Friday, October 4, 2024

ಪ್ರತೀಕ್ಷಾ ಜೊತೆ ಸಪ್ತಪದಿ ತುಳಿದ ಕ್ರಿಕೆಟಿಗ ನಿಹಾಲ್‌ ಉಳ್ಳಾಲ್‌

ಮಂಗಳೂರು:

ಕರ್ನಾಟಕದ ಕ್ರಿಕೆಟ್‌ ತಂಡದ ಭರವಸೆಯ ವಿಕೆಟ್‌ ಕೀಪರ್‌, ಕರಾವಳಿಯ ಜನಪ್ರಿಯ ಕ್ರಿಕೆಟಿಗ ನಿಹಾಲ್‌ ಉಳ್ಳಾಲ್‌ ಅವರು ಪ್ರತೀಕ್ಷಾ ಅವರೊಂದಿಗೆ ಶುಕ್ರವಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಬದುಕಿನ ಹೊಸ ಇನ್ನಿಂಗ್ಸ್‌ ಆರಂಭಿಸಿದರು.

ಇತ್ತೀಚಿಗೆ ಅಸ್ಸಾಂ ವಿರುದ್ಧದ ವಿಜಯ ಹಜಾರೆ ಟ್ರೋಫಿಯಲ್ಲಿ ಪ್ರಥಮದರ್ಜೆ ಲಿಸ್ಟ್‌ ಎ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ನಿಹಾಲ್‌ ಉಳ್ಳಾಲ್‌ ಹಾಗೂ ಪ್ರತೀಕ್ಷಾ ಅವರ ವಿವಾಹವು ಮಂಗಳೂರಿನ ದಿ ಪಾಪ್ಯುಲರ್‌ ಗ್ರ್ಯಾಂಡ್‌ಬೇನಲ್ಲಿ ನಡೆಯಿತು. ಕರ್ನಾಟಕ ಕ್ರಿಕೆಟ್‌ನ ಹಾಲಿ ಮತ್ತು ಮಾಜಿ ಆಟಗಾರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಉಳ್ಳಾಲ್‌ ದಂಪತಿಗೆ ಶುಭ ಹಾರೈಸಿದರು.

ಮಂಗಳೂರಿನ ಉಳ್ಳಾಲದ ಉಮೇಶ್‌ ವಿ. ಕೋಟ್ಯಾನ್‌ ಮತ್ತು ನಾಗವೇಣಿ ದಂಪತಿಯ ಹಿರಿಯ ಮಗನಾಗಿರುವ ನಿಹಾಲ್‌ ಉಳ್ಳಾಲ್‌, ಬೆಂಗಳೂರಿನ ವಕೀಲ ನಾರಾಯಣ ಪೆರ್ಡಾಲ್ಕರ್‌ ಮತ್ತು ಸತ್ಯವತಿ ದಂಪತಿಯ ಪುತ್ರಿ ಪ್ರತೀಕ್ಷಾ ಅವರೊಂದಿಗೆ ಸಪ್ತಪದಿ ತುಳಿದರು.

ಟೆನಿಸ್‌ ಬಾಲ್‌ ಕ್ರಿಕೆಟ್‌ ಮೂಲಕ ಕ್ರಿಕೆಟ್‌ ಅಂಗಣಕ್ಕೆ ಕಾಲಿಟ್ಟು ಮಂಗಳೂರಿನಲ್ಲಿ ಜನಪ್ರಿಯಗೊಂಡ ನಿಹಾಲ್‌ ಉಳ್ಳಾಲ್‌, ನಂತರ ಬೆಂಗಳೂರಿನಲ್ಲಿ ಲೀಗ್‌ ಹಂತದಲ್ಲಿ ಹಲವು ಪಂದ್ಯಗಳನ್ನಾಡಿ ರಾಜ್ಯ ಕ್ರಿಕೆಟ್‌ನ ಕದ ತಟ್ಟಿದರು. ಈ ಬಾರಿ ಕರ್ನಾಟಕ ಪ್ರೀಮಿಯರ್‌ ಲೀಗ್‌ ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್‌ ಪರ ಆಡಿದ್ದ ನಿಹಾಲ್‌, ಮಿಂಚಿನ ವಿಕೆಟ್‌ ಕೀಪಿಂಗ್‌ ಹಾಗೂ ಅಬ್ಬರದ ಬ್ಯಾಟಿಂಗ್‌ ಮೂಲಕ ರಾಜ್ಯದ ಕ್ರಿಕೆಟ್‌ ಅಭಿಮಾನಿಗಳ ಮನ ರಂಜಿಸಿದ್ದರು.

Related Articles