Saturday, February 24, 2024

ಥಾಮಸ್‌ ಕಪ್‌: ಫೈನಲ್‌ ತಲುಪಿ ಇತಿಹಾಸ ಬರೆದ ಭಾರತ

ಬ್ಯಾಂಕಾಕ್‌: ಡೆನ್ಮಾರ್ಕ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ 3-2 ಅಂತರದಲ್ಲಿ ಜಯ ಗಳಿಸಿದ ಭಾರತದ ಬ್ಯಾಡ್ಮಿಂಟನ್‌ ತಂಡ ಮೊದಲ ಬಾರಿಗೆ ಥಾಮಸ್‌ ಕಪ್‌ ಫೈನಲ್‌ ತಲುಪಿದೆ.

ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ 14 ಬಾರಿ ಚಾಂಪಿಯನ್‌ ಪಟ್ಟ ಗೆದ್ದಿರುವ ಇಂಡೋನೇಷ್ಯಾ ವಿರುದ್ಧ ಸೆಣಸಲಿದೆ. ಇದರೊಂದಿಗೆ ಭಾರತ ಐತಿಹಾಸಿಕ ಬೆಳ್ಳಿ ಪದಕವನ್ನು ಖಚಿತಪಡಿಸಿದೆ.

ಎಚ್‌.ಎಸ್‌.ಪ್ರಣಾಯ್‌ ನಿರ್ಣಾಯಕ ಸೆಮಿಫೈನಲ್‌ ಪಂದ್ಯದಲ್ಲಿ ರಸ್ಮಾಸ್‌ ಗೆಮ್ಕೆ ವಿರುದ್ಧ ಜಯ ಗಳಿಸುತ್ತಿದ್ದಂತೆ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಪ್ರಣಾಯ್‌ ಆರಂಭದಲ್ಲಿ ಹಿನ್ನಡೆ ಕಂಡಿದ್ದರೂ, ನಂತರ 13-21, 12-9, 21-12 ಅಂತರದಲ್ಲಿ ಜಯ ಗಳಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. 43 ವರ್ಷಗಳ ಬಳಿಕ ಭಾರತ ಫೈನಲ್‌ ಪ್ರವೇಶಿಸಿದೆ.

ಆರಂಭದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ ಸೇನ್‌, ವಿಶ್ವದ ನಂಬರ್‌ ಒನ್‌ ಆಟಗಾರನ ವಿರುದ್ಧ ಅದೇ ಪ್ರದರ್ಶನವನ್ನು ತೋರುವಲ್ಲಿ ವಿಫಲವಾದರು. ಸೇನ್‌ 21-13, 21-31 ಅಂತರದಲ್ಲಿ ಸೋಲನುಭವಿಸುವುದರೊಂದಿಗೆ 2016ರ ಚಾಂಪಿಯನ್‌ ತಂಡ 1-0 ಅಂತರದಲ್ಲಿ ಮುನ್ನಡೆಯಿತು.

ನಂತರ ಕಿಮ್‌ ಅಸ್ಟ್ರಪ್‌ ಮತ್ತು ಮಥಾಯಸ್‌ ಕ್ರಿಸ್ಟಿಯನ್‌ಸೆನ್‌ ವಿರುದ್ಧದ ಪಂದ್ಯವನ್ನು ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ 21-18, 21-23, 22-20 ಅಂತರದಲ್ಲಿ ಗೆಲ್ಲುವುದರೊಂದಿಗೆ ಭಾರತ 1-1ರಲ್ಲಿ ಸಮಬಲ ಸಾಧಿಸಿತು.

ಎರಡನೇ ಸಿಂಗಲ್ಸ್‌ ಪಂದ್ಯದಲ್ಲಿ ಶ್ರೀಕಾಂತ್‌ ವಿಶ್ವದ ಮೂರನೇ ರಾಂಕ್‌ ಆಟಗಾರ ಆಂಡ್ರೆಸ್‌ ಆಂಡರ್ಸನ್‌ ವಿರುದ್ಧ 21-18, 12-21, 21-15  ಅಂತರದಲ್ಲಿ ಗೆದ್ದು ಭಾರತಕ್ಕೆ  2-1 ಮುನ್ನಡೆ ನೀಡಿದರು.

ಭಾರತಕ್ಕೆ ಎರಡನೇ ಡಬಲ್ಸ್‌ನಲ್ಲಿ ಸೋಲಿನ ಆಘಾತ. ಕೃಷ್ಣ ಪ್ರಸಾದ್‌ ಮತ್ತು ವಿಷ್ಣುವರ್ಧನ್‌ ಡೆನ್ಮಾರ್ಕ್‌ನ ರಾಸ್ಮಸೆನ್‌ ಮತ್ತು ಫೆಡ್ರಿಕ್‌ ಸೊಗಾರ್ಡ್‌ ಜೋಡಿಯ ವಿರುದ್ಧ 14-21, 13-21 ಅಂತರದಲ್ಲಿ ಸೋಲುವುದರೊಂದಿಗೆ ಪಂದ್ಯ 2-2ರಲ್ಲಿ ಸಮಬಲಗೊಂಡಿತು. ಅಂತಿಮವಾಗಿ ಪ್ರಣಾಯ್‌ ಕೊನೆಯ ಸಿಂಗಲ್ಸ್‌ ಗೆದ್ದು ಭಾರತವನ್ನು ಐತಿಹಾಸಿಕ ಫೈನಲ್‌ಗೆ ಕೊಂಡೊಯ್ದರು.

Related Articles