Saturday, October 5, 2024

ತಂದೆಯ ಹಾದಿಯಲ್ಲೇ ಪೆಡಲ್‌ ತುಳಿದು ರಾಜ್ಯಕ್ಕೆ ಕೀರ್ತಿ ತಂದ ಚೈತ್ರ ಬೋರ್ಜಿ

ಸೋಮಶೇಖರ್‌ ಪಡುಕರೆ ಬೆಂಗಳೂರು

ಕ್ರೀಡೆಯಲ್ಲಿ ತಂದೆಯ ಹಾದಿಯಲ್ಲೇ ಸಾಗಿ ಗಂಡು ಮಕ್ಕಳು ಯಶಸ್ಸು ಕಂಡಿರುವುದಕ್ಕೆ ಹಲವಾರು ಉದಾಹಣೆಗಳಿವೆ, ಆದರೆ ತಂದೆಯು ಸಾಧನೆ ಮಾಡಿದ ಕ್ರೀಡೆಯಲ್ಲೇ ತಮ್ಮನ್ನು ಅಳವಡಿಸಿಕೊಂಡು ಹೆಣ್ಣು ಮಕ್ಕಳು ಯಶಸ್ಸು ಕಂಡಿರುವುದು ವಿರಳ. ಅಂಥಹ ವಿರಳ ಪಂಕ್ತಿಯಲ್ಲಿ ಸೇರುತ್ತಾರೆ ಜಮಖಂಡಿಯ ವಿಠ್ಠಲ ವಿ. ಬೋರ್ಜಿ ಅವರ ಮಗಳು ಚೈತ್ರ ಬೋರ್ಜಿ

ಹರಿಯಾಣದ ಪಂಚಕುಲದಲ್ಲಿ ನೆಯುತ್ತಿರುವ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ವಿಠ್ಠಲ ಬೋರ್ಜಿ ಅವರ ಮಗಳು ಚೈತ್ರಾ ಬೋರ್ಜಿ ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ವಿಠ್ಠಲ ಬೋರ್ಜಿ ಚಾಂಪಿಯನ್‌ ಸೈಕ್ಲಿಸ್ಟ್‌: ಕ್ರೀಡಾ ಇಲಾಖೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೈಕ್ಲಿಂಗ್‌ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ವಿಠ್ಠಲ ಬೋರ್ಜಿ ರಾಷ್ಟ್ರೀಯ ಸೈಕ್ಲಿಸ್ಟ್‌. ರಾಷ್ಟ್ರೀಯ ಸೈಕ್ಲಿಂಗ್‌ನಲ್ಲಿ 5 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿರುವ ವಿಠ್ಠಲ ಅವರು ಕ್ರೀಡಾ ಸಾಧನೆಯ ಆಧಾರದ ಮೇಲೆ ಪೊಲೀಸ್‌ ಇಲಾಖೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ ಹುದ್ದೆಯಲ್ಲಿದ್ದವರು. ಕಳೆದ ನಾಲ್ಕು ವರ್ಷಗಳಿಂದ ಕ್ರೀಡಾ ಇಲಾಖೆಯಲ್ಲಿ ಸೈಕ್ಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ರೋಡ್‌ ಸೈಕ್ಲಿಂಗ್‌ನಲ್ಲಿ ಚಿನ್ನ ಹಾಗೂ ಟ್ರ್ಯಾಕ್‌ನಲ್ಲಿ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದವರು. ಕಿರಿಯ ಮಕ್ಕಳಿಗೆ ತರಬೇತಿ ನೀಡುವ ವಿಠ್ಠಲ್‌ ಅವರು ತರಬೇತಿ ನೀಡಿದ 5-6 ಸೈಕ್ಲಿಸ್ಟ್‌ಗಳು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿದ್ದಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿಯವರಾದ ವಿಠ್ಠಲ್‌ ರಾಜ್ಯ ಕಂಡ ಉತ್ತಮ ಸೈಕ್ಲಿಂಗ್‌ ತರಬೇತುದಾರರಲ್ಲಿ ಒಬ್ಬರು. ಈಗ ವಿಠ್ಠಲ್‌ ಅವರಲ್ಲಿ 22 ಮಕ್ಕಳು ಸೈಕ್ಲಿಂಗ್‌ ತರಬೇತಿ ಪಡೆಯುತ್ತಿದ್ದಾರೆ. ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಕರ್ನಾಟಕದಿಂದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ಬಾವನಾ ಪಾಟೀಲ್‌ ಹಾಗೂ ಚೈತ್ರ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ತಂದೆಯಂತೆ ಮಗಳೂ ಚಾಂಪಿಯನ್‌: ಉತ್ತರ ಕರ್ನಾಟಕ ಸೈಕಲ್‌ ಕಣಜ. ಬೀಳಗಿ, ಜಮಖಂಡಿ, ಬಾಗಲಕೋಟ, ಬಿಜಾಪುರ ಜಿಲ್ಲೆಗಳು ರಾಜ್ಯಕ್ಕೆ ಕೀರ್ತಿ ತಂದ ಸೈಕ್ಲಿಸ್ಟ್‌ಗಳಿಂದ ಕೂಡಿದೆ. 18ವರ್ಷದ ಚೈತ್ರ ಅವರು 2021ರಲ್ಲಿ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ 26ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 30ಕಿಮೀ ಟಿಟಿಟಿ ವಿಭಾಗದಲ್ಲಿ 1 ಚಿನ್ನ, 20 ಕಿಮೀ ಐಟಿ ವಿಭಾಗದಲ್ಲಿ ಒಂದು ಕಂಚಿನ ಸಾಧನೆ ಮಾಡಿರುತ್ತಾರೆ. ನಂತರ ಹೈದರಾಬಾದ್‌ನಲ್ಲಿ ನಡೆದ 49ನೇ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 4000ಮೀ. ಟೀಮ್‌ ಪರ್ಸ್ಯುಟ್‌ನಲ್ಲಿ 1 ಚಿನ್ನ ಹಾಗೂ ಟೀಮ್‌ ಸ್ಪ್ರಿಂಟ್‌ನಲ್ಲಿ 1 ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಹಾರಾಷ್ಟ್ರದ ಪನ್ವೆಲ್‌ನಲ್ಲಿ ನಡೆದ 24ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಪದಕ ಹಾಗೂ ರಾಜಸ್ಥಾನದ ಬಿಕನೇರ್‌ನಲ್ಲಿ ನಡೆದ 24ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಈಗ ಖೇಲೋ ಇಂಡಿಯಾದ ಚಿನ್ನದ ಪದಕ. ಹೀಗೆ ತಂದೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಚೈತ್ರ ಮುಂದಿನ ಸ್ಪರ್ಧೆಗಳಲ್ಲಿ ಹಿರಿಯರ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ದಿಲ್ಲಿಯಲ್ಲಿರುವ ಇಂದಿರಾ ಗಾಂಧಿ ಸೈಕಲ್‌ ವೆಲೋಡ್ರೋಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಂತರ sportsmail ಜೊತೆ ಮಾತನಾಡಿದ ಚೈತ್ರ, “ಈ ಸಾಧನೆ ನಿಜವಾಗಿಯೂ ಖುಷಿಕೊಟ್ಟಿದೆ. ನಮ್ಮ ಅಪ್ಪ ನೀಡಿದ ತರಬೇತಿ, ಅಪ್ಪ ನೀಡಿದ ಸೈಕಲ್‌ನಲ್ಲಿ ಈ ಎಲ್ಲ ಪದಕಗಳನ್ನು ಗೆದ್ದಿರುತ್ತೇನೆ. ಇನ್ನು ಮುಂದೆ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿ ಉನ್ನತ ಮಟ್ಟದ ಸಾಧನೆ ಮಾಡುವೆ,” ಎಂದರು.

ಜಮಖಂಡಿಯ ಬಿಎಲ್‌ಡಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿರುವ ಚೈತ್ರ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಲಿ ಎಂಬುದೇ ಕನ್ನಡಿಗರ ಹಾರೈಕೆ.

ಹೆಚ್ಚಿನ ಪ್ರಾಶಸ್ತ್ಯ ಅಗತ್ಯ: ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಂಗ್‌ ಚಾಂಪಿಯನ್ನರಿದ್ದಾರೆ. ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ತರುವುದು ಹೆಚ್ಚಾಗಿ ಇಲ್ಲಿಯ ಸೈಕ್ಲಿಸ್ಟ್‌ಗಳು. ಆದ್ದರಿಂದ ಬಿಜಾಪುರದಲ್ಲಿ ನಡೆಯುತ್ತಿರುವ ಸೈಕಲ್‌ ವೆಲೋಡ್ರೋಮ್‌ ಕಾಮಗಾರಿ ಬೇಗನೆ ಮುಗಿದರೆ ಇಲ್ಲಿಯ ಸೈಕ್ಲಿಸ್ಟ್‌ಗಳು ಟ್ರ್ಯಾಕ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರಿ ರಾಜ್ಯಕ್ಕೆ ಕೀರ್ತಿ ತರುವುದು ಖಚಿತ.

Related Articles