Thursday, October 10, 2024

ಎಎಫ್‌ಸಿ ಕಪ್‌: ಅಫಘಾನಿಸ್ತಾನಕ್ಕೆ ಸೋಲುಣಿಸಿದ ಭಾರತ

ಕೋಲ್ಕೋತಾ: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ ಏಷ್ಯಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸತತ ಎರಡನೇ ಜಯ ಗಳಿಸಿದೆ.

ಕೊನೆಯ ಆರು ನಿಮಿಷಗಳ ಪಂದ್ಯದ ಗತಿಯೇ ಬದಲಾಯಿತು. ಭಾರತದ ಪರ ಸುನಿಲ್‌ ಛೆಟ್ರಿ ಹಾಗೂ ಸಹಲ್‌ ಅಬ್ದುಲ್‌ ಸಮದ್‌ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಪಂದ್ಯ ಗೋಲಿಲ್ಲದೆ ಡ್ರಾದಲ್ಲಿ ಕೊನೆಗೊಳ್ಳುವ ಎಲ್ಲ ಲಕ್ಷಣ ತೋರಿತ್ತು, ಆದರೆ  86ನೇ ನಿಮಿಷದಲ್ಲಿ ನಾಯಕ ಛೆಟ್ರಿ ಫ್ರೀ ಕಿಕ್‌ ಮೂಲಕ ಗಳಿಸಿದ ಗೋಲು ಭಾರತಕ್ಕೆ ಮುನ್ನಡೆ ತಂದು ಕೊಟ್ಟಿತು. ಛೆಟ್ರಿಯ ತುಳಿದ ಚೆಂಡನ್ನು ಅಫಘಾನಿಸ್ತಾನದ ಕೀಪರ್‌ ಫೈಸಲ್‌ ತಡೆಯುವಲ್ಲಿ ವಿಫಲರಾದರು.

ಭಾರತದ ಈ ಮುನ್ನಡೆಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 88 ನೇ ನಿಮಿಷದಲ್ಲಿ ಅಮಿರಿ ಹೆಡರ್‌ ಮೂಲಕ ಗಳಿಸಿ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಭಾರತದ ಗುರ್‌ಪ್ರೀತ್‌ ಸಿಂಗ್‌ ಸಂಧೂಗೆ ಯಾವುದೇ ರೀತಿಯಲ್ಲೂ ಅದನ್ನು ತಡೆಯಲಾಗಲಿಲ್ಲ.

ಪಂದ್ಯ 1-1ರಲ್ಲಿ ಡ್ರಾಗೊಳ್ಳುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಸುನಿಲ್‌ ಛೆಟ್ರಿ ಬದಲಿಗೆ ಅಬ್ದುಲ್‌ ಸಮದ್‌ ಹಾಗೂ ಮನ್ವೀರ್‌ ಸಿಂಗ್‌ ಬದಲಿಗೆ ಉದಾಂತ್‌ ಸಿಂಗ್‌ ಅಂಗಣಕ್ಕಿಳಿದರು. ಇಂಜರಿ ಟೈಮ್‌ ಐದು ನಿಮಿಷ ನೀಡಲಾಯಿತು. 90+1ನೇ ನಿಮಿಷದಲ್ಲಿ ಸಹಾಲ್‌ ಅಬ್ದುಲ್‌ ಸಮದ್‌ ಗಳಿಸಿದ ಗೋಲು ಅಫಘಾನಿಸ್ತಾವನ್ನು ಮೌನಕ್ಕೆ ಸರಿಸಿತು. ಸಾಲ್ಟ್‌ ಲೇಕ್‌ ಅಂಗಣದಲ್ಲಿ ಸಂಭ್ರಮ ಮನೆ ಮಾಡಿತು. ಸಹಲ್‌ ಮತ್ತು ಆಶೀಖ್‌ ಕೆಲ ಹೊತ್ತು ಚೆಂಡನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ ಮುಂದೆ ಸಾಗಿದರು, ಒಂದು ಹಂತದಲ್ಲಿ ಆಶೀಖ್‌ ಚೆಂಡನ್ನು ನಿಯಂತ್ರಿಸಿ ಸಹಲ್‌ ಗೆ ಉತ್ತಮವಾದ ಪಾಸ್‌ ನೀಡಿದರು, ಸಹಲ್‌ ನೇರವಾಗಿ ಗೋಲ್‌ ಬಾಕ್ಸ್‌ಗೆ ಗರಿಯಿಟ್ಡು ಹೊಡೆದರು. ಭಾರತಕ್ಕೆ 2-1 ಅದಭುತ ಜಯ. ಈಗ ಭಾರತ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದಿದ್ದು, ಮುಂದಿನ ಪಂದ್ಯದಲ್ಲಿ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿರುವ ಹಾಂಕಾಂಗ್‌ ವಿರುದ್ಧ ಗೆಲ್ಲಲೇಬೇಕಾಗಿದೆ. ಗೋಲುಗಳ ಅಂತರದಲ್ಲಿ ಹಾಂಕಾಂಗ್‌ ಮುಂದೆ ಇದೆ.

ಜಯದ ನಂತರ ಮಾತನಾಡಿದ ನಾಯಕ ಸುನಿಲ್‌ ಛೆಟ್ರಿ, “ಅಂಕಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದು ಊಹಿಸಿದ್ದೆ, ಜಯ ಗಳಿಸುವುದು ಅಷ್ಟು ಸುಲಭವಾಗಿರಲಿಲ್ಲ, ಆದರೆ ಬದಲಾವಣೆ ಮಾಡಿದ್ದು ಯಶಸ್ಸು ನೀಡಿದೆ, ಈ ಜಯ ಅತೀವ ಸಂಭ್ರಮವನ್ನುಂಟು ಮಾಡಿದೆ,” ಎಂದರು,

“ತಂಡದ ಆಟಗಾರರಿಗೆ ಶಕ್ತಿ ಮತ್ತು ದೌರ್ಬಲ್ಯದ ಬಗ್ಗೆ ಚೆನ್ನಾಗಿ ಗೊತ್ತಿತ್ತು, ಉತ್ತಮ ಶ್ರಮವಹಿಸಿ ಆಡಿದ್ದಾರೆ. ತಂಡ ಅತ್ಯಂತ ತಾಳ್ಮೆಯಿಂದ ಆಟವಾಡಿದೆ. ಯುವ ಆಟಗಾರರು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಕೆಲವೊಂದು ಕಡೆ ತಪ್ಪಾಗಿದೆ, ಆ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಅಂಗಣಕ್ಕಿಳಿಯಲಿದ್ದೇವೆ,” ಎಂದು ಛೆಟ್ರಿ ನುಡಿದರು.

Related Articles