ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕತ್ವ ವಹಿಸಿರುವ ಕರ್ನಾಟಕದ ಆಟಗಾರ ಕರುಣ್ ನಾಯರ್ ಸತತ ಮೂರು ಶತಕ ಸೇರಿದಂತೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಭಾರತ ಕ್ರಿಕೆಟ್ ತಂಡವನ್ನು ಮತ್ತೆ ಸೇರಿಕೊಳ್ಳಲು ಈ ಆಟಗಾರ ಇನ್ನೇನು ಮಾಡಬೇಕೆಂಬ ಪ್ರಶ್ನೆ ಉದ್ಭವಿಸಿದೆ. Karun Nair breaks world record in List A match, what he has to do for select Indian team?
ವಿಜಯ ಹಜಾರೆ ಟ್ರೋಫಿಯಲ್ಲಿ ಸತತ ಮೂರು ಶತಕಗಳನ್ನು ಸಿಡಿಸಿ 13 ವರ್ಷಗಳ ಹಿಂದೆ ನ್ಯೂಜಿಲೆಂಡ್‌ನ ಜೇಮ್ಸ್ ಫ್ರಾಂಕ್ಲಿನ್ ಅವರ ದಾಖಲೆಯನ್ನು ಮುರಿದಿದ್ದಾರೆ. 527 ಇದುವರೆಗಿನ ವಿಶ್ವ ದಾಖಲೆಯಾಗಿತ್ತು. ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ ಈ ದಾಖಲೆಯನ್ನು ಬರೆದಿದ್ದಾರೆ. ಆಡಿರುವ ಐದು ಪಂದ್ಯಗಳಲ್ಲಿ ಕರುಣ್ ನಾಯರ್ ಗಳಿಸಿರುವ ರನ್ 112*, 44*, 163*, 111*, 112. ವಿಶೇಷವೆಂದರೆ ಕರುಣ್ ನಾಯರ್ ಈ ಐತಿಹಾಸಿಕ ದಾಖಲೆಯವನ್ನು ಓಟಾಗದೆ ತಲುಪಿದ್ದಾರೆ. ಅಂತಿಮವಾಗಿ ಬಿಹಾರಿ ರಾಯ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಉತ್ತರ ಪ್ರದೇಶದ 308 ರನ್‌ಗಳ ಸವಾಲಿನ ಮೊತ್ತವನ್ನು ಬೆಂಬತ್ತಿದ ವಿದರ್ಭದ ಪರ ನಾಯಕ ಕರುಣ್ ನಾಯರ್ 101 ಎಸೆತಗಳನ್ನೆದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 112 ರನ್ ಸಿಡಿಸಿ ಜಯ ತಂದಿತ್ತರಲ್ಲದೆ ನೂತನ ದಾಖಲೆ ಬರೆದರು. ಒಟ್ಟು ಐದು ಪಂದ್ಯಗಳಲ್ಲಿ ನಾಯರ್ ಗಳಿಸಿದ ರನ್ 542.
2016ರಲ್ಲಿ ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಕರುಣ್ ನಾಯರ್ ಚೆನ್ನೈನಲ್ಲಿ ಅಜೇಯ 303* ರನ್ ಗಳಿಸಿ ಇತಿಹಾಸ ಬರೆದಿದ್ದರು. ಆದರೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅವರನ್ನು ತಂಡದಿಂದ ಕೈ ಬಿಟ್ಟಿತ್ತು. ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವುದು ಇದಕ್ಕೆ ಕಾರಣವಾಗಿತ್ತು. ನಂತರ ಕರ್ನಾಟಕ ಕ್ರಿಕೆಟ್ ತಂಡದಲ್ಲೂ ಅವರು ಸ್ಥಾವನ್ನು ಕಳೆದುಕೊಂಡರು. ಇದರಿಂದಾಗಿ ಅವರು ವಿದರ್ಭ ತಂಡವನ್ನು ಸೇರಿ ತನ್ನ ನೈಜ ಪ್ರದರ್ಶನವನ್ನು ತೋರುವಲ್ಲಿ ಸಫಲರಾದರು. ಕೌಂಟಿ ಕ್ರಿಕೆಟ್‌ನಲ್ಲೂ ಶತಕ ಸಿಡಿಸಿ ಗಮನ ಸೆಳೆದರು. ಆದರೂ ಕರ್ನಾಟಕ ಕ್ರಿಕೆಟ್‌ಗೆ ಅವರು ಬೇಡವಾದರು.
ಈ ಬಾರಿಯ ಐಪಿಎಲ್ ಹರಾಜಿನಲ್ಲೂ ಕರುಣ್ ನಾಯರ್ ಅವರನ್ನು ಫ್ರಾಂಚೈಸಿಗಳು ಕಡೆಗಣಿಸಿದವು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷ ರೂ.ಗೆ ಖರೀದಿಸಿತು. 2017-18ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಡಿದ್ದೇ ಅವರ ಟೆಸ್ಟ್ ಕ್ರಿಕೆಟ್‌ನ ಕೊನೆಯ ಪಂದ್ಯವಾಗಿತ್ತು. ಕರುಣ್ ನಾಯರ್ ಅವರ ಈಗಿನ ಸ್ಥಿರ ಪ್ರದರ್ಶನ ಹಾಗೂ ಭಾರತ ತಂಡದಲ್ಲಿರುವ ಆಟಗಾರರ ವೈಫಲ್ಯವನ್ನು ಕಂಡಾಗ ಇಂಥ ಪ್ರತಿಭಾವಂತ ಆಟಗಾರನಿಗೆ ಮತ್ತೊಮ್ಮೆ ಅವಕಾಶ ನೀಡುವುದು ಸೂಕ್ತವೆನಿಸುತ್ತಿದೆ.