Friday, February 23, 2024

ಜಮ್ಮು-ಕಾಶ್ಮೀರದಲ್ಲಿ ತಾಂಗ್‌-ತಾ ಕ್ರೀಡೆಯನ್ನು ರಕ್ಷಿಸಿದ ಮೌಲ್ವಿ

ಪಂಚಕುಲ, ಜೂನ್‌, 7:

ಬ್ರಿಟಿಷರಿಂದ ನಿಷೇಧಕ್ಕೊಳಗಾಗಿದ್ದ ಭಾರತದ ದೇಶೀಯ ಕ್ರೀಡೆಯೊಂದನ್ನು ಮಸೀದಿಯ ಮೌಲ್ವಿಯೊಬ್ಬರು ರಕ್ಷಿಸಿ, ಆ ಕ್ರೀಡೆಯು ರಾಜ್ಯಾದ್ಯಂತ ಹಬ್ಬುವಂತೆ ಮಾಡಿ, ಈಗ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಸ್ಪರ್ಧಿಸುವಂತಾಗಿದೆ.

ಖೇಲೋ ಇಂಡಿಯಾದ ಕ್ರೀಡಾಕೂಟಗಳಲ್ಲಿ ಭಾರತದ ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಬಾರಿ ನಾಲ್ಕ ದೇಶೀಯ ಕ್ರೀಡೆಗಳಿಗೆ ಹರಿಯಾಣದ ಪಂಚಕುಲದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಅವಕಾಶ ನೀಡಲಾಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಪರ್ಧಿಗಳೂ ಸ್ಪರ್ಧಿಸುತ್ತಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಈ ಕ್ರೀಡೆ ಜುಮ್ಮು ಮತ್ತು ಕಾಶ್ಮೀರಕ್ಕೆ ಬಂದದ್ದು, ಅದು ಕೂಡ ವಿರೋಧಗಳ ನಡುವೆ ಯಶಸ್ಸು ಕಂಡಿದ್ದು ವಿಶೇಷ.

ಮೊಹಮ್ಮದ್‌ ಇಕ್ಬಾಲ್‌ ಯುವಕರನ್ನು ಒಗ್ಗೂಡಿಸಿ ತಾಂಗ್‌-ತಾ ಮಾರ್ಷಲ್‌ ಆರ್ಟ್ಸ್‌ ಕ್ರೀಡೆಯನ್ನು ಜನಪ್ರಿಯಗೊಳಿಸಿದ್ದಾರೆ. “20 ವರ್ಷಗಳ ಹಿಂದೆ ನಾನೊಬ್ಬ ಖಾಸಗಿ ತರಬೇತುದಾರನಾಗಿದ್ದೆ. ಬಾಲಕ ಮತ್ತು ಬಾಲಕಿಯರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದೆ,” ಎಂದು ಈಗ ಆ ರಾಜ್ಯದ ತರಬೇತುದಾರರಾಗಿ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಮೊಹಮ್ಮದ್‌ ಇಕ್ಬಾಲ್‌ ಹೇಳಿದರು.

“ಹೆಣ್ಣು ಮಕ್ಕಳು ಇಂಥ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಅನೇಕರು ತರಗತಿ ನಡೆಯುವಲ್ಲಿಗೆ ಬಂದು ತೊಂದರೆ ನೀಡಿದರು. ಅನಿವಾರ್ಯವಾಗಿ ಕ್ರೀಡಾ ತರಬೇತಿ ನಿಂತು ಹೋಯಿತು. ಆದರೆ ಸ್ಥಳಿ ಮಸೀದಿಯ ಮೌಲ್ವಿಗಳು ಮತ್ತು ಕೆಲವು ಶಾಲಾ ಶಿಕ್ಷಕರು ರಕ್ಷಣೆ ನೀಡಿ ಕ್ರೀಡೆಗೆ ಪ್ರೋತ್ಸಾಹಿಸಿದರು. ಇದರಿಂದಾಗಿ ಇಂದು ರಾಜ್ಯವನ್ನು ಪ್ರತಿನಿಧಿಸುವಂತಾಯಿಗತು,” ಎನ್ನುತ್ತಾರೆ ಮೊಹಮ್ಮದ್‌ ಇಕ್ಬಾಲ್‌.


ಮೌಲ್ವಿಯು ನೆರವು ನೀಡಿದುದರ ಪರಿಣಾಮ ಇಂದು ಹೆಣ್ಣು ಮಕ್ಕಳು ತಾಂಗ್‌-ತಾ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಯಿತು. ಹಲವು ವರ್ಷಗಳಿಂದ ಭಯೋತ್ಪಾದಕರ ಕರಿ ನೆರಳಿನ ನಡುವೆಯೂ ಮೊಹಮ್ಮದ್‌ ತರಬೇತಿ ನೀಡುವುದನ್ನು ಮುಂದುವರಿಸಿದರು. ರಾಜ್ಯದ ಕ್ರೀಡಾಪಟುಗಳು ಮುಂದೊಂದು ದಿನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂಬುದೇ ಮೊಹಮ್ಮದ್‌ ಇಕ್ಬಾಲ್‌ ಅವರ ಗುರಿಯಾಗಿತ್ತು.

“ಅಂದು ವಿರೋಧದ ನಡುವೆಯೂ ತರಬೇತಿ ಪಡೆದ ಅನೇಕ ಯುವಕ ಮತ್ತು ಯುವತಿಯರು ಇಂದು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊರಿಯಾ, ದುಬೈ ಹಾಗೂ ಇರಾನ್‌ನಲ್ಲಿ ನಡೆದ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಇತರರಿಗೆ ಮಾದರಿಯಾಗಿದ್ದಾರೆ,” ಎಂದು ಮೊಹಮ್ಮದ್‌ ಇಕ್ಬಾಲ್‌ ಹೆಮ್ಮೆಯಿಂದ ಹೇಳಿಕೊಂಡರು.

ಈಶ್ಯಾನ್‌ ರಾಜ್ಯಕ್ಕೆ ಸೇರಿದ ತಾಂಗ್‌-ತಾ ಮಾರ್ಷಲ್‌ ಆರ್ಟ್ಸ್‌, ಬಯಲು, ಪರ್ವತ ಹಾಗೂ ಕಣಿವೆಗಳನ್ನು ದಾಟಿ ಭಾರತದ ಉತ್ತರದ ಉತ್ತುಂಗಕ್ಕೆ ಹೇಗೆ ಬಂತೆಂಬುದನ್ನು ಕಂಡು ಹಿಡಿಯುವುದು ಕಷ್ಟ.

“ಇದು ನಮ್ಮ ದೇಶದ ಕ್ರೀಡೆ. ಇದು ಹುಟ್ಟಿ ಬೆಳೆದದ್ದು ಇಲ್ಲಿಯೇ. ಈ ಕ್ರೀಡೆಯನ್ನು ನಾವು ಇನ್ನಷ್ಟು ಉತ್ತಮ ರೀತಿಯಲ್ಲಿ ಬೆಳೆಸಬೇಕಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಈ ಕ್ರೀಡೆಯಿಂದ ನಾನು ಪ್ರಭಾವಿತನಾದೆ,” ಎನ್ನುತ್ತಾರೆ ಮೊಹಮ್ಮದ್‌ ಇಕ್ಬಾಲ್‌.

ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ 20ಕ್ಕೂ ಹೆಚ್ಚು ತಾಂಗ್‌-ತಾ ಕ್ಲಬ್‌ಗಳಿವೆ. ಮೊಹಮ್ಮದ್‌ ಅವರಲ್ಲಿ ತರಬೇತಿ ಪಡೆದ ಅನೇಕರ ಯುವಕರು ಶ್ರೀನಗರದಲ್ಲಿ ತರಬೇತಿ ನೀಡುತ್ತಿದ್ದಾರೆ. “ಈಗ ತಾಂಗ್‌-ತಾ ಕ್ರೀಡೆ ಒಂದು ರೀತಿಯಲ್ಲಿ ಸಾಂಪ್ರದಾಯಿಕ ಕ್ರೀಡೆಯಾಗಿ ರೂಪುಗೊಂಡಿದೆ. ಅನೇಕರು ತಮ್ಮ ಮಕ್ಕಳನ್ನು ಮುಕ್ತವಾಗಿ ಕಳಹಿಸುತ್ತಾರ,” ಎನ್ನುತ್ತಾರೆ ಜಮ್ಮು ಮತ್ತು ಕಾಶ್ಮೀರ ತಾಂಗ್‌-ತಾ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ,  ಇಜಾಜ್‌ ಅಹಮ್ಮದ್‌ ಭಟ್.‌

ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ತಾಂಗ್‌-ತಾ ಕ್ರೀಡೆಯನ್ನು ತಮ್ಮ ಆತ್ಮರಕ್ಷಣೆಗಾಗಿ ಕಲಿಯುತ್ತಿದ್ದಾರೆ.

ಮೌಲ್ವಿ ಅಂದು ರಕ್ಷಣೆ ನೀಡದೇ ಇರುತ್ತಿದ್ದರೆ, ನಮ್ಮ ದೇಶದ ಕ್ರೀಡೆಯೊಂದಕ್ಕೆ ಜಮ್ಮುವಿನಲ್ಲಿ ಅವಕಾಶ ಸಿಗುತ್ತಿರಲಿಲ್ಲ.

Related Articles