Friday, December 13, 2024

ಕ್ರೀಡಾ ಸಾಧಕರ ಅಮ್ಮಂದಿರಿಗೆ ಜೀಜಾ ಮಾತಾ ಗೌರವ ಪ್ರಶಸ್ತಿ

ಬೆಂಗಳೂರು:  ಕ್ರೀಡೆಯಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳನ್ನು ಸನ್ಮಾನಿಸುವುದು ಸಾಮಾನ್ಯ. ಆದರೆ ಕ್ರೀಡಾಪಟುವಿನ ಯಶಸ್ಸಿನ ಹಿಂದೆ ತಮ್ಮ ಬದುಕನ್ನು ಮುಡುಪಾಗಿಟ್ಟ ತಾಯಂದಿರನ್ನು ಸನ್ಮಾನಿಸುವುದು ವಿರಳ. ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಸಾಧಕರ ಅಮ್ಮಂದಿರನ್ನು ಗೌರವಿಸುವ ಸ್ಮರಣೀಯ ಕಾರ್ಯಕ್ರಮ ಕ್ರೀಡಾ ಭಾರತಿ (KreedaBharathi) ಮೂಲಕ ಭಾನುವಾರ ರಾಜಭವನದಲ್ಲಿ ನಡೆಯಿತು.

ಜೀಜಾ ಮಾತಾ ಪುರಸ್ಕಾರ (JeejaMaathaAward) ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರ ತಾಯಂದಿರನ್ನು ಪುರಸ್ಕರಿಸಲಾಯಿತು. ಈ ಸಂದರ್ಬಧಲ್ಲಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, “ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಎಲ್ಲೆಡೆ ಗೌರವಿಸುತ್ತಾರೆ, ಆದರೆ ಅವರ ತಾಯಂದಿರನ್ನು ಗೌರವಿಸುವ ಪರಿಪಾಠ ಕಂಡುಬಂದಿಲ್ಲ. ಕ್ರೀಡಾ ಭಾರತಿ ಆ ಘನ ಕಾರ್ಯವನ್ನು ಮಾಡಿದೆ. ಜೀಜಾಮಾತ ಪುರಸ್ಕಾರ ನೀಡುವ ಮೂಲಕ ಗೌರವ ನೀಡಿದೆ. ಇದು ಸ್ತುತ್ಯರ್ಹ ಕಾರ್ಯ,” ಎಂದು ಹೇಳಿದರು.

“ಭಾರತೀಯ ಕ್ರೀಡಾ ಇತಿಹಾಸದಲ್ಲಿ ಕರ್ನಾಟಕದ ಕೊಡುಗೆ ಅಪಾರವಾದುದು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳು ರಾಜ್ಯಕ್ಕೆ, ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಇನ್ನು ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದಂತಾಗುತ್ತದೆ,” ಎಂದರು.

ಕ್ರೀಡಾ ಭಾರತೀಯ ಅಖಿಲ ಭಾರತ ಕಾರ್ಯಾಧ್ಯಕ್ಷ ಮಧ್ಯಪ್ರದೇಶದ ರತ್ಲಾಂ ಕ್ಷೇತ್ರದ ಶಾಸಕ ಚೈತನ್ಯ ಕಶ್ಯಪ್‌ ಮಾತನಾಡಿ, ಕ್ರೀಡಾ ಭಾರತೀಯು ರಾಷ್ಟ್ರೀಯ ಸಂಘಟನೆಯಾಗಿದ್ದು, ಕಳೆದ ಮೂವತ್ತು ವರ್ಷಗಳಿಂದ ದೇಶಾದ್ಯಂತ ಕ್ರೀಡಾಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕ್ರೀಡೆಯಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ, ಕ್ರೀಡಾ ಸಾಧಕರ ತಾಯಂದಿರನ್ನು ಗೌರವಿಸುವ ದೃಷ್ಟಿಯಿಂದ ಕ್ರೀಡಾಭಾರತಿ (KreedaBharathi) ಹಲವು ವರ್ಷಗಳಿಂದ “ಜೀಜಾ ಮಾತ” ಪ್ರಶಸ್ತಿಯನ್ನು ನೀಡುತ್ತಿದೆ.ತರಬೇತುದಾರರಿಗೆ “ವಿದ್ಯಾರಣ್ಯ ಪ್ರಶಸ್ತಿಯನ್ನು” ನೀಡುತ್ತಿದೆ,” ಎಂದರು.

ಈ ಸಂದರ್ಭದಲ್ಲಿ ಒಂಬತ್ತು ತಾಯಂದಿರಿಗೆ ಜೀಜಾ ಮಾತ ಪ್ರಶಸ್ತಿ, ನಾಲ್ವರಿಗೆ ವಿದ್ಯಾರಣ್ಯ ಪ್ರಶಸ್ತಿ ಹಾಗೂ ಒಬ್ಬರಿಗೆ ಕ್ರೀಡಾಪೋಷಕ ಪ್ರಶಸ್ತಿಯನ್ನು ನೀಡಲಾಯಿತು.

ಕಬ್ಬಡ್ಡಿಯಲ್ಲಿ ರಾಷ್ಟ್ರಕ್ಕೆ ಕೀರ್ತಿ ತಂದ ಬಿ,ಸಿ. ರಮೇಶ್‌ ಹಾಗೂ ಬಿ.ಸಿ. ಸುರೇಶ್‌ ಅವರ ತಾಯಿ ಈಜಿನಲ್ಲಿ ಕೀರ್ತಿ ತಂದ ಶ್ರೀಹರಿ ನಟರಾಜನ್‌ ಅವರ ತಾಯಿ, ಅಂತಾರಾಷ್ಟ್ರೀಯ ಓಟಗಾರ್ತಿ ಪ್ರಿಯಾ ಮೋಹನ್‌ ಅವರ ತಾಯಿ, ಫೆನ್ಸಿಂಗ್‌ನಲ್ಲಿ ಸಾಧನೆ ಮಾಡಿದ ಲಕ್ಷ್ಮೀ ಅವರ ತಾಯಿ, ಜಾವೆಲಿನ್‌ನಲ್ಲಿ ಸಾಧನೆ ಮಾಡಿದ ಮನು, ವೇಟ್‌ಲಿಫ್ಟರ್‌ ಗುರುರಾಜ್‌ ಪೂಜಾರಿ ಅವರ ತಾಯಿ, ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದ ಪುನೀತ್‌ ಅವರ ತಾಯಿ ಮತ್ತು ಸೈಕ್ಲಿಂಗ್‌ನಲ್ಲಿ ಸಾಧನೆ ಮಾಡಿದ ವೆಂಕಪ್ಪ ಕೆಂಗಲಗುತ್ತಿ ಅವರ ತಾಯಿಯನ್ನು ಜೀಜಾಮಾತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ರೀಡಾ ಭಾರತಿಯ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯವನ್ನೊಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ಚಂದ್ರಶೇಖರ ಜಾಗೀರ್‌ದಾರ್‌ ಆರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಕ್ರೀಡಾ ಭಾರತಿ ರಾಜ್ಯ ಅಧ್ಯಕ್ಷ ಮುಕುಂದರಾವ್‌ ಕಿಲ್ಲೇಕರ್‌, ರಾಜ್ಯ ಉಪಾಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಪದ್ಮಶ್ರೀ ಪುರಸ್ಕೃತ ಕೆ. ವೈ ವೆಂಕಟೇಶ್‌, ರಾಜ್ಯ ಕಾರ್ಯದರ್ಶಿ ಅಶೋಕ್‌ ಶೀಂತ್ರೆ, ಕ್ರೀಡಾ ಭಾರತೀಯ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಾಜಿ ಪ್ರಧಾನ ಕೋಚ್‌, ಡಾ. ವೈ.ಎಸ್‌. ಲಕ್ಷ್ಮೀಶ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅಥ್ಲೆಟಿಕ್ಸ್‌ನಲ್ಲಿ ರಾಜ್ಯದ ಹೊಸ ಪ್ರತಿಭೆ ಕರಾವಳಿಯ ಅಖಿಲೇಶ್‌

ಇದನ್ನೂ ಓದಿ : ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಉಡುಪಿಯ ಡ್ರಮ್ಮರ್‌ ಅಭಿನ್‌ ದೇವಾಡಿಗ

Related Articles