Saturday, October 12, 2024

ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌: ಕರ್ನಾಟಕ ಅದ್ಭುತ ಸಾಧನೆ, 3ನೇ ಸ್ಥಾನ

ಪಂಚಕುಲ, ಜೂನ್.13: ‌ ಕಳೆದ ಮೂರು ಆವೃತ್ತಿಗಳಲ್ಲಿ ನಾಲ್ಕನೇ ಸ್ಥಾನಕ್ಕೇ ತೃಪ್ತಿ ಪಡುತ್ತಿದ್ದ ಕರ್ನಾಟಕ ಈ ಬಾರಿಯ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ಏರಿದೆ.

ಸೋಮವಾರ ಕ್ರೀಡಾಕೂಜಟದ ಎಲ್ಲ ಸ್ಪರ್ಧೆಗಳು ಮುಗಿದ ನಂತರ ಕರ್ನಾಟಕ 22 ಚಿನ್ನ, 17 ಬೆಳ್ಳಿ ಹಾಗೂ 28 ಕಂಚಿನ ಪದಕ ಸೇರಿ ಒಟ್ಟು 67 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು.

ಭಾನುವಾರದಂತ್ಯಕ್ಕೆ ಚಿನ್ನ ಗಳಿಕೆಯಲ್ಲಿ (41) ಮಹಾರಾಷ್ಟ್ರ ಮತ್ತು ಹರಿಯಾಣ ಸಮಬಲ ಸಾಧಿಸಿದ್ದವು, ಆದರೆ ಕೊನೆಯ ದಿನ ಬಾಕ್ಸಿಂಗ್‌ನಲ್ಲಿ ಮಿಂಚಿದ ಆತಿಥೇಯ ಹರಿಯಾಣ 20 ಬಾಕ್ಸಿಂಗ್‌ ಪದಕಗಳಲ್ಲಿ 10 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ 52 ಚಿನ್ನ, 39 ಬೆಳ್ಳಿ ಹಾಗೂ 46 ಕಂಚಿನ ಪದಕಗಳೊಂದಿಗೆ 137 ಪದಕಗಳನ್ನು ಗೆದ್ದ ಹರಿಯಾಣ ಅಗ್ರ ಸ್ಥಾನಕ್ಕೇರಿತು. ಈ ಕಾರಣಕ್ಕಾಗಿಯೇ ಹರಿಯಾಣವನ್ನು ಕ್ರೀಡಾ ರಾಜ್ಯವೆಂದು ಬಣ್ಣಿಸುತ್ತಾರೆ. ಆರಂಭದಿಂದ ಕೊನೆಯ ದಿನದವರೆಗೂ ಪೈಪೋಟಿ ನೀಡಿದ್ದ ಏರಿಳಿತವನ್ನು ಕಂಡಿದ್ದ ಮಹಾರಾಷ್ಟ್ರ 45 ಚಿನ್ನ, 40 ಬೆಳ್ಳಿ ಹಾಗೂ 40 ಕಂಚಿನ ಪದಕ ಸೇರಿ ಒಟ್ಟು 125 ಪದಕಗಳೊಂದಿಗೆ ಎರಡನೇ ಸ್ಥಾನ ಕಾಯ್ದುಕೊಂಡಿತು.

19 ಚಿನ್ನ, 4 ಬೆಳ್ಳಿ ಹಾಗೂ 5 ಕಂಚಿನ ಪದಕ ಸೇರಿ ಒಟ್ಟು 28 ಪದಕಗಳನ್ನು ಗೆದ್ದ ಮಣಿಪುರ ನಾಲ್ಕನೇ ಸ್ಥಾನ ಗಳಿಸಿತು. ಕಳರಿಯಪಟ್‌ನಲ್ಲಿ ಪ್ರಭುತ್ವ ಸಾಧಿಸಿದುದರ ಪರಿಣಾಮ 18 ಚಿನ್ನ, 19 ಬೆಳ್ಳಿ ಹಾಗೂ 18 ಕಂಚಿನ ಪದಕ ಸೇರಿ  ಒಟ್ಟು 55 ಪದಕಗಳನ್ನು ಗೆದ್ದ ಕೇರಳ ಐದನೇ ಸ್ಥಾನಕ್ಕೇರಿತು.

ಕರ್ನಾಟಕ ಈ ಬಾರಿ ಮೂರನೇ ಸ್ಥಾನಕ್ಕೆ ಜಿಗಿಯಲು ಈಜಿನಲ್ಲಿ ಯಶಸ್ಸು ಕಂಡಿರುವುದೇ ಕಾರಣ. ಗಳಿಸಿರುವ 22 ಚಿನ್ನದ ಪದಕಗಳಲ್ಲಿ 19 ಪದಕಗಳು ಈಜುಕೊಳದಲ್ಲಿನ ಯಶಸ್ಸಿನಿಂದ ಬಂದವು.

ಮಹಾರಾಷ್ಟ್ರ ಮಲ್ಲಕಂಬದಲ್ಲಿ ಚಿನ್ನ ಗೆಲ್ಲುವ ಮೂಲಕ ಅದ್ಭುತವಾಗಿಯೇ ದಿನದ ಆರಂಭ ಕಂಡಿತ್ತು. ನಂತರ ಖೋ ಖೋದಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಿನ್ನ ಗೆದ್ದು ಮಹಾರಾಷ್ಟ್ರ ಅಗ್ರ ಸ್ಥಾನಕ್ಕೇರಿತ್ತು. ಆದರೆ ಹರಿಯಾಣದ ವನಿತೆಯರು ಹ್ಯಾಂಡ್‌ಬಾಲ್‌ನಲ್ಲಿ ಕೇವಲ ಒಂದು ಅಂಕದ ಮುನ್ನಡೆ ಸಾಧಿಸಿ ಚಿನ್ನ ಗೆದ್ದಾಗ ಆತಿಥೇಯರ ಆತ್ಮವಿಶ್ವಾಸ ಹೆಚ್ಚಿತು.

ಬಾಕ್ಸಿಂಗ್‌ ರಿಂಗ್‌ನಲ್ಲಿ ಹರಿಯಾಣ ಪ್ರಭುತ್ವ: ಹರಿಯಾಣ ಕುಸ್ತಿ ಮತ್ತು ಬಾಕ್ಸಿಂಗ್‌ ಕ್ರೀಡೆಯ ತವರೂರು. ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಬಾಕ್ಸ್‌ಗಳಲ್ಲಿ ಹರಿಯಾಣದವರೇ ಹೆಚ್ಚು. ವನಿತೆಯರ ವಿಭಾಗದಲ್ಲಿ ಎಂಟು ಮಂದಿ ಕುಸ್ತಿಪಟುಗಳು ಆರು ಚಿನ್ನದ ಪದಕ ಗೆದ್ದರು. ಐವರಲ್ಲಿ ನಾಲ್ವರು ಕುಸ್ತಿಪಟುಗಳು ಚಿನ್ನ ಗೆದ್ದರು. ಇದರಿಂದ ಹರಿಯಾಣ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಮಹಾರಾಷ್ಟ್ರದ ನಾಲ್ವರು ಕುಸ್ತಿಪಟುಗಳು ಕುಸ್ತಿಯಲ್ಲಿ ಫೈನಲ್‌ ತಲುಪಿದ್ದರು, ಆದರೆ ಒಬ್ಬರು ಮಾತ್ರ ಚಿನ್ನ ಗೆದ್ದರು.

ಬಾಸ್ಕೆಟ್‌ಬಾಲ್‌ನಲ್ಲಿ ಕರ್ನಾಟಕಕ್ಕೆ ಕಂಚು: ಕರ್ನಾಟಕದ ವನಿತೆಯರ ತಂಡ ರಾಜಸ್ಥಾನ ವಿರುದ್ಧ ನಡೆದ ಬಾಸ್ಕೆಟ್‌ಬಾಲ್‌ ಪಂದ್ಯದಲ್ಲಿ 67-62 ಅಂತರದಲ್ಲಿ ಜಯ ಗಳಿಸಿ ಕಂಚಿನ ಪದಕ ಗೆದ್ದಿತು. ವನಿತೆಯರ ವಿಭಾಗದಲ್ಲಿ ಪಂಜಾಬ್‌ ಚಿನ್ನ ಗೆದ್ದಿತು. ವನಿತೆಯರ ಬಾಸ್ಕೆಟ್‌ಬಾಲ್‌ನಲ್ಲಿ ಕರ್ನಾಟಕ ತಂಡ 72-68 ಅಂತರದಲ್ಲಿ ತಮಿಳುನಾಡು ವಿರುದ್ಧ ಜಯ ಗಳಿಸಿ ಕಂಚಿನ ಪದಕ ಗೆದ್ದುಕೊಂಡಿತು. ಫುಟ್ಬಾಲ್‌ನಲ್ಲಿ ಕರ್ನಾಟಕ ಹಾಗೂ ಮೇಘಾಲಯ ತಂಡಗಳು ಪುರುಷರ ವಿಭಾಗದ ಕಂಚಿನ ಪದಕ ಹಂಚಿಕೊಂಡವು.

ಫುಟ್ಬಾಲ್‌ನಲ್ಲಿ ಮಿಜೋರಾಂ ಪ್ರಭುತ್ವ: ಪುರುಷರ ಫುಟ್ಬಾಲ್‌ನಲ್ಲಿ ಕೇರಳ ತಂಡವನ್ನು ಫೈನಲ್‌ ಪಂದ್ಯದಲ್ಲಿ 5-1 ಗೋಲಿನಿಂದ ಮಣಿಸಿ ಮಿಜೋರಾಂ ಚಿನ್ನದ ಪದಕ ಗೆದ್ದುಕೊಂಡಿತು. ಟೇಬಲ್‌ ಟೆನಿಸ್‌ನಲ್ಲಿ ಜೆಹೋ ಪ್ಯುಂಗೆಟಾ ಚಿನ್ನ ಗೆಲ್ಲುವುದರೊಂದಿಗೆ ಮಿಜೋರಾಂ ಕೊನೆಯ ದಿನದಲ್ಲಿ ಎರಡು ಚಿನ್ನ ಗೆದ್ದಿತು.

Related Articles