ಕ್ರಿಸ್ತುಜಯಂತಿ ವಿವಿಯಲ್ಲಿ ‘ಜಯಂತಿಯನ್ ಕಪ್ 2026ಕ್ಕೆ ಚಾಲನೆ
ಬೆಂಗಳೂರು: ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯವು ಪ್ರತಿಷ್ಠಿತ ‘ಜಯಂತಿಯನ್ ಕಪ್ 2026 – ಐದನೇ ಆವೃತ್ತಿ ರಾಷ್ಟ್ರೀಯ ಮಟ್ಟದ ಅಂತರ-ಸಂಸ್ಥೆಗಳ ಚಾಂಪಿಯನ್ಶಿಪ್ ಕ್ರೀಡಾಕೂಟಕ್ಕೆ ಸೆಪ್ಟೆಂಬರ್ 9ರಂದು ಚಾಲನೆ ನೀಡಲಾಯಿತು. ಕ್ರೀಡಾಕೂಟ ಸೆ. 11, 2026ರವರೆಗೆ ನಡೆಯಲಿದೆ. ಮೂರು ದಿನಗಳ ಈ ಕ್ರೀಡಾ ಸಂಭ್ರಮವು ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸಿ, ಕ್ರೀಡಾ ಮನೋಭಾವ, ತಂಡದ ಸಹಕಾರ, ಶಿಸ್ತು ಹಾಗೂ ಆರೋಗ್ಯಕರ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲಿದೆ. Kristu Jayanti University inaugurated the prestigious ‘Jayanthian Cup 2026 – Fifth Edition of National Level Inter-Institutional Championship Sports Tournament on September 9.
ಚಾಂಪಿಯನ್ಶಿಪ್ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 9, 2026ರಂದು ಬೆಳಿಗ್ಗೆ 9.00 ಗಂಟೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿ, ಸ್ಪರ್ಧಾಳುಗಳು ಹಾಗೂ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಫಾ. ಡಾ. ಆಗಸ್ಟಿನ್ ಜಾರ್ಜ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಕ್ರೀಡಾಕೂಟವನ್ನು ಕುರಿತು ಮಾತನಾಡಲಿದ್ದಾರೆ.
ಪ್ರಸ್ತುತ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ದಕ್ಷಿಣ ಭಾರತದ ಇತರ ಪ್ರದೇಶಗಳ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸುವ ಸುಮಾರು 150 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಯುವ ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವುದರ ಜೊತೆಗೆ, ವಿವಿಧ ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರ, ಸ್ನೇಹಭಾವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶವನ್ನೂ ಈ ಕ್ರೀಡಾಕೂಟ ಹೊಂದಿದೆ.
ಪುರುಷರು ಹಾಗೂ ಮಹಿಳೆಯರ ವಿಭಾಗಗಳಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಬ್ಯಾಸ್ಕೆಟ್ಬಾಲ್, ವಾಲಿಬಾಲ್, ಥ್ರೋಬಾಲ್, ಫುಟ್ಬಾಲ್, ಕಬಡ್ಡಿ, ಕರಾಟೆ, ಟೈಕ್ವಾಂಡೋ ಹಾಗೂ ಪೆಂಕಾಕ್ ಸಿಲಾಟ್ ಸೇರಿದಂತೆ ಹಲವು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಏರ್ಪೋರ್ಟ್ ರೋಡ್ ಕ್ಯಾಂಪಸ್ ಹಾಗೂ ಸೆಂಟ್ರಲ್ ಕ್ಯಾಂಪಸ್ಗಳಲ್ಲಿ ಚಾಂಪಿಯನ್ಶಿಪ್ ನಡೆಯಲಿದ್ದು, ಕ್ರೀಡಾಪಟುಗಳಿಗೆ ಗುಣಮಟ್ಟದ ಕ್ರೀಡಾ ಸೌಲಭ್ಯಗಳು ಮತ್ತು ಉತ್ಸಾಹಭರಿತ ಸ್ಪರ್ಧಾತ್ಮಕ ವಾತಾವರಣವನ್ನು ಒದಗಿಸಲಾಗುತ್ತದೆ.
ಹಲವಾರು ವರ್ಷಗಳಿಂದ ‘ಜಯಂತಿಯನ್ ಕಪ್’ವಿಶ್ವವಿದ್ಯಾಲಯದ ಪ್ರಮುಖ ಕ್ರೀಡಾ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿಭಾವಂತ ಕ್ರೀಡಾಪಟುಗಳನ್ನು ಆಕರ್ಷಿಸುವ ಮೂಲಕ ಸ್ಪರ್ಧಾತ್ಮಕ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಮಹತ್ವದ ವೇದಿಕೆಯಾಗಿ ರೂಪುಗೊಂಡಿದೆ. ಇದರ ಐದನೇ ಆವೃತ್ತಿಯು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡೆ ಹಾಗೂ ದೈಹಿಕ-ಮಾನಸಿಕ ಸದೃಢತೆವನ್ನು ಸಮನ್ವಯಗೊಳಿಸುವ ಮೂಲಕ ಸಮಗ್ರ ಶಿಕ್ಷಣದತ್ತ ವಿಶ್ವವಿದ್ಯಾಲಯದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಪ್ರಸ್ತುತ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶಿಸ್ತು, ಸ್ಥೈರ್ಯ, ನಾಯಕತ್ವ, ತಂಡದ ಮನೋಭಾವ ಮತ್ತು ಸಹಕಾರದಂತಹ ಮೌಲ್ಯಗಳನ್ನು ಪ್ರದರ್ಶಿಸುವುದರ ಜೊತೆಗೆ, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಸ್ನೇಹ ಮತ್ತು ಸದೃಢ ಸಂಬಂಧಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶ ದೊರೆಯಲಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೂರಾರು ಕ್ರೀಡಾಪಟುಗಳು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಸಮಾವೇಶಗೊಳ್ಳುವ ನಿರೀಕ್ಷೆಯಿದ್ದು, ‘ಜಯಂತಿಯನ್ ಕಪ್ 2026’ ಕ್ರೀಡಾ ಸ್ಫೂರ್ತಿ, ದೃಢಸಂಕಲ್ಪ ಮತ್ತು ಶ್ರೇಷ್ಠತೆಯ ಅದ್ದೂರಿ ಸಂಭ್ರಮವಾಗಿ ಮೂಡಿಬರಲಿದೆ. ಇದರ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಕ್ರೀಡಾ ಕ್ಷೇತ್ರದ ಉತ್ತೇಜನಕ್ಕೆ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ನೀಡುತ್ತಿರುವ ಕೊಡುಗೆಯನ್ನು ಮತ್ತೊಮ್ಮೆ ಸಾರಲಿದೆ.

