Saturday, July 27, 2024

33 ವರ್ಷಗಳ ನಂತರ ಐತಿಹಾಸಿಕ ಬೆಳ್ಳಿ ಗೆದ್ದ ಕರ್ನಾಟಕ ಮಹಿಳಾ ಹಾಕಿ ತಂಡ

ಸೋಮಶೇಖರ್‌ ಪಡುಕರೆ ಬೆಂಗಳೂರು

ಭೋಪಾಲದಲ್ಲಿ ನಡೆದ 12ನೇ ಹಾಕಿ ಇಂಡಿಯಾ ಸೀನಿಯನ್‌ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕರ್ನಾಟಕ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ.

ಮೈಸೂರಿನ ಕ್ರೀಡಾ ಹಾಸ್ಟೆಲ್‌ ಆಟಗಾರರಿಂದ ಕೂಡಿರುವ ಹಾಕಿ ತಂಡ ಫೈನಲ್‌ ಪಂದ್ಯದಲ್ಲಿ ಒಡಿಶಾ ವಿರುದ್ಧ 0-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿ ಬೆಳ್ಳಿ ಪದಕ ಗೆದ್ದಿದೆ. 33 ವರ್ಷಗಳ ಬಳಿಕ ಕರ್ನಾಟಕ ಮಹಿಳಾ ತಂಡವು ರಾಷ್ಟ್ರೀಯ ಹಾಕಿಯಲ್ಲಿ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ.

ಕರ್ನಾಟಕ ತಂಡದ ಈ ಐತಿಹಾಸಿಕ ಸಾಧನೆಗೆ, ಹಾಕಿ ಕರ್ನಾಟಕದ ಕಾರ್ಯದರ್ಶಿ, ಒಲಿಂಪಿಯನ್‌ ಡಾ. ಎ.ಬಿ. ಸುಬ್ಬಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.

“ಇದೊಂದು ಅದ್ಭುತ ಸಾಧನೆ, 33 ವರ್ಷಗಳ ನಂತರ ನಮ್ಮ ಮಹಿಳಾ ಹಾಕಿ ತಂಡವು ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದೆ. ತಂಡದ ಪ್ರತಿಯೊಬ್ಬ ಆಟಗಾರರು ಮತ್ತು ತರಬೇತುದಾರರಿಗೆ ಅಭಿನಂದನೆಗಳು,” ಎಂದು ಡಾ. ಎ.ಬಿ. ಸುಬ್ಬಯ್ಯ ಅವರು ತಿಳಿಸಿದ್ದಾರೆ.

 

ಉತ್ತಮ ರೀತಿಯಲ್ಲಿ ತರಬೇತಿ ನೀಡಿದರೆ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಮೈಸೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನ್‌  ಹಾಕಿ ಕೋಚ್‌ ಸುಂದರೇಶ್‌ ಉತ್ತಮ ಉದಾಹಣೆ.

ಇತ್ತೀಚಿಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವನಿತೆಯ ಹಾಕಿ ತಂಡ ಬೆಳ್ಳಿ ಪದಕ ಗೆದ್ದಿತ್ತು. ಈ ತಂಡದಲ್ಲಿ ಆಡಿದ ಆಟಗಾರ್ತಿಯರಲ್ಲಿ ಹತ್ತು ಮಂದಿ ಆಟಗಾರ್ತಿಯರು ಮೈಸೂರಿನ ಡಿವೈಇಎಸ್‌ ಕ್ರೀಡಾ ಹಾಸ್ಟೆಲ್‌ನವರು.

ಇಬ್ಬರು ಆಟಗಾರ್ತಿಯರಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಪರೀಕ್ಷೆಗೆ ಹಾಜರಾಗಬೇಕಾದ ಕಾರಣ ಕೇವಲ ಹತ್ತು ಆಟಗಾರ್ತಿಯರು ಪಾಲ್ಗೊಂಡರು. ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರು, ಜೂನಿಯರ್‌ ನ್ಯಾಷನಲ್ಸ್‌ನಲ್ಲಿ ಕರ್ನಾಟಕ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿತ್ತು, ಕರ್ನಾಟಕವನ್ನು ಪ್ರತಿನಿಧಿಸಿದ 18 ಆಟಗಾರ್ತಿಯರಲ್ಲಿ 12 ಆಟಗಾರ್ತಿರು ಮೈಸೂರು ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿನಿಯರು.   ಈಗ ರಾಷ್ಟ್ರೀಯ ಸೀನಿಯರ್‌ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪಿ ಉತ್ತಮ ಪ್ರದರ್ಶನ ತೋರಿ, 33 ವರ್ಷಗಳ ಬಳಿಕ ಐತಿಹಾಸಿಕ ಬೆಳ್ಳಿ ಪದಕವನ್ನು ಗೆದ್ದಿದೆ.

ರಾಷ್ಟ್ರೀಯ ಶಿಬಿರದಲ್ಲಿ ನಮ್ಮ ಆಟಗಾರರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದಕ್ಕಾಗಿ ಹಾಕಿ ಇಂಡಿಯಾ ರಾಷ್ಟ್ರೀಯ ಕ್ಯಾಂಪ್‌ ನಡೆಸುತ್ತದೆ, ಈ ಶಿಬಿರದಲ್ಲಿ ಡಿವೈಇಎಸ್‌ನಿಂದ ನಾಲ್ವರು ಆಟಗಾರ್ತಿಯರು ಆರಂಭದಲ್ಲಿ ಸ್ಥಾನ ಪಡೆದಿದ್ದರು. ಅಂಜಲಿ ಎಚ್‌.ಆರ್.‌, ತೇಜಸ್ವಿನಿ, ಚಂದನ ಜೆ ಹಾಗೂ ಅದಿರಾ ಆಯ್ಕೆಯಾದ ಆಟಗಾರ್ತಿಯರು, ಈಗ ಹಾನಸದ ಚಂದನ ಜೆ. ಮಾತ್ರ ತಂಡದಲ್ಲಿ ಮುಂದುವರೆದಿದ್ದಾರೆ.

ಕೀರ್ತಿ ತಂದ ಹಾಕಿ ತಾರೆಯರು:

ಶ್ರಾವ್ಯ ಜಿ.ಬಿ. (ಗೋಲ್‌ಕೀಪರ್) ಶೈನಾ ತೊಂಗಮ್ಮ, ಹೇಮಾ ಎ.ಎಚ್‌, ಅಂಜಲಿ ಎಷ್‌.ಆರ್‌, ಯಾಶಿಕಾ ಎಂಜಿ, ಪೂಜಿತಾ ಬಿ,ಎನ್‌,ಸಂಧ್ಯಾ ಎಸ್‌ಡಿ, ಕಾವ್ಯ ಕೆ.ಆರ್‌, ಅಧಿರಾ ಎಸ್‌, ಪದ್ಮಾವತಿ ಎಸ್.‌ ಇವರೆಲ್ಲರೂ ಮೈಸೂರು ಕ್ರೀಡಾ ಹಾಸ್ಟೆಲ್‌ನ ಆಟಗಾರ್ತಿಯರು.

ಪದ್ಮಾ, ಲಿಖಿತ ಎಸ್‌ಪ, ದೀಪ್ತಿ ಕೆ.ಎ, ಧನುಶ್ರೀ ಪಿ.ಎನ್‌ (ಗೋಲ್‌ಕೀಪರ್).‌ ಶಾಯಾ ಕಾವೇರಮ್ಮ, ನಿಶಾ, ವಿದ್ಯಾ, ಪೂಜಾ.

ಕೋಚ್‌ ಸುಂದರೇಶ್‌: ಮೈಸೂರು ಕ್ರೀಡಾ ಹಾಸ್ಟೆಲ್‌ನಲ್ಲಿ ಹಾಕಿ ಕೋಚ್‌ ಆಗಿ ಕಾರ್ಯವನಿರ್ವಹಿಸುತ್ತಿರುವ ಶಿವಮೊಗ್ಗದ ಸುಂದರೇಶ್‌ ಕರ್ನಾಟಕ ಹಾಕಿ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, “ಗ್ರಾಮೀಣ ಪ್ರದೇಶದ ಪ್ರತಿಭೆಗಳು ಸಿಗುವುದೇ ಕ್ರೀಡಾ ಹಾಸ್ಟೆಲ್‌ಗಳಲ್ಲಿ. ಅವರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದರೆ ಯಶಸ್ಸು ಕಾಣಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.

ಕರ್ನಾಟಕ ಮಹಿಳಾ ಹಾಕಿ ತಂಡದಲ್ಲಿ ಮೈಸೂರು ಡಿವೈಇಎಸ್‌ ತಂಡದ ಹತ್ತು ಆಟಗಾರರು ಇರುವುದು ನಮ್ಮ ಕ್ರೀಡಾ ಇಲಾಖೆಯ ಹೆಮ್ಮೆ. 33 ವರ್ಷಗಳ ನಂತರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆ. ನಮ್ಮ ಮಕ್ಕಳು ಉತ್ತಮ ರೀತಿಯಲ್ಲಿ ಆಡಿದ್ದಾರೆ. ಕೊನೆಯ ಎರಡು ಪೆನಾಲ್ಟಿ ಕಾರ್ನರ್‌ಗಳು ಗೋಲಾಗಿ ರೂಪುಗೊಳ್ಳುತ್ತಿದ್ದರೆ ಫಲಿತಾಂಶ ನಮ್ಮ ಪರವಾಗುತ್ತಿತ್ತು. ಒಡಿಶಾದ ಆಟಗಾರ್ತಿಯರು ಉತ್ತಮವಾಗಿಯೇ ಆಡಿದರು. ಕ್ರೀಡಾ ಹಾಸ್ಟೆಲ್‌ನಲ್ಲಿ ಕಲಿಯುತ್ತಿರುವ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಮಿಂಚಿದರೆ ನಮ್ಮ ಶ್ರಮ ಸಾರ್ಥಕವೆನಿಸುತ್ತದೆ. ಸರಕಾರವೂ ಇನ್ನೂ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಲು ಕಾರಣವಾಗುತ್ತದೆ,” ಎಂದರು.

Related Articles