Friday, October 4, 2024

ದಾಖಲೆಯೊಂದಿಗೆ ಚಿನ್ನ ಗೆದ್ದ ಕರ್ನಾಟಕದ ಐಶ್ವರ್ಯ

ಬೆಂಗಳೂರು: ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್‌ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್‌ನಲ್ಲಿ ಕರ್ನಾಟಕದ ಐಶ್ವರ್ಯ ಬಿ. ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿರುವುದಲ್ಲದೆ, ಅತಿ ಉದ್ದಕ್ಕೆ ಜಿಗಿದ ಭಾರತದ ಎರಡನೇ ಮಹಿಳಾ ಲಾಂಗ್‌ ಜಂಪರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪುರುಷರ ವಿಭಾಗದ ಹೈಜಂಪ್‌ನಲ್ಲಿ ರಾಜ್ಯದ ಜೆಸ್ಸೆ ಸಂದೇಶ್‌ 2.21 ಮೀ. ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ಗೆದ್ದಿದ್ದಾರೆ.

6.73 ಮೀ. ಉದ್ದಕ್ಕೆ ಜಿಗಿದ ಐಶ್ವರ್ಯ ತನ್ನ ವೈಯಕ್ತಿಕ ಉತ್ತಮ ದಾಖಲೆಯನ್ನು 21 ಸೆ,ಮೀ.ಗೆ ಹೆಚ್ಚಿಸಿಕೊಂಡರು, 6.52 ಸೆ,ಮೀ. ಹಿಂದಿನ ವೈಯಕ್ತಿಕ ಉತ್ತಮ ಪ್ರದರ್ಶನವಾಗಿತ್ತು. ಈ ಸಾಧನೆಯೊಂದಿಗೆ ಐಶ್ವರ್ಯ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಅಂಜು ಬಾಬಿ ಜಾರ್ಜ್‌ 6.83 ಮೀ, ಉದ್ದಕ್ಕೆ ಜಿಗಿದಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಅರ್ಹತೆಗೆ 6.50 ಮೀ. ಉದ್ದಕ್ಕೆ ಜಿಗಿಯಬೇಕಾಗಿತ್ತು, ಐಶ್ವರ್ಯ ಆ ಮಾನದಂಡವನ್ನು ಮೀರಿ ಯಶಸ್ಸು ಕಂಡಿದ್ದಾರೆ. 2011ರಲ್ಲಿ ಮಯೂಕಾ ಜಾನಿ 6.63 ಮೀ. ಉದ್ದಕ್ಕೆ ಜಿಗಿದು ನಿರ್ಮಿಸಿದ ಕೂಟ ದಾಖಲೆಯನ್ನು ಮುರಿದ ಐಶ್ವರ್ಯ  ಹೊಸ ದಾಖಲೆ ಬರೆದರು.

ದಿನದ ಅಚ್ಚರಿಯ ಫಲಿತಾಂಶದಲ್ಲಿ ವನಿತೆಯರ 100ಮೀ ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಆಂಧ್ರದ ಜ್ಯೋತಿ ಯರ್ರಾಜಿ ಕೊನೆಯ ಕ್ಷಣದಲ್ಲಿ ಎಡವಿ ಪದಕದಿಂದ ವಂಚಿತರಾದರು.

ಸಿದ್ಧಾಂತ್‌ಗೆ ಚಿನ್ನ: ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಉಡುಪಿ ಮೂಲದ ಸಿದ್ಧಾಂತ್‌ ತಿಂಗಳಾಯ 13.93 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಸಾಧನೆ ಮಾಡಿದರು.

Related Articles