Thursday, October 10, 2024

ಖೇಲೋ ಇಂಡಿಯಾ: ಈಜಿನಲ್ಲಿ ಕರ್ನಾಟಕ ಚಾಂಪಿಯನ್‌, ಅನೀಶ್‌ ಯಶಸ್ವಿ ಕ್ರೀಡಾಪಟು

ಬೆಂಗಳೂರು: ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ ಈಜಿನಲ್ಲಿ ಕರ್ನಾಟಕ ತಂಡ  ಸಮಗ್ರ ಚಾಂಪಿಯನ್‌ಪಟ್ಟ ಗೆದ್ದುಕೊಂಡಿದ್ದು, ಅನೀಶ್‌ ಗೌಡ ಒಟ್ಟು 6 ಚಿನ್ನದ ಪದಕಗಳನ್ನು ಗೆದ್ದು ಯಶಸ್ವಿ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪುರುಷರ ವಿಭಾಗದಲ್ಲಿ 10 ಚಿನ್ನ, 3 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ಗೆದ್ದ ಕರ್ನಾಟಕ ತಂಡ ಅಗ್ರ ಸ್ಥಾನ ಗೆದ್ದುಕೊಂಡಿತು. ವನಿತೆಯ ವಿಭಾಗದಲ್ಲೂ 9 ಚಿನ್ನ, 8 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನಿಉ ಗೆದ್ದು ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು, ಒಟ್ಟು ಕರ್ನಾಟಕದ ಈಜು ಪಟುಗಳು 19 ಚಿನ್ನ, 11 ಬೆಳ್ಳಿ ಹಾಗೂ  17 ಕಂಚಿನ ಪದಕಗಳೊಂದಿಗೆ ಸಮಗ್ರ ಚಾಂಪಿಯನ್‌ ಕಿರೀಟ ಧರಿಸಿದರು.

ಅಂತಿಮ ದಿನದ ಸ್ಪರ್ಧೆಯಲ್ಲಿ ಕರ್ನಾಟಕದ ಪುರುಷರ 4×100 ಮೀ ಫ್ರೀ ಸ್ಟೈಲ್‌ ರಿಲೇ ತಂಡ 3.35.28ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಸಾಧನೆ ಮಾಡಿತು. ತಂಡದಲ್ಲಿ ಅನೀಶ್‌ ಗೌಡ, ಧ್ಯಾನ್‌ ಬಾಲಕೃಷ್ಣ, ಸಂಭವ್‌ ಹಾಗೂ ಉತ್ಕರ್ಷ್‌ ಪಾಟಿಲ್‌ ಸೇರಿದ್ದಾರೆ. ವನಿತೆಯರ 1500 ಮೀ. ಫ್ರೀ ಸ್ಟೈಲ್‌ನಲ್ಲಿ ಕರ್ನಾಟಕದ ಶ್ರೀನಿ ಬೆಳ್ಳಿ ಗೆದ್ದರು. ಅಶ್ಮಿತ ಚಂದ್ರ ಕಂಚು ಗೆದ್ದರು.

ವನಿತೆಯರ 50ಮೀ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ರಾಜ್ಯದ ವಿಹಿತಾ ನಯನ ಬೆಳ್ಳಿ ಗೆದ್ದರು. ಪುರುಷರ ವಿಭಾಗದಲ್ಲಿ ವಿದಿತ್‌ ಶಂಕರ್‌ ಕಂಚು ಗೆದ್ದರು. ವನಿತೆಯರ 50 ಮೀ. ಫ್ರೀ ಸ್ಟೈಲ್‌ನಲ್ಲಿ ರೀದಿಮಾ ವೀರೇಂದ್ರ ಕುಮಾರ್‌ ಕಂಚಿನ ಪದಕ ಗೆದ್ದರು. ಪುರುಷರ 50ಮೀ ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಸಂಭವ್‌ ಬೆಳ್ಳಿಯ ಸಾಧನೆ ಮಾಡಿದರು. ಪುರುಷರ 200 ಮೀ. ಬಟರ್‌ ಫ್ಲೈನಲ್ಲಿ ಕರ್ನಾಟಕದ ಉತ್ಕರ್ಷ್‌ ಪಾಟಿಲ್‌ ಹಾಗೂ ವನಿತೆಯ ವಿಭಾಗದಲ್ಲಿ ಹಷಿಕಾ ರಾಮಚಂದ್ರ ಕಂಚಿನ ಸಾಧನೆ ಮಾಡಿದರು.

Related Articles