Saturday, October 12, 2024

ಸ್ಮಾರ್ಟ್‌ ಸಿಟಿ ತಮುಕೂರಿಗೆ ಸ್ಮಾರ್ಟ್‌ ಕ್ರೀಡಾಂಗಣ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯಗಳು ಸಿಕ್ಕರೆ ಅವರಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸ್ಮಾರ್ಟ್‌ ಸಿಟಿ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವೊಂದನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಬಹತೇಕ ಪೂರ್ಣಗೊಂಡಿದೆ.

ಸುಮಾರು 52 ಕೋಟಿ ರೂ. ವೆಚ್ಚದಲ್ಲಿ ತುಮಕೂರಿನ ಹೃದಯ ಭಾಗದಲ್ಲಿ ಈ ಕ್ರೀಡಾಂಗಣ ಸಜ್ಜಾಗುತ್ತಿದೆ. ಮೊದಲಿದ್ದ ಕರ್ನಾಟಕ ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಮಹಾತ್ಮಾಗಾಂಧಿ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲಾಗಿದೆ. ಮೊದಲು ಮಣ್ಣಿನ ಅಂಗಣದಿಂದ ಕೂಡಿದ್ದ ಕ್ರೀಡಾಂಗಣ ಈಗ ಅಂತಾರಾಷ್ಟ್ರೀಯ ಗುಣಮಟ್ಟದ ಸಿಂಥಟಿಕ್‌ ಟ್ರ್ಯಾಕ್‌ ಹೊಂದಿದೆ. ಫುಟ್ಬಾಲ್‌ ಅಂಗಣವು ಕೂಡ ಟರ್ಫ್‌ನಿಂದ ಕಂಗೊಳಿಸುತ್ತಿದೆ.

ಹಿಂದೆ ಕಾಂಗ್ರೆಸ್‌ ಸರಕಾರವಿದ್ದಾಗ ಅಂದಿನ ಉಪಮುಖ್ಯಮಂತ್ರಿಯಾಗಿದ್ದ ಶಾಸಕ ಪರಮೇಶ್ವರ್‌ ಅವರು ರಾಜ್ಯ ಸರಕಾರದ ನೆರವಿನಿಂದಲೇ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲು ಯೋಚಿಸಿದ್ದರು.ಶಿಲಾನ್ಯಾಸವೂ ಆಗಿತ್ತು,  ಆದರೆ ನಂತರ ಕೇಂದ್ರ ಸರಕಾರ ತುಮಕೂರು ನಗರವನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಘೋಷಿಸಿದ ನಂತರ ಯೋಜನೆ ಸ್ಮಾರ್ಟ್‌ ಸಿಟಿ ಯೋಜನೆಗೆ ಸೇರ್ಪಡೆಯಾಯಿತು.

ಜಿಲ್ಲೆಯ ಪ್ರಮುಖ ಕ್ರೀಡಾಂಗಣ: ಸದ್ಯ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌, ವಾಲಿಬಾಲ್‌ ಹಾಗೂ ಜಿಮ್ನಾಸ್ಟಿಕ್‌ ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತಿದೆ. ಕ್ರೀಡಾಂಗಣಕ್ಕೆ ಹೊಂದಿಕೊಂಡು ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ ಇರುತ್ತದೆ. ಸದ್ಯ ಇಲ್ಲಿ 30 ಕ್ರೀಡಾಪಟುಗಳು (5 ರಿಂದ 10ನೇ ತರಗತಿವರೆಗೆ) ಕ್ರೀಡೆಯ ಜೊತೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಬೆಂಗಳೂರು ನಂತರ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ನಗರ ತುಮಕೂರು. ಕ್ರೀಡಾ ತರಬೇತಿಗಾಗಿ ಕ್ರೀಡಾಪಟುಗಳು ಬೆಂಗಳೂರನ್ನು ಆಶ್ರಯಿಸಿದ್ದಾರೆ. ಈಗ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳು ದೊರೆಯುವುದರಿಂದ ಜಿಲ್ಲೆಯ ಕ್ರೀಡಾಪಟುಗಳು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ. ಇತ್ತೀಚಿಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌, ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ಕೃಷಿಕ್‌ ಪದಕ ಗೆದ್ದು ಸಾಧನೆ ಮಾಡಿರುವುದು ಗಮನಾರ್ಹ. ರಾಜ್ಯ ಮಿನಿ ಒಲಿಂಪಿಕ್ಸ್‌ನಲ್ಲಿ ತುಮಕೂರಿನ ರೋಹನ್‌ ಗೌಡ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು. ಶಿವಪ್ರಸಾದ್‌ ಅವರಂಥ ಉತ್ತಮ ಅಥ್ಲೆಟಿಕ್ಸ್‌ ತರಬೇತುದಾರರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಫುಟ್ಬಾಲ್‌ ಟರ್ಫ್‌: ತುಮಕೂರಿನಲ್ಲಿ ಇದುವರೆಗೂ ಟರ್ಫ್‌ನಿಂದ ಕೂಡಿದ ಫುಟ್ಬಾಲ್‌ ಅಂಕಣ ಇರಲಿಲ್ಲ. ಆದರೆ ಸ್ಮಾರ್ಟ್‌ ಸಿಟಿ ಯೋಜನೆಯಿಂದಾಗಿ ಜಿಲ್ಲೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್ಬಾಲ್‌ ಕ್ರೀಡಾಂಗಣ ದೊರೆತಂತಾಗಿದೆ. ಇದರಿಂದಾಗಿ ಯುವ ಪ್ರತಿಭೆಗಳಿಗೆ ತರಬೇತಿ ನೀಡಲು ಮತ್ತು ಜಿಲ್ಲಾ ಮಟ್ಟದ ಫುಟ್ಬಾಲ್‌ ಟೂರ್ನಿಗಳನ್ನು ನಡೆಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಬಲ್ಲ ಪ್ರತಿಭೆಗಳನ್ನು ಬೆಳೆಸಬಹುದು.

400 ಮೀ. ಟ್ರ್ಯಾಕ್‌: ತಮಕೂರಿನಲ್ಲಿ ಅಪಾರ ಮಟ್ಟದಲ್ಲಿ ಅಥ್ಲೀಟ್‌ಗಳಿದ್ದಾರೆ. ಹೆಚ್ಚಿನವರು ಗ್ರಾಮೀಣ ಪ್ರತಿಭೆಗಳು. ಇವರಿಗೆ ಉತ್ತಮ ರೀತಿಯಲ್ಲಿ, ಉತ್ತಮ ಟ್ರ್ಯಾಕ್‌ನಲ್ಲಿ ತರಬೇತಿ ನೀಡಿದರೆ ಯಶಸ್ಸು ಸಿಗುವುದು ಖಚಿತ ಎಂಬುದನ್ನು ಅರಿತ ಸರಕಾರ ಅಗತ್ಯ ಇರುವ ಸಿಂಥಟಿಕ್‌ ಟ್ರ್ಯಾಕ್‌ ಅಳವಡಿಸುತ್ತಿದೆ. 400 ಮೀ. ಸಿಂಥಟಿಕ್‌ ಟ್ರ್ಯಾಕ್‌ ಸಜ್ಜಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

“ತಮಕೂರಿನ ಕ್ರೀಡಾ ಇತಿಹಾಸದಲ್ಲೇ ಇದೊಂದು ಸುವರ್ಣ ಯುಗ, ಏಕೆಂದರೆ ಒಂದೆಡೆ ಅಗತ್ಯ ಇರುವ ಮೂಲಭೂತ ಸೌಕರ್ಯ ಸಜ್ಜಾಗುತ್ತಿದೆ. ಇನ್ನೊಂದೆಡೆ ರಾಜ್ಯದ ಅಥ್ಲೀಟ್‌ಗಳು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ.ತುಮಕೂರಿನ ಕೃಷಿಕ್‌ ವಿಶ್ವಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ  ಆಯ್ಕೆಯಾಗಿರುವುದು ಸಂಸದ ವಿಚಾರ. ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾದ ಕೂಡಲೇ ಜಿಲ್ಲಾ ಮಟ್ಟದ ಫುಟ್ಬಾಲ್‌, ಅಥ್ಲೆಟಿಕ್ಸ್‌, ಜಿಮ್ನಾಸ್ಟಿಕ್‌ ಸೇರಿದಂತೆ ಇತರ ಕ್ರೀಡಾಕೂಟಗಳನ್ನು ಆಯೋಜಿಸಬಹುದು. ರಾಜ್ಯಮಟ್ಟದ ಕೆಲವು ಕ್ರೀಡಾಕೂಟಗಳ ಆತಿಥ್ಯಕ್ಕೂ ತಮಕೂರು ಸಜ್ಜಾಗಲಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳಿಂದ ಕ್ರೀಡಾಂಗಣ ಹೊಸ ರೂಪ ಕಂಡಿರುವುದು ಜಿಲ್ಲೆಯ ಕ್ರೀಡಾಪಟುಗಳ ಭಾಗ್ಯ,” ಎಂದು ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೋಚ್‌ ಶಿವಪ್ರಸಾದ್‌ ಹೇಳಿದ್ದಾರೆ.

ಆಸನದ ಸೌಲಭ್ಯ: ನೂತನ ಕ್ರೀಡಾಂಗಣದಲ್ಲಿ ಕ್ರೀಡೆಗಳನ್ನು ವೀಕ್ಷಿಸಲು ಪ್ರೇಕ್ಷಕರಿಗಾಗಿ ಸುಮಾರು 7000 ಆಸನಗಳ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಸುಮಾರು 600-800 ಕ್ರೀಡಾಪಟುಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿದುವ ವ್ಯವಸ್ಥೆ ಮಾಡಲಾಗಿದೆ.

ಸ್ಮಾರ್ಟ್‌ ಸಿಟಿ ರ್ಯಾಂಕಿಂಗ್ ತುಮಕೂರಿಗೆ 9ನೇ ಸ್ಥಾನ:

ಕೇಂದ್ರ ಸರಕಾರದ 100 ಸ್ಮಾರ್ಟ್‌ ಸಿಟಿಗಳ  ರ್‍ಯಾಂಕಿಂಗ್ ಪಟ್ಟಿಯಲ್ಲಿ ತುಮಕೂರು 9ನೇ ಸ್ಥಾನದಲ್ಲಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು ಮತ್ತು ಗುಣಮಟ್ಟದ ವರದಿಯ ಆಧಾರದ ಮೇಲೆ ಕೇಂದ್ರ ಸರಕಾರ ಈ ರ್‍ಯಾಂಕ್‌ ನೀಡುತ್ತದೆ. ನಗರದ ಮೂಲಭೂತ ಸೌಕರ್ಯಗಳ ಜೊತೆಯಲ್ಲಿ ಕ್ರೀಡಾ ಸೌಕರ್ಯಗಳಿಗೂ ಒತ್ತು ನೀಡಿರುವುದು ಗಮನಾರ್ಹ. ಭೋಪಾಲ್‌ ನಗರ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದೆ.

 

Related Articles