Sunday, September 8, 2024

ಮಿನಿ ಒಲಿಂಪಿಕ್ಸ್‌ ಕ್ರೀಡಾ ಬದುಕಿಗೆ ದಾರಿದೀಪವಾಗಲಿ: ಬೊಮ್ಮಾಯಿ

ಬೆಂಗಳೂರು: ಯುವ ಕ್ರೀಡಾಪಟುಗಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ಸ್‌ ಜಂಟಿಯಾಗಿ ಆಯೋಜಿಸುತ್ತಿರುವ ಕರ್ನಾಟಕ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ ಯುವ ಕ್ರೀಡಾಪಟುಗಳ ಕ್ರೀಡಾ ಬದುಕಿಗೆ ದಾರಿದೀಪವಾಗಲಿ ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದರು.

ಸೋಮವಾರ ಸಂಜೆ  ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಎರಡನೇ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. “ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತದೆ. ಅವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕ್ರೀಡಾ ಸ್ಫೂರ್ತಿ ಎಂಬುದು ಬದುಕಿಗೆ ದಾರಿದೀಪವಿದ್ದಂತೆ. ಬದುಕನ್ನು ಕೂಡ ನಾವು ಕ್ರೀಡಾಮನೋಭಾವದಿಂದ ನೋಡಬೇಕು. ರಾಜ್ಯ ಸರಕಾರವು ಕ್ರೀಡೆಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಉದ್ಯಾನನಗರಿ, ಸಿಲಿಕಾನ್‌ ಸಿಟಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರವು ಮುಂದಿನ ದಿನಗಳಲ್ಲಿ ಕ್ರೀಡಾ ನಗರಿ ಎಂಬ ಗೌರವಕ್ಕೂ ಪಾತ್ರವಾಗಲಿದೆ,” ಎಂದು ಹೇಳಿದರು.

ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಾಂದರ್ಭಿಕವಾಗಿ ಮಾತನಾಡಿ ಯುವ ಕ್ರೀಡಾಪಟುಗಳಿಗೆ ಶುಭಕೋರಿದರು.

ರಾಜ್ಯದಲ್ಲಿರುವ ಕಿರಿಯ ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುವ ಸಲುವಾಗಿ ದೇಶದಲ್ಲೇ ಮೊದಲ ಬಾರಿಗೆ ಹುಟ್ಟಿಕೊಂಡ ಮಿನಿ ಒಲಿಂಪಿಕ್ಸ್‌ ಮೊದಲ ಆವೃತ್ತಿ 2020ರಲ್ಲಿ ನಡೆದಿತ್ತು.

ರಾಜ್ಯ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಮಾತನಾಡಿ, “ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಪಟ್ಟಿಯಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದಾರೆ. ಅದಕ್ಕೆ ಪೂರಕವಾದ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ನಾವೆಲ್ಲರೂ ಈ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಶ್ರಮಿಸಬೇಕು. ಮಿನಿ ಒಲಿಂಪಿಕ್ಸ್‌ನಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ,” ಎಂದು ಹಾರೈಸಿದರು.

 

ವಿರೋಧ ಪಕ್ಷದ ಉಪನಾಯಕ, ಎಂಎಲ್‌ಸಿ ಹಾಗೂ ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಗೋವಿಂದ ರಾಜ್‌ ಮಾತನಾಡಿ, “ಭವಿಷ್ಯದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಮಿನಿ ಒಲಿಂಪಿಕ್ಸ್‌ ಉತ್ತಮ ವೇದಿಕೆಯಾಗಿದೆ. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಕ್ರೀಡಾಕೂಟದ ಉದ್ದೇಶವಾಗಿದೆ. ಮಕ್ಕಳು ಕ್ರೀಡೆಯತ್ತ ಆಕರ್ಷಿತವಾಗಬೇಕಾದರೆ ಸಾಧಕ ಕ್ರೀಡಾಪಟುಗಳಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿಕ್ರೀಡಾ ಕೋಟದಡಿ ಉದ್ಯೋಗ ಲಭಿಸುವಂತೆ ಸರಕಾರ ಕ್ರಮಕೈಗೊಳ್ಳಬೇಕು,’’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಯುವ ಸಮಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಡಾ. ಶಾಲಿನಿ ರಜನೀಶ್‌, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಡಾ. ಎಚ್‌.ಎನ್‌. ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ. ಅನಂತ ರಾಜು ಹಾಗೂ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

 

ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌ಗೆ 5ಲಕ್ಷ ರೂ. ಬಹುಮಾನ

ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್‌ಕಪ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಐತಿಹಾಸಿಕ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಲಕ್ಷ್ಯಸೇನ್‌ ಅವರಿಗೆ ರಾಜ್ಯ ಸರಕಾರವು 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ 14 ಬಾರಿ ಪ್ರಶಸ್ತಿ ಗೆದ್ದಿರುವ ಇಂಡೋನೇಷ್ಯಾ ತಂಡವನ್ನು 3-0 ಅಂತರದಲ್ಲಿ ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತ್ತು.

ಲಕ್ಷ್ಯಸೇನ್‌ ಅವರು ಉತ್ತರಾಖಂಡ್‌ ಮೂಲದವರಾಗಿದ್ದರೂ ಬೆಂಗಳೂರಿನಲ್ಲಿರುವ ಪ್ರಕಾಶ್‌ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಾಜಿ ಚಾಂಪಿಯನ್‌ ಕನ್ನಡಿಗ ವಿಮಲ್‌ ಕುಮಾರ್‌ ಅವರು ತರಬೇತಿ ನೀಡುತ್ತಿದ್ದಾರೆ.

Related Articles