ಕೋಲ್ಕೊತಾ: ಎಫ್‌ಸಿ ಗೋವಾ ವಿರುದ್ಧ 2-2 ಗೋಲುಗಳ ಅಂತರದಲ್ಲಿ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ ಐತಿಹಾಸಿಕ ಡುರಾಂಡ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ನಾಕೌಟ್ ಹಂತ ತಲುಪಿದೆ.
ನಾಯಕ ಸುನಿಲ್ ಛೆಟ್ರಿ ಹಾಗೂ ಶಿವಶಕ್ತಿ ನಾರಾಯಣನ್ ತಂಡದ ಪರ ಗಳಿಸಿದ ಗೋಲಿನಿಂದ ಬೆಂಗಳೂತು ತಂಡ ಮೇಲುಗೈ ಸಾಧಿಸಿತ್ತು, ಆದರೆ ದ್ವಿತಿಯಾರ್ಧಲ್ಲಿ ಗೋವಾದ ಪರ ಫ್ರಾಂಗ್ಕಿ ಬೌಮ್ ಹಾಗೂ ಲೆಸ್ಲೆ ರೆಬೆಲ್ಲೋ ಗಳಿಸಿದ ಗೋಲಿನಿಂದ ಪಂದ್ಯ ಸಮಬಲಗೊಂಡಿತು.
ಜೆಮ್ಷೆಡ್ಪುರ ವಿರುದ್ಧ (2-1) ಹಾಗೂ ಇಂಡಿಯನ್ ಏರ್ ಫೋರ್ಸ್ ವಿರುದ್ಧ (4-0) ಗೋಲುಗಳ ಅಂತರದಲ್ಲಿ ಜಯ ಗಳಿಸಿದ್ದ ಬೆಂಗಳೂರು ತಂಡಕ್ಕೆ ಗೋವಾ ವಿರುದ್ಧ ಕೇವಲ ಡ್ರಾದ ಅಗತ್ಯವಿದ್ದಿತ್ತು.
24ನೇ ನಿಮಿಷದಲ್ಲಿ ಬೆಂಗಳೂರು ತಂಡದ ನಾಯಕ ಸುನಿಲ್ ಛೆಟ್ರಿ ಫ್ರೀ ಕಿಕ್ ಮೂಲಕ ಗಳಿಸಿದ ಗೋಲು ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿತು. ನಂತರದ ನಿಮಿಷದಲ್ಲೇ ಶಿವಶಕ್ತಿ ತಂಡಕ್ಕೆ ಎರಡನೇ ಗೋಲು ತಂದಿತ್ತರು. ಇದರೊಂದಿಗೆ ಪ್ರಥಮಾರ್ಧದಲ್ಲಿ ಬೆಂಗಳೂರು 2-0 ಮುನ್ನಡೆ ಕಂಡಿತು.
ರೋಹಿತ್ ಕುಮಾರ್ ನೀಡಿದ ಪಾಸ್ ಮೂಲಕ ಫ್ರಾಂಗ್ಕಿ ಗಳಿಸಿದ ಗೋಲಿನಿಂದ ಗೋವಾ 2-1 ರಲ್ಲಿ ಹೋರಾಟ ಮುಂದುವರಿಸಿತು. ನಂತರ ಲೆಸ್ಲಿ ರೆಬೆಲ್ಲೋ ತಂಡದ ಪರ ಎರಡನೇ ಗೋಲು ಗಳಿಸುವುದರೊಂದಿಗೆ ಪಂದ್ಯ 2-2ರಲ್ಲಿ ಸಮಬಲಗೊಂಡಿತು. ಆಗಸ್ಟ್ 2ರಂದು ನಡೆಲಿರುವ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಗ್ರೂಪ್ ಎ ಅಗ್ರಸ್ಥಾನಿ ಮೊಹಮ್ಮದನ್ ಸ್ಪೋರ್ಟಿಂಗ್ ವಿರುದ್ಧ ಸೆಣಸಲಿದೆ.