Tuesday, April 16, 2024

ಲಕ್ಷದ್ವೀಪದ ಈಜುಗಾರರಿಗೆ ಆಳ ಸಮುದ್ರವೇ ಈಜುಕೊಳ!

ಪಂಚಕುಲ, ಜೂ. 8: 13 ಕ್ರೀಡಾಪಟುಗಳನ್ನೊಳಗೊಂಡ ಲಕ್ಷದ್ವೀಪದ ಕ್ರೀಡಾ ತಂಡ ಈ ಬಾರಿಯ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿದೆ. 200 ಮೀ. ಟ್ರ್ಯಾಕ್‌ ಇವರ ಕ್ರೀಡಾಂಗಣ. ಅಬ್ಬರದ ಅಲೆಗಳಿಂದ ಕೂಡಿದ ಅರಬ್ಬೀ ಸಮುದ್ರವೇ ಇವರ ಈಜುಕೊಳ.

36 ದ್ವೀಪಗಳಿಂದ ಕೂಡಿದ ಒಟ್ಟು 32 ಚದರ ಕಿ.ಮೀ. ವಿಸ್ತೀರ್ಣದ ಲಕ್ಷದ್ವೀಪ್‌ದಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಸೂಕ್ತ ಕ್ರೀಡಾಂಗಣವಿಲ್ಲ. ಈಜುಗಾರರಿಗೆ ಈಜುಕೊಳವಿಲ್ಲ, ಆದರೂ ಹರಿಯಾಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ಲ್ಲಿ ಅಲ್ಲಿನ 13 ಕ್ರೀಡಾಪಟುಗಳು ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.

ತಂಡದಲ್ಲಿ ಇರುವ ಏಕೈಕ ಈಜುಗಾರ ಮೊಹಮ್ಮದ್‌ ಅನೀಸ್‌ ಅಲೆಗೆ ಎದೆಕೊಟ್ಟು ಮುಂದಕ್ಕೆ ಸಾಗಿ ಈಜು ಕಲಿತು ಈಗ ಸ್ಪರ್ಧೆಯಲ್ಲಿದ್ದಾರೆ. ಈಜಿನಲ್ಲಿ ತನ್ನನ್ನು ತೊಡಗಿಸಿಕೊಂಎ ಅನೀಸ್‌, ಚಿಕ್ಕಂದಿನಲ್ಲೇ ಅಬ್ಬರದ ಅಲೆಗಳನ ನಡುವೆ ಈಜು ಕಲಿತ ಛಲಗಾರ. ಗುರುವಿಲ್ಲದೆ ಅಲೆಗಳೊಂದಿಗೆ ಆಟವಾಡಿ ಭಾರತದ ಉತ್ತಮ ಈಜುಗಾರನಾಗಬೇಕೆಂಬ ಕನಸುಹೊತ್ತವ. ಆಳ ಮತ್ತು ಅಬ್ಬರದ ಸಮುದ್ರವೇ ಅನೀಸ್‌ಗೆ ಗುರು.

“ನಮ್ಮ ಎಲ್ಲ ಈಜುಗಾರರು ಸಮುದ್ರದಲ್ಲಿಯೇ ತರಬೇತಿ ಪಡೆಯುತ್ತಾರೆ. ಸಮುದ್ರ ಇಲ್ಲಿ ಯಾವಾಗಲೂ ಅಬ್ಬರದಿಂದ ಕೂಡಿರುತ್ತದೆ. ಇಲ್ಲಿ ಈಜಬೇಕಾದರೆ ನೈಪುಣ್ಯತೆ ಮತ್ತು ಧೈರ್ಯ ಬೇಕಾಗುತ್ತದೆ,” ಎಂದು ಖೇಲೋ ಇಂಡಿಯಾದಲ್ಲಿ ಪಾಲ್ಗೊಂಡಿರುವ ಲಕ್ಷದ್ವೀಪ ತಂಡದ ಪ್ರಮುಖರಾದ ಅಹಮದ್‌ ಜವಾನ್‌ ಹಸನ್‌ ಹೇಳುತ್ತಾರೆ.

ಅನೀಸ್‌ ಸೇರಿದಂತೆ ಅನೇಕ ಕ್ರೀಡಾಪಟುಗಳಿಗೆ ಒಂದು ದಿನ ಭಾರತವನ್ನು ಪ್ರತಿನಿಧಸಬೇಕೆಂಬ ಹಂಬಲ. ಆದರೆ ಭಾರತದ ಇತರ ರಾಜ್ಯಗಳಲ್ಲಿ ಸಿಗುವ ತರಬೇತಿ ಸೌಲಭ್ಯ ಇಲ್ಲಿಯ ಕ್ರೀಡಾಕಾಂಕ್ಷಿಗಳಿಗೆ ಸಿಗುತ್ತಿಲ್ಲ. “ನಮ್ಮದು ಅತ್ಯಂತ ಚಿಕ್ಕ ದ್ವೀಪ. 36 ದ್ವೀಪಗಳಿಂದ ಕೂಡಿದ 32 ಚದರ ಕಿಲೋ ಮೀಟರ್‌ ನಮ್ಮ ಪ್ರದೇಶ. ಇದರಲ್ಲೇ ಬದುಕು ಕಟ್ಟಿಕೊಳ್ಳಬೇಕು. ಇದರಲ್ಲೇ ನಮ್ಮ ಕ್ರೀಡೆ ನಡೆಯಬೇಕು,” ಎಂದು ಅಹಮದ್‌ ಜವಾನ್‌ ನಗುತ್ತ ನುಡಿದರು.

12 ಅಥ್ಲೀಟ್‌ಗಳನ್ನೊಳಗೊಂಡ 13 ಕ್ರೀಡಾಪಟುಗಳ ತಂಡದಲ್ಲಿ ಅನೀಸ್‌ಗೆ ಒಂಟಿತನ ಕಾಡುವುದು ಸಹಜ. ಕರಾವಟ್ಟಿಯಲ್ಲಿರುವ ಚಿಕ್ಕ ಅಂಗಣದಲ್ಲಿ ಆರು ಮಂದಿ ಹುಡುಗರು ಮತ್ತು ಆರು ಮಂದಿ ಹುಡುಗಿಯರು ತರಬೇತಿ ಪಡೆಯುತ್ತಾರೆ.

“200 ಮೀ. ಓಟವನ್ನು ನಡೆಸಲು ಇದು ಸೂಕ್ತವಾಗಿದೆ. ಇಲ್ಲಿ ನಿರಂತರ ಅಭ್ಯಾಸ ನಡೆಸುವುದು ಕಷ್ಟ. ಏಕೆಂದರೆ ನಡುವೆ ಫುಟ್ಬಾಲ್‌ ಆಡುತ್ತಾರೆ. ಹೆಚ್ಚಾಗಿ ದಿನ ಪೂರ್ಣ ಅವಧಿ ಫುಟ್ಬಾಲ್‌ಗೇ ಮೀಸಲಾಗುತ್ತದೆ. 400 ಮೀ. ಸಿಂಥಟಿಕ್‌ ಟ್ರ್ಯಾಕ್‌ ಅಳವಡಿಸುವ ಕೆಲಸ ಆರಂಭವಾಗಿದೆ. ಇದು ಮುಗಿದರೆ ಹೆಚ್ಚಿನ ಯುವಕ, ಯುವತಿಯರು ಅಭ್ಯಾಸಕ್ಕೆ ಬರಬಹುದು,” ಎಂದು ಅಹಮದ್‌ ಜವಾನ್‌ ವಿವರಿಸಿದರು.

ಎರ್ನಾಕುಲಂನಲ್ಲಿ ತರಬೇತಿ: ರಾಷ್ಟ್ರೀಯ ಕ್ರೀಡಾಕೂಟ ಅಥವಾ ಖೇಲೋ ಇಂಡಿಯಾದಂಥ ಕೂಟಗಳಲ್ಲಿ ಭಾವಹಿಸಬೇಕಾದಾಗ ಲಕ್ಷದ್ವೀಪದ ಕ್ರೀಡಾಪಟುಗಳು ಎರ್ನಾಕುಲಂನಲ್ಲಿ ತಿಂಗಳುಗಟ್ಟಲೆ ತರಬೇತಿ ನಡೆಸುತ್ತಾರೆ. ಅಲ್ಲಿರುವ ಸಿಂಥಟಿಕ್‌ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸುತ್ತಾರೆ.

“ನಮಗೆ ಸಿಗುವ ಉತ್ತಮ ಸೌಲಭ್ಯವೆಂದರೆ ಎರ್ನಾಕುಲಂನಲ್ಲಿ ತರಬೇತಿ ನೀಡುವುದು. 32ನೇ ದಕ್ಷಿಣ ವಲಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಮುಬಾಸಿನಾ ಮೊಹಮ್ಮದ್‌ ಜಾವಲಿನ್‌ ಎಸೆತದಲ್ಲಿ ಚಿನ್ನ ಮತ್ತು ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕ ಗೆದ್ದು ದ್ವೀಪಕ್ಕೆ ಕೀರ್ತಿ ತಂದಿದ್ದಾರೆ. ಇದೇ ಕ್ರೀಡಾಕೂಟದಲ್ಲಿ ಮುನ್ಸಿರಾ ಮುನೀರ್‌ ಚಿನ್ನ ಹಾಗೂ ನಿಶಾಲ್‌ ಕಂಚಿನ ಪದಕ ಗೆದ್ದಿದ್ದರು.

Related Articles