Saturday, October 12, 2024

ಜಾವೆಲಿನ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಯ್ಕೆಯಾದ ಕನ್ನಡಿಗ ಮನು

ಬೆಂಗಳೂರು: ಚೆನ್ನೈನಲ್ಲಿ ನಡೆಯುತ್ತಿರುವ 61ನೇ ಅಂತರ್‌ ರಾಜ್ಯ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮನು ಡಿ,ಪಿ. ಜಾವೆಲಿನ್‌ ಎಸೆತದಲ್ಲಿ ಅಗ್ರ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ದೇಶವನ್ನು ಪ್ರನಿನಿಧಿಸಲು ಆಯ್ಕೆಯಾಗಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್‌ ನಾಯ್ಕ್‌ ಅವರಲ್ಲಿ ತರಬೇತಿ ಪಡೆಯುತ್ತಿರುವ ಮನು ಡಿ.ಪಿ. ಕ್ರೀಡಾಕೂಟದ ಎರಡನೇ ದಿನದಲ್ಲಿ 84.35 ಮೀ. ದೂರಕ್ಕೆ ಎಸೆದು ವೈಯಕ್ತಿಕ ಉತ್ತಮ ಸಾಧನೆ ಮಾಡಿದರು, ಮಾತ್ರವಲ್ಲ ಚಿನ್ನದ ಪದಕ ಗೆದ್ದರು.

ಮೊದಲ ಪ್ರಯತ್ನದಲ್ಲಿ 78.73 ಮೀ. ದೂರಕ್ಕೆ ಎಸೆದ ಮನು ಎರಡನೇ ಎಸೆತದಲ್ಲಿ ಕೊಂಚ ಹಿನ್ನಡೆ ಕಂಡರು, ಆದರೆ ಮೂರನೇ ಎಸೆತದಲ್ಲಿ ವೈಯಕ್ತಿಕ ಉತ್ತಮ 84.35ಮೀ. ದೂರಕ್ಕೆ ಎಸೆದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು.

82.54ಮೀ. ದೂರಕ್ಕೆ ಎಸೆದ ಉತ್ತರ ಪ್ರದೇಶದ ರೋಹಿತ್‌ ಯಾದವ್‌ ಕೂಡ ಬೆಳ್ಳಿ ಪದಕದೊಂದಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು. ರಾಜಸ್ಥಾನದ ಯಶ್ವೀರ್‌ ಸಿಂಗ್‌ ಕಂಚಿನ ಪದಕ ಗೆದ್ದರು.

82.43 ಮೀ. ಮನು ಅವರ ಈ ಹಿಂದಿನ ವೈಯಕ್ತಿಕ ಉತ್ತಮ ಎಸೆತವಾಗಿತ್ತು. ನೀರಜ್‌ ಚೋಪ್ರಾ ಅವರ ಎಸೆತಗಳನ್ನು ವೀಕ್ಷಿಸುತ್ತ ಬೆಳೆದ ಮನು ಅವರ ಬೆಳವಣಿಗೆಯ ರೀತಿ ಮತ್ತು ಶಿಸ್ತನ್ನು ಗಮನಿಸಿದರೆ ಅವರು ಭವಿಷ್ಯದ ನೀರಜ್‌ ಚೋಪ್ರಾ ಎಂದರೆ ಅತಿಶಯೋಕ್ತಿ ಆಗಲಾರದು.  ಮನು ಅವರು ಈಗಾಗಲೇ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

Related Articles