನ್ನುತ್ತಾರೆ ವಿಲ್ಮಾ.

“ನಾವು ಹಳ್ಳಿಯಿಂದ ಬಂದವರು, ನಮ್ಮಲ್ಲಿರುವ ಇರುವ ಸಾಹಸ ಪ್ರವೃತ್ತಿ ನಗರದ ಜನರಲ್ಲಿ ಇರುವುದು ಕಡಿಮೆ, ನಮ್ಮ ಬದುಕಿನ ಯಾವುದಾದರೂ ಉತ್ತಮ ಸಾಧನೆ ಬೇರೆಯವರ ಬದುಕಿಗೆ ಸ್ಫೂರ್ತಿಯಾದರೆ ನಮ್ಮ ಬದುಕು ಸಾರ್ಥಕವೆನಿಸುತ್ತದೆ,” ಎನ್ನುತ್ತಾರೆ ಬೆಂಗಳೂರಿನ ಕುಕ್‌ಟೌನ್‌ ನಿವಾಸಿಯಾಗಿರುವ ವಿಲ್ಮಾ ಕ್ರಾಸ್ಟೋ.

 

Related Articles