Saturday, July 27, 2024

ಜಿಮ್ನಾಸ್ಟಿಕ್‌ನಲ್ಲಿ 5 ಚಿನ್ನ ಗೆದ್ದು ಮಿನುಗಿದ ಸಂಯುಕ್ತ ಕಾಳೆ

ಪಂಚಕುಲ, ಜೂ. 7: ಮಹಾರಾಷ್ಟ್ರದ ಸಂಯುಕ್ತ ಕಾಳೆ ರಿದಮಿಕ್‌ ಜಿಮ್ನಾಸ್ಟಿಕ್‌ನಲ್ಲಿ ಸಾಧ್ಯತೆ ಇರುವ ಎಲ್ಲ ಐದೂ ಪದಕಗಳನ್ನು ಗೆದ್ದು ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ತಾನು ಭಾರತದ ಭವಿಷ್ಯದ ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.

ದಿನದ ಇನ್ನೊಂದು ಅಚ್ಚರಿಯಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ನ ಸೆಲೆಸ್ಟಿನಾ ಚೆಲೋಬ್ರಾಯ್‌ ಸೈಕ್ಲಿಂಗ್‌ನಲ್ಲಿ ಮೂರನೇ ಚಿನ್ನ ಗೆದ್ದು ಎಲ್ಲರ ಗಮನ ಸೆಳೆದರು.

16 ವರ್ಷದ ಸಂಯುಕ್ತ ಅವರು ಜಿಮ್ನಾಸ್ಟಿಕ್‌ನಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡುವ ಮೂಲಕ ಮಹಾರಾಷ್ಟ್ರ ಪದಕ ಪಟ್ಟಿಯಲ್ಲಿ ಹರಿಯಾಣವನ್ನು ಹಿಂದಿಕ್ಕಿತು. ಮಹಾರಾಷ್ಟ್ರ 24  ಚಿನ್ನ, 22 ಬೆಳ್ಳಿ ಹಾಗೂ 17 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಆತಿಥೇಯ ಹರಿಯಾಣ 23 ಚಿನ್ನ, 20 ಬೆಳ್ಳಿ ಹಾಗೂ 29 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಈ ನಡುವೆ ವಿವಿಧ ಸ್ಪರ್ಧೆಗಳು ಮುಂದುವರಿದಿದ್ದವು. ಆತಿಥೇಹರಿಯಾಣ ಐದನೇ ದಿನದಲ್ಲಿ ಕೇವಲ 5 ಚಿನ್ನದ ಪದಕಗಳನ್ನು ಗೆದ್ದಿತು. ಕಬಡ್ಡಿ ಮತ್ತು ವಾಲಿಬಾಲ್‌ನಲ್ಲಿ ಹರಿಯಾಣದ ಪುರುಷರ ತಂಡವು ಸೋಲನುಭವಿಸಿದ್ದು ಅಲ್ಲಿನ ಕ್ರೀಡಾಭಿಮಾನಿಗಳಲ್ಲಿ ನಿರಾಸೆಯನ್ನುಂಟು ಮಾಡಿತ್ತು.

“ಇಲ್ಲಿ ಮಾಡಿರುವ ಸಾಧನೆಯ ಬಗ್ಗೆ ತೃಪ್ತಿ ಇದೆ, ನನ್ನ ಮುಂದಿನ ಗುರಿ ಭಾರತ ತಂಡವನ್ನು ಕಾಮನ್‌ವೆಲ್ತ್‌ ಹಾಗೂ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೊಂಡೊಯ್ಯುವುದು,” ಎಂದು ಥಾಣೆಯ ನಿವಾಸಿ ಸಂಯುಕ್ತ ಹೇಳಿದ್ದಾರೆ.

ಒಂದೆಡೆ ಸಂಯುಕ್ತ ಐದು ಚಿನ್ನ ಗೆದ್ದು ಸಾಧನೆ ಮಾಡಿದರೆ, ಇಂದಿರಾ ಗಾಂಧಿ ಸೈಕಲ್‌ ವೆಲೋಡ್ರೋಮ್‌ನಲ್ಲಿ ನಡೆದ ಸೈಕ್ಲಿಂಗ್‌ನಲ್ಲಿ ಅಂಡಾಮಾನ್‌ ನಿಕೋಬಾರ್‌ನ ಸೆಲೆಸ್ಟಿನಾ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ತನ್ನದೇ ದಾಖಲೆಯನ್ನು ಮುರಿದು ಮೂರನೇ ಚಿನ್ನ ಗೆದ್ದರು.

ಟಿನಾ ಮಾಯಾ ಅವರೊಂದಿಗೆ ಟೀಮ್‌ ಸ್ಪ್ರಿಂಟ್‌ನಲ್ಲಿ  ಚಿನ್ನದ ಪದಕ ಮತ್ತು 200 ಮೀ. ವೈಯಕ್ತಿಕ ಸ್ಪ್ರಿಂಟ್‌ನಲ್ಲಿ ಎರಡನೇ ಚಿನ್ನದ  ಪದಕ ಗೆದ್ದ 19ರ ಹರೆಯದ ಸೆಲೆಸ್ಟಿನಾ, 1500ಮೀ.ನಲ್ಲಿ ಮೂರನೇ ಸ್ವರ್ಣ ಗೆದ್ದರು.

ಮಹಾರಾಷ್ಟ್ರ 4×100 ಮೀ. ರಿಲೇಗಳಲ್ಲಿ ಚಿನ್ನ ತನ್ನದಾಗಿಸಿಕೊಂಡಿತು. ಜೊತೆಯಲ್ಲಿ ಬಾಲಕಿಯರ 100ಮೀ. ಬಾಲಕರ ಹೈಜಂಪ್‌, ಕುಸ್ತಿಯಲ್ಲಿ ಎರಡು ಮತ್ತು ಬ್ಯಾಡ್ಮಿಂಟನ್‌ನಲ್ಲಿ ಒಂದು ಚಿನ್ನ ಗೆದ್ದುಕೊಂಡಿತು.

21ನೇ ಸ್ಥಾನದಲ್ಲಿ ಕರ್ನಾಟಕ:

ವರದಿ ತಲುಪಿದಾಗ 24 ರಾಜ್ಯಗಳು ಕನಿಷ್ಠ ಒಂದು ಚಿನ್ನದ ಪದಕ ಗೆದ್ದಿದ್ದು, 30 ರಾಜ್ಯಗಳು ಪದಕದ ಖಾತೆ ತೆರೆದಿವೆ. 12 ಚಿನ್ನದ ಪಕದಗಳನ್ನು ಗೆದ್ದಿರುವ ಮಣಿಪುರ ಮೂರನೇ ಸ್ಥಾನದಲ್ಲಿದೆ. 1 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದಿರುವ ಕರ್ನಾಟಕ ಪದಕಗಳ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದೆ.

ಸದಾನಂದ, ಸುಧೀಷ್ಣ ವೇಗದ ಓಟಗಾರರು:

ಜಾರ್ಖಂಡ್‌ನ ಸದಾನಂದ ಕುಮಾರ್‌ 100 ಮೀ. ಓಟದಲ್ಲಿ 10.63 ಸೆಕೆಂಡುಗಳಲ್ಲಿ ಗುರಿ ತಲುಪಿ ಕ್ರೀಡಾಕೂಟದ ವೇಗದ ಓಟಗಾರ ಎನಿಸಿದರು. ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಸುಧೀಷ್ಣ ಶಿವಾಂಕರ್‌ 11.79 ಸೆಕೆಂಡುಗಳಲ್ಲಿ ಗುರಿ ತಲುಪಿ ವೇಗದ ಓಟಗಾರ್ತಿ ಎನಿಸಿದರು. ಮಹಾರಾಷ್ಟ್ರದ ಬಾಲಕರು ರಿಲೇಯಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ ಬಾಲಕೀಯರ ತಂಡ ಚಿನ್ನ ಗೆಲ್ಲುವಲ್ಲಿ ಸುಧೀಷ್ಣ ಪ್ರಮುಖ ಪಾತ್ರವಹಿಸಿದರು.

ದಿನದ ಆರಂಭದಲ್ಲಿ ಮಧ್ಯಪ್ರದೇಶದ ಅರ್ಜುನ್‌ ವಾಸ್ಕಲೆ 1500ಮೀ ಓಟದಲ್ಲಿ 3:51.57 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ವನಿತೆಯರ 1500 ಮೀ. ಓಟದಲ್ಲಿ ಮಣಿಪುರದ ಹುಯಿದ್ರೋಮ್‌ ಭೂಮೇಶ್ವರಿ 3:51.57 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ತಮ್ಮದಾಗಿಸಿಕೊಂಡರು.

ಬ್ಯಾಡ್ಮಿಂಟನ್‌ನಲ್ಲಿ ಉನ್ನತಿಗೆ ಚಿನ್ನ: ಉಬೇರ್‌ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹರಿಯಾಣದ 14ಹರೆಯದ ಉನ್ನತಿ ಜೂನಿಯರ್‌ ವಿಭಾಗದಲ್ಲಿ ವಿಶ್ವದ ಮಾಜಿ ನಂಬರ್‌ ಒನ್‌ ಆಟಗಾರ್ತಿ ತಸ್ನಿಮ್‌ ವಿರ್‌ ವಿರುದ್ಧ 9-21, 23-21, 21-12 ಅಂತರದಲ್ಲಿ ಜಯ ಗಳಿಸಿ ಚಿನ್ನ ಗೆದ್ದರು. ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರದ ದರ್ಶನ್‌ ಪೂಜಾರಿ ತಮಿಳುನಾಡಿನ ರಿತ್ವಿಕ್‌ ಸಂಜೀವ್‌ ವಿರುದ್ಧ 21-15, 22-20 ಅಂತರದಲ್ಲಿ ಜಯ ಗಳಿಸಿ ಚಿನ್ನ ಗೆದ್ದರು.

ಪುರುಷರ ಕಬಡ್ಡಿಯಲ್ಲಿ ಹಿಮಾಚಲ ಪ್ರದೇಶ ದ್ವಿತಿಯಾರ್ಧದಲ್ಲಿ ಉತ್ತಮ ಪೈಪೋಟಿ ನೀಡಿ ಆತಿಥೇಯ ಹರಿಯಾಣವನ್ನು ಹೆಚ್ಚುವರಿ ಅವಧಿಯಲ್ಲಿ ಮಣಿಸಿ ಚಿನ್ನ ಗೆದ್ದುಕೊಂಡಿತು. ನಿಗದಿತ ಅವಧಿಯಲ್ಲಿ ಇತ್ತಂಡಗಳು 34-34 ಅಂಕಗಳಿಂದ ಸಮಬಲ ಸಾಧಿಸಿದ್ದವು. ಹೆಚ್ಚುವರಿ ಅವಧಿಯಲ್ಲಿ ಹಿಮಾಚಲ ಪ್ರದೇಶದ ಡಿಫೆಂಡರ್‌ಗಳು ಹರಿಯಾಣದ ಎಲ್ಲ ಐದು ರೈಡರ್‌ಗಳನ್ನು ಹಿಡಿದು ಪಂದ್ಯ ಗೆದ್ದುಕೊಂಡರು.

Related Articles